ಸಾರಾಂಶ
ಬಿಬಿಎಂಪಿಯಿಂದ ಕೈಗೊಳ್ಳುವ ಎಲ್ಲ ಕಾಮಗಾರಿಗಳ ಬಿಲ್ಲುಗಳನ್ನು ವಲಯ ಮುಖ್ಯ ಎಂಜಿನಿಯರ್ ಹಂತದಿಂದಲೇ ಬಿಡುಗಡೆ ಮಾಡಬೇಕು. ಪಾವತಿಗೂ ಮುನ್ನಾ ಆಯಾ ವಲಯ ಆಯುಕ್ತರ ಅನುಮೋದನೆ ಪಡೆಯಬೇಕೆಂದು ಬಿಬಿಎಂಪಿಯ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿಯಿಂದ ಕೈಗೊಳ್ಳುವ ಎಲ್ಲ ಕಾಮಗಾರಿಗಳ ಬಿಲ್ಲುಗಳನ್ನು ವಲಯ ಮುಖ್ಯ ಎಂಜಿನಿಯರ್ ಹಂತದಿಂದಲೇ ಬಿಡುಗಡೆ ಮಾಡಬೇಕು. ಪಾವತಿಗೂ ಮುನ್ನಾ ಆಯಾ ವಲಯ ಆಯುಕ್ತರ ಅನುಮೋದನೆ ಪಡೆಯಬೇಕೆಂದು ಬಿಬಿಎಂಪಿಯ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿ ಬಿಲ್ಲುಗಳ ಪಾವತಿಗೆ ನೇರವಾಗಿ ಕಾರ್ಯಪಾಲಕ ಎಂಜಿನಿಯರ್ ಅವರಿಂದ ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಸಲ್ಲಿಕೆ ಆಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಲಯ ಮುಖ್ಯ ಎಂಜಿನಿಯರುಗಳಿಗೆ ಬಿಲ್ಲುಗಳನ್ನು ಜೇಷ್ಠತೆ ಅನುಸಾರ ಅನುದಾನವನ್ನು ಮುಖ್ಯ ಆಯುಕ್ತರು ಬಿಡುಗಡೆ ಮಾಡಲಿದ್ದಾರೆ. ಬಿಡುಗಡೆಯಾದ ಅನುದಾನಕ್ಕೆ ಕಡ್ಡಾಯವಾಗಿ ದೃಢೀಕರಿಸಿದ ಅನುದಾನ ಬಳಕೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಮುಂದಿನ ಅನುದಾನ ಬಿಡುಗಡೆ ಮೊದಲು ಹಣಕಾಸು ವಿಭಾಗದ ಅಪರ ಆಯುಕ್ತರು ಈ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡಬೇಕು. ಕೆರೆ, ರಾಜಕಾಲುವೆ, ರಸ್ತೆ ಮೂಲಸೌಕರ್ಯ, ವಿದ್ಯುತ್ ವಿಭಾಗದ ನಿರ್ವಹಣೆ ಕಾಮಗಾರಿ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಅನುಷ್ಠಾನಗೊಳಿಸುವುದು ಆಯಾ ವಲಯ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್ ಅವರ ಜವಾಬ್ದಾರಿಯಾಗಿದೆ ಎಂದು ಸೂಚಿಸಲಾಗಿದೆ.ಸದ್ಯ ಬಿಬಿಎಂಪಿಯು ಪಾವತಿಸಬೇಕಾದ ಬಾಕಿ ಬಿಲ್ಲುಗಳನ್ನು ಜೇಷ್ಠತೆ ಆಧಾರದಲ್ಲಿ ಆಯಾ ವಲಯವಾರು ವಿಭಜಿಸಿ ವಲಯ ಆಯುಕ್ತರಿಗೆ ವರ್ಗಾಯಿಸಬೇಕು. ವಲಯವಾರು ಮೀಸಲಿಟ್ಟ ಅನುದಾನದಲ್ಲಿ ಶೇ.25 ರಷ್ಟು ಅನುದಾನವನ್ನು ಮುಖ್ಯ ಲೆಕ್ಕಾಧಿಕಾರಿ ಮುಂಗಡವಾಗಿ ಬಿಡುಗಡೆ ಮಾಡಬೇಕು. ಬಳಿಕ ಮೂರು ತಿಂಗಳಿಗೆ ಒಮ್ಮೆ ವಲಯ ಆಯುಕ್ತರಿಂದ ಬೇಡಿಕೆ ಪಡೆದು ಬಿಡುಗಡೆಗೊಳಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.