ಮಹಾಂತೇಶ ವಿರಚಿತ ‘ಮುಖ ಪುಸ್ತಕದ ಮರೆಯದ ಮುಖಗಳು’ ಕೃತಿ ಬಿಡುಗಡೆ

| Published : Oct 07 2024, 01:42 AM IST

ಸಾರಾಂಶ

ಯುವ ಜನತೆ ಚಾರಿತ್ರಿಕ ಪ್ರಜ್ಞೆಯ ಸತ್ಯವನ್ನು ಕಳೆದು ಕೊಂಡಿದ್ದಾರೆ. ಹಾಗಾಗಿ, ಅವರಿಗೆ ವರ್ತಮಾನ ಅರ್ಥವಾಗುತ್ತಿಲ್ಲ ಎಂದು ಚಿಂತಕ ಡಾ.ಎಸ್‌.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯುವ ಜನತೆ ಚಾರಿತ್ರಿಕ ಪ್ರಜ್ಞೆಯ ಸತ್ಯವನ್ನು ಕಳೆದು ಕೊಂಡಿದ್ದಾರೆ. ಹಾಗಾಗಿ, ಅವರಿಗೆ ವರ್ತಮಾನ ಅರ್ಥವಾಗುತ್ತಿಲ್ಲ ಎಂದು ಚಿಂತಕ ಡಾ.ಎಸ್‌.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಶನಿವಾರ ಮೈಸೂರಿನ ಕವಿತಾ ಪ್ರಕಾಶನ ಪ್ರಕಟಿಸಿರುವ ಡಾ। ಮಹಾಂತೇಶ ಬಿರಾದಾರ್‌ ಅವರ ‘ಮುಖ ಪುಸ್ತಕದ ಮರೆಯದ ಮುಖಗಳ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವ್ಯಾಟ್ಸ್‌ ಆ್ಯಪ್‌, ಫೇಸ್‌ ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳನ್ನೇ ಹಬ್ಬಿಸುತ್ತಾ ಯುವ ಮನಸುಗಳನ್ನು ರೋಗಗಸ್ಥ ಸ್ಥಿತಿಗೆ ತಳ್ಳಲಾಗುತ್ತಿದೆ. ದೇಶದ ಚರಿತ್ರೆಯು ಸುಳ್ಳಿನ ಚರಿತ್ರೆಯಾಗಿ, ತಿರುಚಲ್ಪಟ್ಟ ಚರಿತ್ರೆಯಾಗಿ ಯುವಕರಿಗೆ ಬೋಧನೆಯಾಗುತ್ತಿದೆ. ಇದರಿಂದ ಸಾಮಾಜಿಕ ವಾತಾವರಣವೇ ಹಾಳಾಗುತ್ತಿವೆ.

ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಆಗುತ್ತಿರುವ ಈ ಸಂದರ್ಭದಲ್ಲಿ ಮಾದರಿ ರೀತಿಯಲ್ಲಿ ಮಹಾಂತೇಶ ಬಿರಾದಾರ್‌ ಬಳಕೆ ಮಾಡಿಕೊಂಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಯುಕವರು ಹೆಚ್ಚಾಗಿ ಬಳಸಿವ ಫೇಸ್‌ ಬುಕ್‌ ನಲ್ಲಿ ಸುತ್ತಮುತ್ತಲಿನವರ ಸಾಧನೆಗಳನ್ನು ಸಂಕ್ಷಿಪ್ತ ಬರಹಗಳೊಂದಿಗೆ ತಿಳಿಸಿದಾಗ ಯುವಕರಿಗೆ ಆತ್ಮ ವಿಶ್ವಾಸ ಮೂಡಲಿದೆ. ದೊಡ್ಡ ದೊಡ್ಡ ಪುಸಕ್ತ ಲೇಖನಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಚಿಕ್ಕ ಚಿಕ್ಕ ಲೇಖನಗಳನ್ನು ಓದಿ ಮನನ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ. ಅಂತಹ ಲೇಖನಗಳನ್ನು ಮಹಾಂತೇಶ ಬಿರಾದಾರ್‌ ಬರೆದಿದ್ದಾರೆ ಎಂದು ಹೇಳಿದರು.

ಪುಸಕ್ತ ಪರಿಚಯ ನೀಡಿದ ಲೇಖಕ ರಂಜಾನ್‌ ದರ್ಗಾ, ಮನುಷ್ಯರನ್ನು ಮನುಷ್ಯರಾಗಿ ನೋಡುವ ಗುಣವನ್ನು ಕಳೆದು ಕೊಳ್ಳುತ್ತಿದ್ದೇವೆ. ಸಕರಾತ್ಮಕ ಚಿಂತನೆ ಬೆಳೆಸಿಕೊಳ್ಳುತ್ತಿಲ್ಲ. ಈ ಸಂದರ್ಭದಲ್ಲಿ ಮಹಾಂತೇಶ ಬಿರಾದಾರ್‌ ತಮ್ಮ ಲೇಖನದಲ್ಲಿ ಈ ಎಲ್ಲಾ ಪರದೆ ಸರಿಸಿ ನೋಡುವ ಕೆಲಸ ಮಾಡಿದ್ದಾರೆ ಎಂದರು.

ವಿಜಾಪುರ ಎಂದರೆ ಹಿಂದುಳಿದ ಪ್ರದೇಶ ಎಂಬ ವಾತಾವಾರಣವಿತ್ತು. ಆದರೆ, ಅದನ್ನು ಮೀರಿ ನಮ್ಮ ಯುವಕರು ಸಾಧನೆ ಮಾಡಿ ಗುರುತಿಸಿಕೊಂಡಿದ್ದಾರೆ. ಅವರನ್ನು ಮತ್ತಷ್ಟು ಗುರುತಿಸುವ ಕೆಲಸ ಆಗಬೇಕಾಗಿದೆ. ನುಡಿಚಿತ್ರಗಳ ಮೂಲಕ ಈ ಪುಸ್ತಕದಲ್ಲಿ ಸಾಧಕರನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.

ಕೃತಿ ಲೇಖಕ ಡಾ। ಮಹಾಂತೇಶ ಬಿರಾದಾರಾ ಮಾತನಾಡಿ, ನಮ್ಮೂರಿನ ಭಾಗದ ಸಾಧಕರನ್ನು ಗುರುತಿಸಿ ಫೇಸ್ ಬುಕ್‌ನಲ್ಲಿ ಹಾಕುತ್ತಿದೆ. ನಂತರ ದಿನಗಳಲ್ಲಿ ಅವರ ಬಗ್ಗೆ ಚಿಕ್ಕ ಮಾಹಿತಿ ನೀಡತೊಡಗಿದೆ. ಇದೇ ಇಂದು ಪುಸ್ತಕ ರೂಪದಲ್ಲಿ ಹೊರಬರಲು ಕಾರಣವಾಗಿದೆ ಎಂದರು.

ಕೇಂದ್ರ ವೃತ್ತದ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಶ್ರೀನಿವಾಸ ಬಿದರಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಕೆ.ಎಸ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ. ಪ್ರಶಾಂತ್‌, ಬಿಎಲ್‌ಡಿ ಸಂಸ್ಥೆ ನಿರ್ದೇಶಕ ಬಸನಗೌಡ ಎಂ.ಪಾಟೀಲ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಚಿವ ಎಂ.ಬಿ. ಪಾಟೀಲ್‌ ಪತ್ನಿ ಆಶಾ ಎಂ.ಪಾಟೀಲ್, ಕವಿತಾ ಪ್ರಕಾಶದ ಗಣೇಶ ಅಮೀನಗಡ ಇದ್ದರು.