ಏಡ್ಸ್‌ ಹರಡುವಿಕೆಗೆ ಲೈಂಗಿಕ ಶಿಕ್ಷಣದ ಕೊರತೆ ಕಾರಣ

| Published : Dec 03 2024, 12:34 AM IST

ಸಾರಾಂಶ

ವಿಜಯಪುರ: ಯುವಜನತೆ ಮಾಹಿತಿ ಕೊರತೆ, ನಿರ್ಲಕ್ಷ್ಯದಿಂದಾಗಿ ಎಚ್‌ಐವಿ/ಏಡ್ಸ್‌ ಸೋಂಕಿಗೆ ತುತ್ತಾಗುತ್ತಿದ್ದು, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ ಕುಮಾರ್ ಹೇಳಿದರು.

ವಿಜಯಪುರ: ಯುವಜನತೆ ಮಾಹಿತಿ ಕೊರತೆ, ನಿರ್ಲಕ್ಷ್ಯದಿಂದಾಗಿ ಎಚ್‌ಐವಿ/ಏಡ್ಸ್‌ ಸೋಂಕಿಗೆ ತುತ್ತಾಗುತ್ತಿದ್ದು, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ ಕುಮಾರ್ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ರೋಟರಿ, ಪ್ರಗತಿ ಪ್ರಥಮ ದರ್ಜೆ ಕಾಲೇಜು, ಸಾಯಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ "ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ: ನನ್ನ ಆರೋಗ್ಯ ನನ್ನ ಹಕ್ಕು " ಎಂಬ ಘೋಷ ವಾಕ್ಯದೊಂದಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎಚ್‌ಐವಿ/ಏಡ್ಸ್‌ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಯಿ ಸಮೂಹ ಸಂಸ್ಥೆಗಳ ಕಾನೂನು ಕಾಲೇಜಿನ ಪ್ರಾಂಶುಪಾಲ ಜಿ.ವಿನೋದ್ ಕುಮಾರ್ ಮಾತನಾಡಿ, ಸಂವಿಧಾನ ಪ್ರತಿಯೊಬ್ಬರಿಗೂ ಆರೋಗ್ಯದ ಹಕ್ಕು ಕೊಟ್ಟಿದೆ. ಅದು ದುರುಪಯೋಗವಾಗಬಾರದು, ಲೈಂಗಿಕ ಶಿಕ್ಷಣದ ಕೊರತೆಯಿಂದ ಏಡ್ಸ್‌ ಸೋಂಕು ಹೆಚ್ಚಾಗಿ ಹರಡುತ್ತಿದೆ. ಯೌವನದಲ್ಲಿ ತಂದೆ, ತಾಯಿಯ ಬಗ್ಗೆ ಕೀಳರಿಮೆ, ಜವಾಬ್ದಾರಿ ಕೊರತೆಯಿಂದಲೂ ಅನಾಹುತಗಳು ಸಂಭವಿಸುತ್ತಿವೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಕುರಿತು ತಿಳಿಸುವುದು ಅಗತ್ಯ ಎಂದು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ.ನಾಗೇಶ್ ಮಾತನಾಡಿ, ಹಲವು ದಶಕಗಳಿಂದ ಕಾಡುತ್ತಿರುವ ಎಚ್ಐವಿ ಸೋಂಕು ೨೦೩೦ರೊಳಗೆ ಸಂಪೂರ್ಣ ಹತೋಟಿಗೆ ತರಲು ನಾವೆಲ್ಲರು ಶ್ರಮಿಸಬೇಕಾಗಿದೆ. ಇತ್ತೀಚೆಗೆ ಎಚ್ಐವಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಸೋಂಕು ಕುರಿತು ಸಾರ್ವಜನಿಕರಲ್ಲಿ ಮತ್ತಷ್ಟು ಅರಿವು ಮೂಡಿಸಬೇಕಿದೆ. ಶಾಲಾ, ಕಾಲೇಜು, ಜನಜಂಗುಳಿ, ಕೈಗಾರಿಕಾ ಪ್ರದೇಶಗಳಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

ರೋಟರಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾಗೆ ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಜ್ಞಾನೇಂದ್ರಪ್ಪ, ಸುಮಾ, ಮಹಾಲಕ್ಷ್ಮೀ, ವಿಮಲಾಬಾಯಿ, ಪಾರ್ವತಮ್ಮ, ಶ್ರೀಲತಾ, ಆರ್.ಶೆಟ್ಟಿನಾಯಕ್, ಶಾರದಮ್ಮ ಅವರನ್ನು ಸನ್ಮಾನಿಸಿದರು.

ತಾಲೂಕು ಆರೋಗ್ಯಾಧಿಕಾರಿ ಸಂಜಯ್, ರೋಟರಿ ಸಂಸ್ಥೆ ಅಧ್ಯಕ್ಷ ಮಹೇಶ್, ಪ್ರಗತಿ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ್, ರೋಟರಿ ಶಾಲೆ ಮುಖ್ಯಶಿಕ್ಷಕಿ ಮಂಜುಳಾ, ಪ್ರೇಮಾನಾಗರಾಜಪ್ಪ, ವೀಣಾನಟಶೇಖರ್, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

(ಫೋಟೊ ಕ್ಯಾಪ್ಷನ್‌)

ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಸಂಜಯ್, ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಎಚ್‌ಐವಿ/ಏಡ್ಸ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.