ಕನ್ನಡಪ್ರಭ ವಾರ್ತೆ ಮುಧೋಳಪೊಲೀಸ್ ಮತ್ತು ಪ್ರೆಸ್ (ಮಾಧ್ಯಮ) ನಡುವಿನ ಸಂಬಂಧವು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಾರ್ವಜನಿಕರಿಗೆ ನಿಖರ ಮಾಹಿತಿ ತಲುಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಮುಧೋಳ ಸಿಪಿಐ ಎಂ.ನಾಗರಡ್ಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಪೊಲೀಸ್ ಮತ್ತು ಪ್ರೆಸ್ (ಮಾಧ್ಯಮ) ನಡುವಿನ ಸಂಬಂಧವು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಾರ್ವಜನಿಕರಿಗೆ ನಿಖರ ಮಾಹಿತಿ ತಲುಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಮುಧೋಳ ಸಿಪಿಐ ಎಂ.ನಾಗರಡ್ಡಿ ಹೇಳಿದರು.ನಗರದ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು. ಕೆಲವು ಸೂಕ್ಷ್ಮ ಪ್ರಕರಣಗಳಲ್ಲಿ ಮಾಧ್ಯಮಗಳು ತನಿಖೆಯ ಹಂತದಲ್ಲಿಯೇ ಅತಿ ಹೆಚ್ಚು ವಿವರಗಳನ್ನು ಪ್ರಸಾರ ಮಾಡುವುದರಿಂದ ತನಿಖೆಗೆ ಹಿನ್ನಡೆಯಾಗುವ ಸಾದ್ಯತೆಗಳಿವೆ ಎಂದು ಹೇಳಿದ ಅವರು ಮಾಧ್ಯಮ ಗಳು ಪೊಲೀಸ್ ರ ಒಳ್ಳೆಯ ಕೆಲಸಗಳನ್ನು ಶ್ಲಾಘಿಸುವುದರ ಜೊತೆಗೆ, ಪೊಲೀಸ್ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರ, ಕಾನೂನು ಉಲ್ಲಂಘನೆಗಳ ಮೇಲೆ ಕಣ್ಣಿಟ್ಟು ಜನಪರವಾಗಿ ಧ್ವನಿ ಎತ್ತುತ್ತವೆ ಇದು ಪೊಲೀಸ್ ವ್ಯವಸ್ಥೆಯನ್ನು ಹೆಚ್ಚು ಜವಾಬ್ದಾರಿಯುತವಾಗಿಡುವಂತೆ ಮಾಡುತ್ತದೆ ಎಂದು ಹೇಳಿದರು.
ಮುಧೋಳ ನಗರ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವದರಿಂದ ಗಣೇಶೋತ್ಸವ ಶಾಂತಿಯುತವಾಗಿ ಆಚರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ, ಗಣೇಶೋತ್ಸವ ಆಚರಣೆ ಸಮಿತಿಯವು ಡಿಜೆ ಬಳಸದಂತೆ ಸುಪ್ರೀಂ ಕೋರ್ಟ್ ಆದೇಶ ಮತ್ತು ಕಾನೂನು ನಿಯಮಾವಳಿ ಅನ್ವಯ ಸಂಘಟಕರಿಗೆ ನೋಟಿಸ್ ನೀಡಲಾಗಿದೆ, ಸೌಹಾರ್ದತೆಗೆ ಧಕ್ಕೆ ತರುವ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.ನಗರದಲ್ಲಿ ಮಾದಕ ದ್ರವ್ಯ ಜಾಲ ತಡೆಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಸಾರ್ವಜನಿಕರು ಅಪರಾಧ ಕೃತ್ಯಗಳ ಬಗ್ಗೆ ನೇರವಾಗಿ ಅಥವಾ ಫೋನ್ ಮೂಲಕ ಮಾಹಿತಿ ನೀಡಬೇಕು, ಮಾಹಿತಿದಾರರ ವಿವರ ಗೌಪ್ಯವಾಗಿಡಲಾಗುವುದು ಎಂದರು.
ನೂತನ ಪಿಎಸ್ಐ ಶಿವಾನಂದ ಕಾರಜೋಳ ಮಾತನಾಡಿ ನಗರದಲ್ಲಿ ಅವೈಜ್ಞಾನಿಕವಾಗಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು, ಸಮಾಜ ತಿದ್ದುವುದು ನಮ್ಮ ಉದ್ದೇಶ, ಇಲಾಖೆಯು ದಿನದ 24 ಗಂಟೆ ಸಾರ್ವಜನಿಕ ಸೇವೆಗೆ ಲಭ್ಯವಿರುತ್ತೇವೆ, ಅನ್ಯಾಯ, ದೌರ್ಜನ್ಯದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಾಗುವುದು, ಪೊಲೀಸ್ ಇಲಾಖೆ ನಿರ್ದಿಷ್ಟ ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಯನ್ನು ಮಾತ್ರ ತಿದ್ದಲು ಸಾಧ್ಯ ಆದರೆ ಪತ್ರಿಕೆಯಲ್ಲಿ ಪ್ರಕಟವಾಗುವ ಒಂದು ವರದಿ ಲಕ್ಷಾಂತರ ಜನರಲ್ಲಿ ಜಾಗೃತಿ ಮೂಡಿಸಿ ತಿದ್ದುವ ಶಕ್ತಿ ಹೊಂದಿದೆ, ಮುಧೋಳದ ಪತ್ರಕರ್ತರು ಆಡಳಿತದೊಂದಿಗೆ ಹೊಂದಿರುವ ಸ್ನೇಹಪರ ಬಾಂಧವ್ಯ ಮತ್ತು ಸಮಾಜದ ಲೋಪ ದೋಷಗಳನ್ನು ಸುಧಾರಣಾತ್ಮಕವಾಗಿ ಸರ್ಕಾರದ ಗಮನಕ್ಕೆ ತರುವ ಕೌಶಲ್ಯ ಅಭಿನಂದನಾರ್ಹ, ಪೊಲೀಸ್ ಇಲಾಖೆಯ ಜನಪರ ಕಾರ್ಯಗಳು ಪ್ರಚಾರದ ಕೊರತೆಯಿಂದ ಜನರಿಗೆ ತಲುಪುತ್ತಿಲ್ಲ, ಪತ್ರಕರ್ತರ ಸಹಕಾರದೊಂದಿಗೆ ಮಾಹಿತಿಯನ್ನು ಜನರಿಗೆ ತಲುಪಿಸಲು ಶ್ರಮಿಸಲಾಗುವುದು ಎಂದರು.ಕಾನಿಪ ಸಂಘದ ತಾಲೂಕು ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ನಗರದಲ್ಲಿ ಅನಧಿಕೃತ ಪತ್ರಕರ್ತರ ಹಾವಳಿ, ಸಂಚಾರ ಕಿರಿಕಿರಿ, ಅಪ್ರಾಪ್ತರ ಬೈಕ್ ಚಾಲನೆ ಸೇರಿದಂತೆ ಪ್ರಮುಖ ಸಮಸ್ಯೆಗಳತ್ತ ಅಧಿಕಾರಿಗಳ ಗಮನ ಸೆಳೆದರು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಶೀಘ್ರ ಕ್ರಮದ ಭರವಸೆ ನೀಡಿದರು.
ಇದೇ ವೇಳೆ ಸಿಪಿಐ ಎಂ.ನಾಗರಡ್ಡಿ ಮತ್ತು ಪಿಎಸ್ಐ ಶಿವಾನಂದ ಕಾರಜೋಳ ಅವರನ್ನು ಕಾನಿಪ ಸಂಘದಿಂದ ಸನ್ಮಾನಿಸಲಾಯಿತು.ಕಾನಿಪ ಸಂಘದ ಗೌರವ ಅಧ್ಯಕ್ಷ ಅಶೋಕ ಕುಲಕರ್ಣಿ, ಉಪಾಧ್ಯಕ್ಷ ವಿಶ್ವನಾಥ ಮುನವಳ್ಳಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಬಬಲಾದಿ, ಪ್ರಧಾನ ಕಾರ್ಯದರ್ಶಿ ಎಂ.ಎಚ್.ನದಾಫ್, ಕೋಶಾಧಿಕಾರಿ ಗಣೇಶ ಮೇತ್ರಿ, ಕಾರ್ಯದರ್ಶಿಗಳಾ ಬಿ.ಎಚ್.ಬೀಳಗಿ, ಸಿದ್ದು ಹೂಗಾರ, ಸದಸ್ಯರಾದ ವೆಂಕಟೇಶ ಗುಡೆಪ್ಪನವರ, ಫೀರಸಾಬ ನದಾಫ್, ಹಸನಡೊಂಗ್ರಿ ಮಹಾಲಿಂಗಪುರ, ಮಹಾಂತೇಶ ಕರೆಹೊನ್ನ, ಬಂದೇನವಾಜ ರಾಮದುರ್ಗ, ಗೋವಿಂದಪ್ಪ ತಳವಾರ, ಜಗದೀಶ ಜೀರಗಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾಜದಲ್ಲಿ ನಡೆಯುವ ಯಾವುದೇ ಅಪರಾಧಗಳು, ಸೈಬರ್ ವಂಚನೆಗಳು ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ರು ಮಾಧ್ಯಮಗಳ ಸಹಾಯ ವನ್ನು ಪಡೆದುಕೊಳ್ಳಬೇಕಾಗುತ್ತದೆ, ಪತ್ರಿಕೆಯು ಇಂತಹ ವಿಷಯಗಳ ಕುರಿತು ಜಾಗೃತಿ ಮೂಡಿಸುವ ವಿಶೇಷ ವರದಿಗಳನ್ನು ನಿರಂತರವಾಗಿ ಪ್ರಕಟಿಸುತ್ತವೆ. ಪ್ರಮುಖ ಪ್ರಕರಣಗಳನ್ನು ಭೇದಿಸಿದಾಗ ಅಥವಾ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸ್ ರು ಅಧಿಕೃತ ಪ್ರೆಸ್ ಮೀಟ್ ನಡೆಸಿ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ನಿಖರವಾದ ಮಾಹಿತಿಯನ್ನು ತಲುಪಿಸುತ್ತಾರೆ.- ಎಂ. ನಾಗರಡ್ಡಿ, ಸಿಪಿಐ, ಮುಧೋಳ