ಗದಗ: ಶಿಕ್ಷಕರು ಮತ್ತು ಶಿಷ್ಯರ ನಡುವಿನ ಸಂಬಂಧ ಅಮೂಲ್ಯವಾಗಿದ್ದು, ಕಳೆದ 42 ವರ್ಷಗಳ ನಿರಂತರ ಬಾಂಧವ್ಯ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ದ್ವಿಭಾಷಾ ಮಾಧ್ಯಮ ಮಕ್ಕಳ ಶಾಲೆಯ ಸಭಾಂಗಣದಲ್ಲಿ 1983- 84ನೇ ಸಾಲಿನ 10ನೇ ತರಗತಿ ಕಲಿತ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದಿಂದ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಗುರು ಶಿಷ್ಯರ ನಡುವಿನ ಬಾಂಧವ್ಯವೇ ಕ್ಷೀಣಿಸುತ್ತಿರುವ ಇಂದಿನ ತಂತ್ರಜ್ಞಾನ ಕಾಲದಲ್ಲಿ 42 ವರ್ಷಗಳ ನಂತರ ತಮ್ಮ ಜೀವನದ ಭವಿಷ್ಯಕ್ಕೆ ದಾರಿದೀಪವಾಗಿರುವ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮವು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಈ ಸಂಪ್ರದಾಯ ಎಲ್ಲ ಮಕ್ಕಳಲ್ಲಿ ಬೆಳೆದು ಬರಬೇಕು ಎಂದರು.ಗದಗ ಗ್ರಾಮೀಣ ಬಿಇಒ ಬಿ.ವಿ. ನಡುವಿನಮನಿ ಮಾತನಾಡಿ, ಈ ಕಾರ್ಯಕ್ರಮವು ಶಿಕ್ಷಕರ ಜೀವಮಾನದ ಸಮರ್ಪಣೆಗೆ ಹೃತ್ಪೂರ್ವಕ ಗೌರವವಾಗಿ ನಿಂತಿದ್ದು, ಇದು ಇಡೀ ಸಮುದಾಯಕ್ಕೆ ಸ್ಮರಣಿಯ ಮತ್ತು ಅರ್ಥಪೂರ್ಣ ಆಚರಣೆಯಾಗಿದೆ ಎಂದರು. ಈ ವೇಳೆ ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಶ್ರೀಗಳು, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಂಕರ ಹಡಗಲಿ ಮಾತನಾಡಿದರು.ನಿವೃತ್ತ ಶಿಕ್ಷಕರಾದ ಯು.ಎಸ್. ಬೆಂತೂರ, ವಿ.ಐ. ಬಡಿಗೇರ, ವಿ.ಎಸ್. ಘಳಗಿ, ಎಂ.ಎಲ್. ತಳವಾರ ಹಾಗೂ ಸಮಾಜಮುಖಿ ಕಾರ್ಯ ಮಾಡಿದ ಈರಪ್ಪ ಕುದರಿ ಸೇರಿದಂತೆ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಭಾಪುರದ ಮಂಜುನಾಥ ಡೋಣಿ ಅವರು ಸಣ್ಣವೀರಪ್ಪ ಬಣವಿ ಅವರ ಕುಟುಂಬದ ಸಹಕಾರದೊಂದಿಗೆ ಪ್ರಕಟಿಸಿದ ರಚಿಸಿದ ಬಾಗಿಲು ಬುತ್ತಿ ಎಂಬ ಕಾವ್ಯ ಕೃತಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.ಜಿಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಸಿದ್ಧಲಿಂಗೇಶ್ವರ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್. ಪೂಜಾರ, ಅಶೋಕ ಬೂದಿಹಾಳ, ಪೀರಸಾಬ ನದಾಫ ಇದ್ದರು. ಮಧು ಅಂಬಕ್ಕಿ, ಗಂಗಮ್ಮ ಹಿರೇಮಠ ಪ್ರಾರ್ಥಿಸಿದರು. ಡಿ.ಎಸ್. ಗಡಾದ, ವಿಜಯಲಕ್ಷ್ಮೀ ನೀರಲಗಿ ನಿರೂಪಿಸಿದರು. ಸಣ್ಣವೀರಪ್ಪ ಬಣವಿ ವಂದಿಸಿದರು.