ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಪ್ರೇರಣೆಯಿಂದ ಬಹಜನ ಪಕ್ಷವನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ರಾಜ್ಯ ಬಿಎಸ್‌ಪಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಪ್ರೇರಣೆಯಿಂದ ಬಹಜನ ಪಕ್ಷವನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ರಾಜ್ಯ ಬಿಎಸ್‌ಪಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಪಕ್ಷದ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ಅಂಗವಾಗಿ ಹಮ್ಮಿಕೊಂಡಿದ್ದ ಬಹುಜನರ ವಿಮೋಚನ ಸಂಕಲ್ಪ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಜಾರಿಯಾಗಿ ೭೫ ವರ್ಷ ಕಳೆದರೂ ಅಂಬೇಡ್ಕರ್ ಅವರ ಆಶಯದ ಸಂವಿಧಾನ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ, ಇದಕ್ಕೆ ಕಾರಣ ಇಲ್ಲಿಯವರೆಗೆ ದೇಶವಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಇತರೆ ಪಕ್ಷಗಳು. ಇವರೆಲ್ಲ ಸಂವಿಧಾನ ವಿರೋಧಿಗಳು ಎಂದರು.
ಇದನ್ನೇ ಅರಿತೇ ಕಾನ್ಸಿರಾಂ ಅವರು ವಿದ್ಯಾವಂತ ಯುವಕರು, ಶೋಷಿತರು, ಹಿಂದುಳಿದವರನ್ನು ಸಂಘಟಿಸಿ, ಸಂವಿಧಾನದ ಆಶಯದ ಬಗ್ಗೆ ಜಾಗೃತಿ ಮೂಡಿಸಿ ಬಿಎಸ್‌ಪಿ ಪಕ್ಷವನ್ನು ಸಂಘಟಿಸಿ, ಹಣ, ಹೆಂಡ ಹಂಚದೇ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಅಕ್ಕ ಮಾಯಾವತಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರು ಎಂದರು.ಬಿಎಸ್‌ಪಿ ಪಕ್ಷ ಸ್ಥಾಪನೆಯಾಗುವವರೆಗೂ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ತಮ್ಮ ಪಕ್ಷದ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟಿರಲಿಲ್ಲ, ಜಯಂತಿಯನ್ನು ಮಾಡುತ್ತಿರಲಿಲ್ಲ, ಇನ್ನು ಪರಿನಿಬ್ಬಾಣದ ದಿವವನ್ನು ಆಚರಿಸುವ ಮಾತೆಲ್ಲಿ ಬಂದಿತು ಎಂದರು.
ಅಂಬೇಡ್ಕರ್ ಇರುವವರೆಗೂ ಅವಮಾನಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಒಂದು ದೇಹ ಎರಡು ಕೈಗಳು ಇದ್ದರೀತಿ, ಆರ್‌ಎಸ್‌ಎಸ್ ಸ್ಥಾಪನೆಗೆ ಕಾಂಗ್ರೆಸ್ ಮೂಲದವರೇ ಕಾರಣ, ಇದನ್ನು ಪಕ್ಷದ ಯುವಕರು ಅರಿತುಕೊಳ್ಳಬೇಕು ಎಂದರು.ಬಿಎಸ್‌ಪಿ ಪಕ್ಷ ಸ್ಥಾಪನೆಯಾಗದಿದ್ದರೆ ಇಲ್ಲಿಯವರೆಗೆ ಸಂವಿಧಾನವನ್ನು ಬದಲಾಯಿಸುತ್ತಿದ್ದರು, ಅಂಬೇಡ್ಕರ್ ಅವರನ್ನು ಮರೆಯುತ್ತಿದ್ದರು, ಈಗ ಓಟ್ ಬ್ಯಾಂಕಿಗಾಗಿ ಅಂಬೇಡ್ಕರ್ ಭಾವಚಿತ್ರ ಹಿಡಿದು ನಾಟಕವಾಡುತ್ತಿದ್ದರೆ ಬಿಜೆಪಿಯವರು ಭೀಮನಡಿಗೆ ಎಂಬ ಹೊಸ ನಾಟಕ ಪ್ರಾರಂಭಿಸಿದ್ದಾರೆ ಎಂದರು,
೨೧ ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನ ಕಲ್ಪಸಬೇಕೆಂದು ಅಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದಾಗ ಇದೇ ಕಾಂಗ್ರೆಸ್ಸಿನ ಮೂಲ ಪುರುಷರು, ಹಿಂದೂ ಸಂಘಟನೆಯವರು ವಿರೋಧಿಸಿದ್ದರು, ಇದನ್ನು ಬಿಎಸ್‌ಪಿ ವಿರೋಧಿಸಿ ರಾಷ್ಟ್ರಾದ್ಯಂತ ಚಳುವಳಿ ಆರಂಭಿಸಿದ ಮೇಲೆ ಜಾರಿಗೊಳಿಸಲಾಯಿತು, ಇದನ್ನು ಯುವ ಸಮೂಹ ಅರಿಯಬೇಕು ಎಂದರು.ಅಂಬೇಡ್ಕರ್ ಅವರು ಶಾಲೆಯ ಹೊರಗೆ ಕುಳಿತು ಛಲ ಬಿಡದೇ ಅಕ್ಷರ ಕಲಿತು ಶ್ರೇಷ್ಠ ಸಂವಿಧಾನ ಬರೆದರೋ, ಮತದಾನದ ಹಕ್ಕಿಗಾಗಿ ಎಲ್ಲರನ್ನು ಎದುರು ಹಾಕಿಕೊಂಡು ಹೋರಾಡಿ ಯಶಸ್ವಿಯಾದರೂ ಇದು ನಮ್ಮ ಪಕ್ಷದ ಯುವಕರಿಗೆ ಪ್ರೇರಣೆಯಾಗಿ ದೇಶ ಮತ್ತು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ದೃಢ ಸಂಕಲ್ಪ ಮಾಡಬೇಕು ಎಂದು
ರಾಜ್ಯ ಕಾರ್ಯದರ್ಶಿ ಎನ್. ನಾಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನ ಪೀಠಿಕೆಯನ್ನು ತನ್ನ ಪಕ್ಷದ ಪ್ರಣಾಳಿಕೆಯನ್ನಾಗಿ ಮಾಡಿಕೊಂಡು ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವ ಸಂಕಲ್ಪ ಮಾಡಿರುವ ಪಕ್ಷ ಎಂದರೇ ಅದು ಬಿಎಸ್‌ಪಿ ಪಕ್ಷ ಎಂದರು.ಅಕ್ಕ ಮಾಯಾವತಿಯವರ ಸೂಚನೆ ಮೇರೆಗೆ ಈ ದಿನ ದೇಶಾದ್ಯಂತ ವಲಯ ಮಟ್ಡದ ಕಾರ್ಯಕ್ರಮ ಮಾಡುತ್ತಿದ್ದು ಮೈಸೂರು ವಲಯ ಮಟ್ಟದ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದು, ಜನರಲ್ಲಿ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದರು,
ಜಿಲ್ಲಾಧ್ಯಕ್ಷ ಬಾ.ಮ.ಕೃಷ್ಣಮೂರ್ತಿಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾಉಸ್ತುವಾರಿ ದಂಡಿನಕೆರೆ ಬಸವಣ್ಣ, ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮಂಡ್ಯ ಜಿಲ್ಲಾಧ್ಯಕ್ಷ ಶಿವಶಂಕರ್, ರಾಜ್ಯಕಾರ್‍ಯಕಾರಣಿ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ,,ಮೈಸೂರು ವಲಯದ ಪುಟ್ಟಸ್ವಾಮಿ, ಚೆಲುವರಾಜು, ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.