ಯುವಕರ ಮೇಲೆ ದೇಶ ರಕ್ಷಿಸುವ ಜವಾಬ್ದಾರಿ

| Published : Sep 02 2024, 02:01 AM IST

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಅನೇಕ ಹುತಾತ್ಮರ ಬಲಿದಾನದ ಫಲದಿಂದಾಗಿ. ಆ ಬಲಿದಾನಕ್ಕೆ ಅರ್ಥ ಬರಬೇಕಾದರೆ ಜನ ಜಾಗೃತರಾಗಿ ಸ್ವಾತಂತ್ರ್ಯ ಉಳಿಸಲು ದೇಶದ ಜನತೆ ಕಟಿಬದ್ಧರಾಗಬೇಕಾದ ಸಂದರ್ಭ ಬಂದಿದೆ.

ಧಾರವಾಡ:

ದೇಶದ ಚರಿತ್ರೆಯಲ್ಲಿ ಪ್ರಜೆಗಳು ಅತ್ಯಂತ ಕಠಿಣ ಸ್ಥಿತಿ ಅನುಭವಿಸಿದ್ದೇವೆ. ಈಗಲೂ ದೇಶದಲ್ಲಿ ಶತ್ರುಗಳಿದ್ದಾರೆ. ಆದರೂ ನಾವಿನ್ನು ನಿದ್ರಾ ಸ್ಥಿತಿಯಲ್ಲಿದ್ದೇವೆ. ನಿದ್ರೆಯಿಂದ ಎಚ್ಚೆತ್ತುಕೊಂಡು ದೇಶ ರಕ್ಷಿಸುವ ಗುರುತರ ಜವಾಬ್ದಾರಿ ಯುವಕರು ಹೊರಬೇಕೆಂದು ಖ್ಯಾತ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಹೇಳಿದರು.

ರಾಷ್ಟ್ರೋತ್ಥಾನ ಬಳಗ, ವೀರ ಸಾವರಕರ ಬಳಗ, ಸಂಸ್ಕಾರ ಭಾರತಿ ಸಹಯೋಗದೊಂದಿಗೆ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಚಂದ್ರಶೇಖರ ಆಜಾದ್ ಜೀವನ ಆಧಾರಿತ ಕಾದಂಬರಿ ಅಜೇಯದ ಸುವರ್ಣ ಸಂಭ್ರಮ ಹಾಗೂ ವಾಸುದೇವ ಬಲವಂತ ಫಡಕೆ ಜೀವನ ಆಧಾರಿತ ಕಾದಂಬರಿ ಅದಮ್ಯಕ್ಕೂ 40 ವರ್ಷ! ತುಂಬಿದ ಪ್ರಯುಕ್ತವಾಗಿ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಅನೇಕ ಹುತಾತ್ಮರ ಬಲಿದಾನದ ಫಲದಿಂದಾಗಿ. ಆ ಬಲಿದಾನಕ್ಕೆ ಅರ್ಥ ಬರಬೇಕಾದರೆ ಜನ ಜಾಗೃತರಾಗಿ ಸ್ವಾತಂತ್ರ್ಯ ಉಳಿಸಲು ದೇಶದ ಜನತೆ ಕಟಿಬದ್ಧರಾಗಬೇಕಾದ ಸಂದರ್ಭ ಬಂದಿದೆ ಎಂದರು.

ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಅಜೇಯ ಮತ್ತು ಅದಮ್ಯ ಎರಡು ಕ್ರಾಂತಿಕಾರಿ ಪುಸ್ತಕಗಳು ಭಾರತ ಇತಿಹಾಸದ ಕ್ರಾಂತಿ ಕುರಿತು ಹೇಳುವ ಪುಸ್ತಕಗಳಾಗಿವೆ. ಡಾ. ಬಾಬು ಕೃಷ್ಣಮೂರ್ತಿ ಅವರು ಆ ಎರಡು ಪುಸ್ತಕ ಬರೆಯದಿದ್ದರೆ ಕನ್ನಡಿಗರಿಗೆ ಚಂದ್ರಶೇಖರ್ ಆಜಾದ್ ಮತ್ತು ವಾಸುದೇವ ಬಲವಂತ ಫಡಕೆ ಅವರ ಪರಿಚಯ ಆಗುತ್ತಿರಲಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ದೇಶ ಮುನ್ನಡೆಸುವ ಜವಾಬ್ದಾರಿ ಮುಂದಿನ ಪೀಳಿಗೆಯ ಮೇಲಿದೆ. ಆ ಮುಂದಿನ ಪೀಳಿಗೆಯವರಲ್ಲಿ ದೇಶಾಭಿಮಾನ ಮೂಡಿಸುವ ಮಹತ್ತರ ಕಾರ್ಯವನ್ನು ಸಾಹಿತ್ಯ ಕೃತಿಗಳು ಮಾಡುತ್ತಿವೆ ಎಂದರು.

ರಾಷ್ಟ್ರೋತ್ಥಾನ ಸಾಹಿತ್ಯ ವಿಭಾಗದ ಸಂಪಾದಕ ವಿಘ್ನೇಶ್ವರ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರಿಷತ್ತಿನ ನಿಕಟಪೂರ್ವ ಸದಸ್ಯ ಅಶೋಕ ಸೋನಕರ, ಶಶಿಧರ ನರೇಂದ್ರ, ರಾಘವೇಂದ್ರ ಅಂಬೇಕರ, ಸಂಗೀತ ಶಿಕ್ಷಕ ಸೋಮಲಿಂಗ ಜಾಲಿಹಾಳ, ಗುರುರಾಜ ಅಗಡಿ, ವಿನಾಯಕ ಭಟ್ಟ ಇದ್ದರು.