ಅನುದಾನ ಕೊಡಿಸೊ ಜವಾಬ್ದಾರಿ ಶಾಸಕರ ಮೇಲಿದೆ

| Published : Apr 27 2025, 01:35 AM IST

ಸಾರಾಂಶ

ನೂರತ್ತು ಕೆರೆ, ಕಟ್ಟೆಗಳ ನೀಲನಕ್ಷೆ ನನ್ನ ಕಾಲದಲ್ಲಿ ಆದದ್ದು ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಪತ್ರಕರ್ತರಿಗೆ ತೋರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ 110 ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದ್ದು ಸ್ವಾಗತಾರ್ಹ, ಆದರೆ ಯೋಜನೆಗೆ 100 ಕೋಟಿ ಅನುದಾನ ನೀಡಿ ಯೋಜನೆಗೆ ಚಾಲನೆ ಕೊಡಿಸುವ ದೊಡ್ಡ ಜವಾಬ್ದಾರಿ ಶಾಸಕರ ಮೇಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಸಲಹೆ ನೀಡಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲೂಕಿನ ರೈತರ ಬವಣೆ ಕಂಡು ರೈತರು ಕೃಷಿ ಚಟುವಟಿಕೆಗೆ ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಹೆಚ್ಚಲಿದೆ ಎಂದು ತಾಲೂಕಿನ ಕೆರೆ, ಕೆಟ್ಟೆಗಳನ್ನು ನೀರಾವರಿ ಅಧಿಕಾರಿಗಳಿಂದ ಸರ್ವೆ ಮಾಡಿಸಿದ್ದೇ ಎಂದರು. ನಾಲ್ಕೈದು ಬಾರಿ ಅಧಿಕಾರಿಗಳ ಸಭೆ ನಡೆಸಿ, ಸ್ಥಳೀಯ ರೈತರ ಸಲಹೆ ಪಡೆದು, ಕಾಡಂಚಿನ ಗ್ರಾಮಗಳ ಎತ್ತರ ಪ್ರದೇಶದ ಕೆರೆ, ಕಟ್ಟೆಗಳು ಹಾಗೂ ಸಣ್ಣ ಪುಟ್ಟ ಕೆರೆ, ಕಟ್ಟೆಗಳನ್ನು ಸೇರಿಸಿ 430 ಕೋಟಿ ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತದ ಸಭೆಯಲ್ಲಿ ಸಿಎಂ, ಸಚಿವರ ಮೂಲಕ ಒತ್ತಡ ಹೇರಿ ಜೊತೆಗೆ ಫಾಲೋ ಅಫ್‌ ಮಾಡಿದ ಪರಿಣಾಮ ನೀರಾವರಿ ಬೋರ್ಡ್‌ ಸಭೆಯಲ್ಲಿ ಅನುಮೋದನೆ ಕೊಡಿಸಲು ಸಾಕಷ್ಟು ಶ್ರಮ ಹಾಕಿದ್ದೇ ಎಂದರು.

ಅಂದು ಶಾಸಕ ಗಣೇಶ್‌ ಗೇಲಿ ಮಾಡಿದ್ರು:

ನಾನು ತಾಲೂಕಿನಲ್ಲಿ 110 ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂದಾದಾಗ ಅಂದು ಶಾಸಕ ಗಣೇಶ್‌ ಪ್ರಸಾದ್‌ ಹಾಗೂ ಕೆಲವರು ತಾಲೂಕಿನಲ್ಲಿ ನೂರತ್ತು ಕೆರೆ, ಕಟ್ಟೆಗಳು ಇವೆಯಾ? ಇದೆಲ್ಲ ಚುನಾವಣೆ ಗಿಮಿಕ್‌ ಎಂದು ಗೇಲಿ ಮಾಡಿದ್ರು ಆದರೆ ಶಾಸಕ ಗಣೇಶ್‌ ಅವರೇ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೊಡಿಸಿದ್ದಾರೆ ಎಂದು ಪರೋಕ್ಷವಾಗಿ ವ್ಯಂಗವಾಡಿದರು.

ಪಾಪ, ಗೊತ್ತಿಲ್ಲ ಬಿಡಿ:

ಶಾಸಕ ಗಣೇಶ್‌ ಪ್ರಸಾದ್‌ ಪಾಪ ತಾಲೂಕಿನಲ್ಲಿ 110 ಕೆರೆ, ಕಟ್ಟೆಗಳಿವೆ ಎಂದು ಗೊತ್ತಿಲ್ಲ ಬಿಡಿ ಪಾಪ. ಎಲ್ಲಿವೆ 110 ಕೆರೆ, ಕಟ್ಟೆ ಎಂದಿದ್ರು ಹಳ್ಳಿಗಳನ್ನು ನೋಡಿದ್ರೆ ತಾನೇ ಗೊತ್ತಾಗ್ತಿತ್ತು ಎಂದು ಗಣೇಶ್‌ ಕಾಲೆಳೆದರು.

ರಾಜಕೀಯ ಬೇಡ:

ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ರೈತರಿಗೆ ಅನುಕೂಲವಾಗಲಿ ಎಂದು ನಾನು ನೂರತ್ತು ಕೆರೆ, ಕಟ್ಟೆಗಳಿಗೆ ಯೋಜನೆ ರೂಪಿಸಿದ್ದೇನೆ, ಈಗ ಸಚಿವ ಸಂಪುಟ ಅನುಮೋದನೆ ನೀಡಿದಾಕ್ಷಣ ಕೆರೆ ತುಂಬುವುದಿಲ್ಲ ಎಂದರು.

ಬಿಎಸ್‌ವೈ ಕಾರಣ:

ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಸುತ್ತೂರು ಶ್ರೀಗಳು ಕಾರಣ. ಕೆರೆ ನೀರು ತುಂಬಿಸುವ ಹೋರಾಟ ಸಮಿತಿ ಸದಸ್ಯರು ಅಂದಿನ ಶಾಸಕರ ಬಳಿ ಮನವಿ ಮಾಡಿದಾಗ ಉಪೇಕ್ಷ ಮಾಡಿದ್ದರು ಎಂದರು.

2 ವರ್ಷದಿಂದ ಕೆರೆ ತುಂಬಿಸಲಿಲ್ಲ:ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆಲಂಬೂರು ಹಾಗೂ ಗಾಂಧಿ ಗ್ರಾಮ ಎರಡು ಯೋಜನೆಗಳ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಆಗಲಿಲ್ಲ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಆರೋಪಿಸಿದರು. ಹುತ್ತೂರಿಂದ ಕೊಡಸೋಗೆ ಕೆರೆಗೆ ನೀರು ಬಂತು. ಗಾಂಧಿ ಗ್ರಾಮ ಯೋಜನೆ ಗರಗನಹಳ್ಳಿ ಕೆರೆ ತನಕ ನೀರು ಬಂತು ಮುಂದಿನ ಕೆರೆಗಳಿಗೆ ನೀರು ತುಂಬಿಸಲು ಸ್ಥಳೀಯ ಶಾಸಕರಿಂದ ಆಗಿಲ್ಲ ಎಂದು ಟೀಕಿಸಿದರು. ನನ್ನ ಕಾಲದಲ್ಲಿ ಹುತ್ತೂರಿಂದ ಗುಂಡ್ಲುಪೇಟೆ ತನಕ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿದೆ. ಬೆಳಚಲವಾಡಿ ಕೆರೆಯಿಂದ ಮಳವಳ್ಳಿ ಕೆರೆ ತನಕ ಹಠ ಹಿಡಿದು ನೀರು ತುಂಬಿಸಿದೆ ನಿಮ್ಮ ಕೈಯಲ್ಲೇಕೆ ಆಗಲಿಲ್ಲ ಎಂದು ಶಾಸಕರನ್ನು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಮಹದೇವಪ್ರಸಾದ್‌, ಮಾಜಿ ಅಧ್ಯಕ್ಷ ಎಲ್.ಸುರೇಶ್‌, ಬಿಜೆಪಿ ಮುಖಂಡರಾದ ಮಂಚಹಳ್ಳಿ ಬಾಬು, ಡಾ.ನವೀನ್‌ ಮೌರ್ಯ, ಅಗತಗೌಡನಹಳ್ಳಿ ಬಸವರಾಜು, ಚಿಕ್ಕಾಟಿ ಶಿವಣ್ಣ ನಾಯಕ ಇದ್ದರು.

ಅಭಿವೃದ್ಧಿಗೆ ಅನುದಾನವಿಲ್ಲ ಎಂದು

ನಾನು ಬೇರೆ ಹೇಳ್ಬೇಕಾ: ನಿರಂಜನ್‌ ರಾಜ್ಯದಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲ ಎಂದು ಆಡಳಿತ ಪಕ್ಷದ ಹಲವು ಶಾಸಕರೇ ಹೇಳಿದ್ದಾರೆ ಅಂದ್ಮೇಲೆ ಅಭಿವೃದ್ಧಿಗೆ ಅನುದಾನವಿಲ್ಲ ಎಂದು ನಾನು ಬೇರೆ ಹೇಳ್ಬೇಕಾ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಪ್ರಶ್ನಿಸಿದರು. ನಾನು ಶಾಸಕನಾಗಿದ್ದ ಅವಧಿ ಮುಗಿವ ಹಂತದಲ್ಲಿ 200 ಕೋಟಿ ಅನುದಾನ ಬಂತು. ಆ ಅನುದಾನದಲ್ಲೇ ಕ್ಷೇತ್ರದಲ್ಲಿ ಹಲವು ಕೆಲಸಗಳು ಪ್ರಗತಿಯಲ್ಲಿವೆ. ಗುಂಡ್ಲುಪೇಟೆ ಪಟ್ಟಣದ ಎಕ್ಸ್‌ಪ್ರೆಸ್‌ ಕುಡಿವ ನೀರಿನ ಯೋಜನೆಗೆ ₹150 ಕೋಟಿ, ರಸ್ತೆ ಅಭಿವೃದ್ಧಿಗೆ ₹100 ಕೋಟಿ ನನ್ನ ಕಾಲದಲ್ಲೇ ಮಂಜೂರು ಆಗಿದ್ದು ಎಂದರು. ಎಸ್ಇಪಿ, ಟಿಎಸ್‌ಪಿ ಅನುದಾನ ಬೇರೆಡೆಗೆ ವರ್ಗಾಯಿಸಿ ಎಸ್‌ಸಿ, ಎಸ್‌ಟಿ ಜನರಿಗೆ ಕಾಂಗ್ರೆಸ್‌ ಸರ್ಕಾರ ದೊಡ್ಡ ಮೋಸ ಮಾಡಿದೆ. ಅಭಿವೃದ್ಧಿಗೆ ಅನುದಾನ ಇಲ್ಲ ಎಂದು ಕಾಂಗ್ರೆಸ್‌ ಶಾಸಕರು ಪರಿತಪಿಸುತ್ತಿದ್ದಾರೆ ಎಂದರು.