ಸಾರಾಂಶ
ರವಿ ಕಾಂಬಳೆ
ಹುಕ್ಕೇರಿ : ಒಬ್ಬ ಸರ್ಕಾರಿ ನೌಕರ ಒಂದೇ ಇಲಾಖೆಯ ಕೆಲಸ ನಿರ್ವಹಿಸುವುದೇ ಇಂದಿನ ದಿನಗಳಲ್ಲಿ ಕಷ್ಟಸಾಧ್ಯ. ಆದರೆ, ಹುಕ್ಕೇರಿ ತಾಲೂಕಿನಲ್ಲಿ ಅಧಿಕಾರಿಯೊಬ್ಬರು ಮೂರು ಕಚೇರಿಗಳ ಹೊಣೆ ನಿರ್ವಹಿಸುತ್ತಿದ್ದಾರೆ!
ಇದು ರೀತಿಯಲ್ಲಿ ಆಶ್ಚರ್ಯಕರ ಸಂಗತಿ ಎನಿಸಿದರೂ ಸತ್ಯ. ಗೋಕಾಕ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾಯಂ ಅಧಿಕಾರಿಯೊಬ್ಬರಿಗೆ ಸರ್ಕಾರ ಹುಕ್ಕೇರಿಯ ಎರಡು ಇಲಾಖೆಗಳ ಪ್ರಭಾರಿ ಅಧಿಕಾರಿಯ ಜವಾಬ್ದಾರಿ ವಹಿಸಿದೆ. ಹಾಗಾಗಿ ಕೆಲಸದ ಒತ್ತಡ ಹೆಚ್ಚಾಗಿ ಇಲ್ಲಿನ ಕಚೇರಿಗಳಿಗೆ ಸಮಯ ನೀಡಲು ಈ ನಿಯೋಜಿತ ಅಧಿಕಾರಿಗೆ ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿವೆ.
ಹುಕ್ಕೇರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ (ಆರ್‌ಡಿಡಬ್ಲ್ಯೂಎಸ್) ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗ (ಪಿಆರ್‌ಇ)ದ ಸಹಾಯಕ ಕಾರ್ಯಕಾರಿ ಅಭಿಯಂತರ ಹುದ್ದೆಗೆ ಆರ್.ವಿ. ಜಾಧವ ಅವರನ್ನು ಪ್ರಭಾರಿಯನ್ನಾಗಿ ನೇಮಿಸಲಾಗಿದೆ. ಈ ಎರಡು ಕಚೇರಿಗಳಿಗೆ ಪೂರ್ಣಕಾಲಿಕ ಅಧಿಕಾರಿ ಇಲ್ಲದೆ ಅಕ್ಷರಶಃ ಸೊರಗಿವೆ. ಜೊತೆಗೆ ಇಲ್ಲಿನ ಕಾಮಗಾರಿಗಳ ಪ್ರಗತಿಯಲ್ಲಿ ನಿಧಾನವೇ ಪ್ರಧಾನ ಎನ್ನುವಂತಾಗಿದೆ.
ಮೂರು ತಿಂಗಳಿನಿಂದ ವಿಜಯ ಮಿಶ್ರಿಕೋಟಿ ಅವರ ಸೇವಾ ನಿವೃತ್ತಿಯಿಂದ ತೆರವಾದ ಆರ್.ಡಿ.ಡಬ್ಲ್ಯೂ.ಎಸ್. ಸ್ಥಾನಕ್ಕೆ ಗೋಕಾಕದ ಜಾಧವ ಅವರನ್ನು ನಿಯೋಜಿಸಲಾಗಿದೆ. ಇದೀಗ ಮತ್ತೆ ಕಳೆದ ವಾರ ಎಂ.ಎಸ್. ಬಿರಾದಾರಪಾಟೀಲ ಅವರ ನಿವೃತ್ತಿಯಿಂದ ತೆರವಾದ ಪಿಆರ್‌ಇ ಉಪವಿಭಾಗದ ಹೊಣೆಯನ್ನೂ ಜಾಧವ ಅವರಿಗೆ ವಹಿಸಲಾಗಿದೆ. ಇದರಿಂದ ಒಬ್ಬ ಅಧಿಕಾರಿಯಿಂದ ಮೂರು ಕಚೇರಿಗಳ ನಿರ್ವಹಣೆ ಹೇಗೆ ಸಾಧ್ಯ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಅತಿವೃಷ್ಟಿ ಮತ್ತು ಪ್ರವಾಹದಿಂದ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಸ್ಪಂದಿಸಬೇಕಿದೆ. ಜೊತೆಗೆ ಮೂರು ಇಲಾಖೆಯ ಕಾಮಗಾರಿಗಳ ಸ್ಥಳ ವೀಕ್ಷಣೆ, ಪರಿಶೀಲನೆ, ಅಳತೆ, ಮಾಪನ ಪುಸ್ತಕದಲ್ಲಿ ದಾಖಲು ಮಾಡುವುದು ಸೇರಿದಂತೆ ಇತರೆ ಕೆಲಸಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅತಿಯಾದ ಕೆಲಸಗಳ ಒತ್ತಡದಿಂದ ಗುಣಮಟ್ಟದ ಕಾಮಗಾರಿಗಳ ಅನುಷ್ಠಾನಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ ಎಂಬ ದೂರುಗಳಿವೆ.
ಒಬ್ಬರೇ ಅಧಿಕಾರಿ ಇರುವುದರಿಂದ ಕುಡಿಯುವ ನೀರು ಇಲಾಖೆಯ ಜಲಜೀವನ್ ಮಿಷನ್ (ಜೆಜೆಎಂ), ಬೂದು ನೀರು ನಿರ್ವಹಣೆ, ಟಾಸ್ಕ್‌ಪೋರ್ಸ್ ಮತ್ತು ಪಿಆರ್‌ಇ ಕಚೇರಿಯ 15ನೇ ಹಣಕಾಸು ಯೋಜನೆ, ಶಾಸನಬದ್ಧ ಅನುದಾನ, ಗ್ರಾಪಂ, ತಾಪಂ, ಜಿಪಂ ಕಾಮಗಾರಿಗಳು ಆಮೆ ನಡಿಗೆಯಲ್ಲಿ ಸಾಗಿವೆ ಎಂಬ ಆರೋಪ ಕೇಳಿ ಬಂದಿವೆ.
ಅತಿವೃಷ್ಟಿ ಮತ್ತ ಪ್ರವಾಹ ಎದುರಾಗಿದ್ದರಿಂದ ಒಬ್ಬರೇ ಅಧಿಕಾರಿ ಮೂರು ಕಚೇರಿಗಳ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗಿದೆ. ಇದರಿಂದ ಅಭಿವೃದ್ಧಿಗೆ ತೊಡಕಾಗಿದ್ದು, ಕೂಡಲೇ ಹುಕ್ಕೇರಿ ತಾಲೂಕಿಗೆ ಕಾಯಂ ಅಧಿಕಾರಿಯನ್ನು ನಿಯೋಜಿಸಬೇಕು.
- ಯಲ್ಲಪ್ಪ ಡಪ್ಪರಿ, ಗ್ರಾಪಂ ಸದಸ್ಯಅತಿಯಾದ ಕೆಲಸದ ಒತ್ತಡದ ನಡುವೆಯೂ ಮೂರು ಕಚೇರಿಗಳ ಕೆಲಸಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ನಿಗದಿತ ವೇಳೆಯಲ್ಲಿ ಎಲ್ಲ ಕಡತ ವಿಲೇವಾರಿ ಮಾಡಲಾಗುತ್ತಿದೆ.
- ಆರ್.ವಿ. ಜಾಧವ, ಪ್ರಭಾರಿ ಎಇಇ ಆರ್‌ಡಿಡಬ್ಲ್ಯೂಎಸ್ ಮತ್ತು ಪಿಆರ್‌ಇ