ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಸಮಾಜದಲ್ಲಿ ಯಾವುದೇ ಭೇದಭಾವ ತೋರದೆ ಶಾಂತಿ, ಸಾಮರಸ್ಯ ಕಾಪಾಡುವವರು ನಿಜವಾದ ಸ್ವಾಮೀಜಿಗಳು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಹೇಳಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮತ್ ರಾಜಗುರುತಿಲಕ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೯ನೆಯ ಜಯಂತಿ ಹಾಗೂ ವಿಚಾರ ಸಂಕಿರಣ ಮತ್ತು ದತ್ತಿ ಕಾರ್ಯಕ್ರಮ, ಸಾಧಕರಿಗೆ ಗೌರವಾಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಶೇ.೯೦ರಷ್ಟು ಸಾಮರಸ್ಯ ಇದೆ ಎಂದರೆ ಅದಕ್ಕೆ ಮಠ ಮಾನ್ಯಗಳು ಹಾಗೂ ಸ್ವಾಮೀಜಿಗಳೇ ಕಾರಣ, ನಮ್ಮ ಸಮಾಜದಲ್ಲಿ ಶಾಂತಿ ಸಾಮರಸ್ಯ ಕಾಪಾಡಿ ಮಾನವ ಕಲ್ಯಾಣಕ್ಕಾಗಿ ದುಡಿದವರು ಅನೇಕ ಸ್ವಾಮೀಗಳಿದ್ದಾರೆ. ಅಂತಹ ಸ್ವಾಮೀಜಿಗಳಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಒಬ್ಬರು ಆದಕ್ಕಾಗಿ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಸ್ವಾಮೀಜಿಗಳಿಂದ ಪ್ರಸ್ತುತ ಸಮಾಜ ಬಯಸುವುದೇ ಸಾಮರಸ್ಯ ಜೀವನ. ಜಾತಿ, ಧರ್ಮ, ದ್ವೇಷಗಳಿಂದ ಏನನ್ನೂ ಸಾಧಿಸಲಾಗದು, ಮೀಸಲಾತಿ ಎನ್ನುವುದು ಅರ್ಹರಿಗೆ ಸಿಗಬೇಕು, ಮೀಸಲಾತಿ ದುರ್ಬಳಕೆಯಾಗಬಾರದು ಎಲ್ಲಾ ಜಾತಿ, ಧರ್ಮಗಳಲ್ಲೂ ಅತ್ಯಂತ ಬಡವರಿದ್ದಾರೆ, ಅಂತಹವರನ್ನು ಗುರುತಿಸಬೇಕಾಗಿದೆ ಎಂದರು. ಮಠ ಮಾನ್ಯಗಳಿಗೆ ದಿನಂಪ್ರತಿ ಸಾವಿರಾರು ಜನರು ಬರುತ್ತಾರೆ, ಅಂತಹವರಲ್ಲಿ ಜಾಗೃತಿ ಮೂಡಿಸಿ, ಸಾಮರಸ್ಯ ಮೂಡಿಸುತ್ತಿರುವವರು ಸ್ವಾಮೀಜಿಗಳು, ಕೆಲ ಸ್ವಾಮೀಜಿಗಳು ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಇದು ಸಮಾಜದಲ್ಲಿ ಆಶಾಂತಿ ಮೂಡಿಸುತ್ತದೆ ಎಂದರು.ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರು ನಾನು ಹಿಂದೂ ಧರ್ಮವನ್ನು ಗೌರವಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಕಾರಣ ಹಿಂದೂ ಧರ್ಮದಲ್ಲಿರುವ ಮೌಲ್ಯಯುತ ಅಂಶಗಳು, ಇಂತಹ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಡೆಯಬೇಕು ಎಂದರು.ಜಿಲ್ಲೆಗೆ ಆಪಾರ ಕೊಡುಗೆ: ಜಿಲ್ಲೆಗೆ ರಾಜೇಂದ್ರ ಶ್ರೀಗಳ ಕೊಡುಗೆ ಎಂಬ ವಿಷಯದ ಬಗ್ಗೆ ಮಾತನಾಡಿದ ಮೈಸೂರಿನ ವಾಗ್ಮಿ ಡಿ.ಎಸ್.ಸದಾಶಿವಮೂರ್ತಿ ಚಾಮರಾಜನಗರ ಜಿಲ್ಲೆಗೆ ರಾಜೇಂದ್ರ ಶ್ರೀ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದರು. ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕ, ಸಾಹಿತ್ಯಕ, ಗ್ರಾಮೀಣಾಭಿವೃದ್ದಿ, ಕೌಟಂಬಿಕ ಸಾಮರಸ್ಯ, ಸರ್ಕಾರಿ ಸೇವೆ, ಆರೋಗ್ಯ ಸೇವೆ ಈ ರೀತಿ ಹತ್ತು ಹಲವು ಕೊಡುಗೆಗಳನ್ನು ನೀಡಿ ಜಿಲ್ಲೆಯ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.೧೯೪೫ರಲ್ಲೇ ಈ ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ವಾಪಿಸಿ ಅನೇಕ ಬಡ ಕುಟುಂಬಳಿಗೆ ಅನ್ನದಾನ, ವಿದ್ಯಾದಾನ ಮಾಡಿದ್ದಾರೆ, ಇಲ್ಲಿ ಕಲಿತ ಸಾವಿರಾರು ಮಂದಿ ಉನ್ನತ ಸ್ಥಾನ ಪಡೆದಿದ್ದಾರೆ. ಸಂಸ್ಥೆಗಳನ್ನು ಸ್ಥಾಪಿಸಿ, ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ, ಮೈಸೂರಿನಲ್ಲಿ ಗುರುಕುಲ ಸ್ಥಾಪಿಸಿ, ಜಿಲ್ಲೆಯ ಅನೇಕ ಮಠಗಳಿಗೆ ಉತ್ತಮ ಮಠಾಧಿಪತಿಗಳನ್ನು ನೀಡಿದ್ದಾರೆ, ಜಿಲ್ಲೆಯ ಪ್ರಗತಿಗೆ ಬಹುಮುಖ ಆಯಾಮದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಮಹದೇಶ್ವರ ಬೆಟ್ಡದ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ರಾಜೇಂದ್ರ ಶ್ರೀ ಹಿಮಾಲಯದ ಎತ್ತರದವರು, ಸಂಸ್ಕಾರ, ಸಂಸ್ಕೃತಿ ಕಲಿಸಿದವರು ಎಂದರು. ಕೇವಲ ವಿದ್ಯೆ ಕಲಿತರೇ ಸಾಲದು, ಇಂದು ಉನ್ನತ ವಿದ್ಯೆ ಕಲಿತವರೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ, ಆದ್ದರಿಂದ ವಿದ್ಯೆಯ ಜೊತೆ ಸಂಸ್ಕಾರ ಕಲಿಸಬೇಕು, ಇದಕ್ಕೆ ನಾಂದಿ ಹಾಡಿದವರು ರಾಜೇಂದ್ರ ಶ್ರೀಗಳು ಎಂದರು. ಶ್ರೀಸಾಮಾನ್ಯರ ಜೀವನೋನ್ನತಿಯಲಿ ರಾಜೇಂದ್ರ ಶ್ರೀಗಳ ದೂರದೃಷ್ಟಿ ಎಂಬ ವಿಷಯದ ಬಗ್ಗೆ ವಿಶ್ರಾಂತ ಪ್ರಾಂಶುಪಾಲ ಡಾ.ಎಂ. ನಂಜುಂಡಪ್ಪ, ವಿಷಯ ಮಂಡನೆ ಮಾಡಿದರು. ಸಿದ್ಧಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಶಸಾಪ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾವಾರಿಧಿ ಡಾಕ್ಟರೇಟ್ ಪದವಿ ಪಡೆದ ಶಾಂತಮಲ್ಲಿಕಾರ್ಜುನಸ್ವಾಮಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ರ್‍ಯಾಂಕ್ ಪಡೆದ ಕುಮಾರಿ ಇಂಚರ ಹಾಗೂ ಕುಮಾರಿ ಪ್ರತೀಕ್ಷಾ, ದತ್ತಿ ದಾಸೋಹಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕದಳಿ ಮಹಿಳಾ ವೇದಿಕೆಯ ವಸಂತಮ್ಮ, ಅನ್ನಪೂರ್ಣ, ವೃಷಬೇಂದ್ರಪ್ಪ, ಬಿ.ಎಂ.ಪ್ರಭುಸ್ವಾಮಿ, ಉಪಸ್ಥಿತರಿದ್ದರು. ಕಾರ್ಯದರ್ಶಿಬಿ.ಎಸ್.ವಿನಯ್ ನಿರೂಪಿಸಿದರು, ಬಿ.ಕೆ.ರವಿಕುಮಾರ್ ಸ್ವಾಗತಿಸಿದರು.