ಹಾನಗಲ್ಲ:ರಾಜ್ಯ ಸರ್ಕಾರದಿಂದ ಬಡವರಿಗೆ ಕಡಿಮೆ ದರದಲ್ಲಿ ನಿವೇಶನ, ಕಡುಬಡವರಿಗೆ ಉಚಿತ ನಿವೇಶನ ಯೋಜನೆ ಅರಂಭವಾಗಲಿದೆಯಲ್ಲದೆ, ೬ ತಿಂಗಳಲ್ಲಿ ೭೨ ಸಾವಿರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ರಾಜ್ಯ ಕರ್ನಾಟಕ ಗೃಹ ಮಂಡಳಿ ನೂತನ ಅಧ್ಯಕ್ಷ ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು.

ಶನಿವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ ೮೦ನೇ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಮ್ಮ ಸಂಪನ್ಮೂಲ ಕದ್ದೊಯ್ದ ಪರಕೀಯರ ಘಾತವನ್ನು ಮೆಟ್ಟಿ ನಮ್ಮ ದೇಶದ ಸ್ವಾತಂತ್ರ್ಯ ಯೋಧರು ಸ್ವತಂತ್ರ ಭಾರತವನ್ನು ಕಟ್ಟಿ ಕೊಟ್ಟಿದ್ದಾರೆ. ಭಾರತ ಪ್ರಜ್ವಲಿಸಲು ಯುವಶಕ್ತಿ ಅತ್ಯವಶ್ಯ. ರಾಜ್ಯದಲ್ಲಿ ೧೦ ಸಾವಿರ ಭಾರತ ಜೋಡೋ ಸಂಘಟನೆಗಳನ್ನು ಆರಂಭಿಸಿ ಪ್ರತಿ ಸಂಘಕ್ಕೆ ವರ್ಷಕ್ಕೆ ₹೧೦ ಲಕ್ಷ ಅನುದಾನ ನೀಡುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದೆ. ಜನಸಾಮಾನ್ಯರ ಸಮಸ್ಯೆಗಳು ಅರ್ಜಿಯಲ್ಲಿಯೇ ಉಳಿದಂತೆ ಪ್ರಜಾ ಸೇವಾ ಇಲಾಖೆ ರಾಜ್ಯದ ಕೇಂದ್ರ ಸ್ಥಳದಾದಿಯಾಗಿ ಪ್ರತಿ ಹಳ್ಳಿಯವರೆಗೆ ಕೆಲಸ ಮಾಡಲಿದೆ. ದೆಹಲಿಯಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಕರ್ನಾಟಕ ಭವನ ಆರಂಭಿಸಲಾಗಿದೆ. ಸಮರ್ಥ ಸಮೃದ್ಧ ಭಾರತ ನಿರ್ಮಾಣ ನಮ್ಮ ಆದ್ಯತೆ ಎಂದರು.

ಹಾನಗಲ್ಲ ತಾಲೂಕಿನಲ್ಲಿ ೪೭ ಭಾರತ ಜೋಡೋ ಸಂಘ ಆರಂಭವಾಗುತ್ತವೆ. ಗ್ಯಾರಂಟಿ ಯೋಜನೆಗಳಿಂದ ೩ ವರ್ಷಗಳಲ್ಲಿ ₹೭೫೦ ಕೋಟಿ ಜನರಿಗಾಗಿ ವಿನಿಯೋಗಿಸಿದ್ದೇವೆ. ತಾಲೂಕಿಗೆ ₹೧ ಸಾವಿರ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿವೆ. ಕನ್ನಡ,ಇಂಗ್ಲಿಷ್‌, ಉರ್ದು ಮಾಧ್ಯಮದ ೧೬ ಕೆಪಿಎಸ್ ಶಾಲೆಗಳು ಆರಂಭವಾಗಿವೆ. ೬ನೇ ಗ್ಯಾರಂಟಿ ನಿವೇಶನ ಹಕ್ಕುಪತ್ರ ವಿತರಣೆಯಲ್ಲಿ ಹಾನಗಲ್ಲ ತಾಲೂಕು ರಾಜ್ಯದಲ್ಲಿಯೇ ದಾಖಲೆ ಪ್ರಥಮ ಸ್ಥಾನದಲ್ಲಿದೆ. ಇದೆಲ್ಲ ಹಾನಗಲ್ಲ ತಾಲೂಕಿನ ಅಭಿವೃದ್ಧಿಗಾಗಿ ಕೈಕೊಂಡ ಪ್ರಾಮಾಣಿಕ ಸೇವೆ ಎಂದು ನನ್ನ ಭಾವನೆಯಾಗಿದೆ ಎಂದು ಶ್ರೀನಿವಾಸ್ ಮಾನೆ ಹೇಳಿದರು.

ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕು ತಹಸೀಲ್ದಾರ್ ವಿಠ್ಠಲ ಚೌಗುಲಾ, ದೇಶ ಪ್ರೇಮವನ್ನು ನಮ್ಮ ಉಸಿರಾಗಿ ಹಸಿರಾದ ಬದುಕಿಗೆ ಹೆಜ್ಜೆ ಹಾಕೋಣ. ನಮ್ಮ ನಾಡಿನ ಸಂತ ಮಹಾಂತರ ಸಾಂಸ್ಕೃತಿಕ ಪ್ರೇರಣೆ ಸ್ವಚ್ಛ ಜೀವನದ ಸಂದೇಶಗಳು ನಮಗೆ ದಾರಿದೀಪವಾಗಲಿ. ಭಾರತದ ಹಿತಕ್ಕೆ ನಮ್ಮ ಶಕ್ತಿ ವಿನಿಯೋಗವಾಗಲಿ. ನಮ್ಮ ದೇಶದ ಬಗ್ಗೆ ಹೆಮ್ಮೆ ಇರಲಿ. ವಿದ್ಯಾರ್ಥಿಗಳಲ್ಲಿ ಈಗಲೇ ದೇಶಪ್ರೇಮದ ಭಾವ ಬಿತ್ತಿ ಬೆಳೆಸೋಣ. ಸ್ವತಂತ್ರ ಭಾರತದ ಹಿರಿಮೆಗೆ ನಮ್ಮ ಶಕ್ತಿ ವಿನಿಯೋಗಿಸೋಣ ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೀರೇಶ ಬೈಲವಾಳ, ಅನಿತಾ ಶಿವೂರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಹಾಲು ಒಕ್ಕೂಟದ ನಿರ್ದೇಶಕ ಚಂದ್ರಪ್ಪ ಜಾಲಗಾರ, ಮಮತಾ ಆರೆಗೊಪ್ಪ, ಪುಟ್ಟಪ್ಪ ನರೇಗಲ್ಲ, ಹನುಮಂತಪ್ಪ ಯಳ್ಳೂರ, ಸುನಕವ್ವ ಚಿಕ್ಕಣ್ಣನವರ, ಇರ್ಫಾನ ಮಿಠಾಯಿಗಾರ, ಬಸನಗೌಡ ಪಾಟೀಲ, ಮಂಜುನಾಥ ಗೂರನವರ, ಬಿಇಒ ಆರ್.ವಿ. ಚಿನ್ನಿಕಟ್ಟಿ, ಪುರಸಭೆ ಮುಖ್ಯಾಧಿಕಾರಿ ವೈಕೆ. ಜಗದೀಶ, ತಾಪಂ ಇಒ ಜಗದೀಶ ಕಮ್ಮಾರ, ಸಿಪಿಐ ಬಸವರಾಜ ಹಳಬಣ್ಣನವರ, ಗುರುನಾಥ ಗವಾಣಿಕರ ಉಪಸ್ಥಿತರಿದ್ದರು. .