ಸಾರಾಂಶ
- ಕಸಾಪದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಿಂಡಿಕೇಟ್ ಸದಸ್ಯರಿಗೆ ಸನ್ಮಾನ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದು ಸಾಹಿತಿ, ಜಾನಪದ ವಿದ್ವಾಂಸ ಡಾ. ಎಚ್.ಎಲ್. ಮಲ್ಲೇಶ್‌ಗೌಡ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗೌರವ ಡಾಕ್ಟರೇಟ್ ಪಡೆದ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಂಡಿಕೇಟ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ಆಧುನಿಕತೆ ಗೀಳು ಮತ್ತು ಪಾಶ್ಚಾತ್ಯ ಸಂಸ್ಕೃತಿ ಅತಿಯಾದ ವ್ಯಾಮೋಹದಿಂದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ನಾಡಿನಲ್ಲಿ ಕಣ್ಮರೆಯಾಗುತ್ತಿದೆ. ನೆಲದ ಸಂಸ್ಕೃತಿ ಮರೆಯಾಗುತ್ತಿದೆ ಎಂದು ವಿಷಾದಿಸಿದ ಅವರು, ಅದನ್ನು ಉಳಿಸಿ ಬೆಳೆಸುವುದು ಇಂದಿನ ಮಕ್ಕಳು ಮತ್ತು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ್ಯ. ಆದರೆ, ಅದರ ನಡುವೆ ನಾವು ನಮ್ಮತನ ಮತ್ತು ಮಾತೃಭಾಷೆಯನ್ನು ಮರೆಯಬಾರದು. ದಿನನಿತ್ಯದ ಬದುಕಿನಲ್ಲಿ ಮಾತೃಭಾಷೆ ಬಳಸುವ ಮೂಲಕ ಅದನ್ನು ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ಕಿವಿ ಮಾತು ಹೇಳಿದರು.ಇಂದು ಪ್ರಶಂಸೆಗಳು ಜಾಸ್ತಿಯಾಗಿ ವಿಮರ್ಶೆಗಳು ಭಾಷಾ ಸಾಹಿತ್ಯದಲ್ಲಿ ಕಡಿಮೆಯಾಗುತ್ತಿವೆ ಎಂದು ವಿಷಾಧಿಸಿದ ಅವರು, ಭಾಷೆಯ ಬೆಳವಣಿಗೆ ದೃಷ್ಟಿಯಿಂದ ಪ್ರಶಂಸೆ ಮತ್ತು ವಿಮರ್ಶೆ ಒಟ್ಟಿಗೇ ಸಾಗಬೇಕು ಎಂದು ತಿಳಿಸಿದರು.ಕನ್ನಡ ಭಾಷೆ ನಿರಂತರ ಚಲನಶೀಲವಾದದ್ದು, ಅದು ಇತ್ತೀಚೆಗೆ ಹಲವು ಕಾರಣಗಳಿಂದ ಗಟ್ಟಿತನ ಕಳೆದುಕೊಂಡು ಸೊರಗುತ್ತಿದೆ. ಭಾಷೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಹೊಸ ಹೊಸ ಪದಗಳು ಕನ್ನಡದ ಸೊಗಸನ್ನು ಹೆಚ್ಚಿಸಬೇಕೇ ಹೊರತು ಕುಂದಿಸಬಾರದು, ಭಾಷಾ ಸೌಂದರ್ಯ ಉಳಿಸುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.ಸಾಹಿತಿ ಡಾ.ಎಚ್.ಎಸ್. ಸತ್ಯನಾರಾಯಣ ಮಾತನಾಡಿ, ನಾಡಿನಲ್ಲಿ ಕನ್ನಡ ಉಳಿದರೆ ಮಾತ್ರ ನಮ್ಮತನ, ಈ ನೆಲದ ಸಂಸ್ಕೃತಿ, ಸಂಸ್ಕಾರ ಉಳಿಯುತ್ತವೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ನಾಡು ನುಡಿ ಸೇವೆಯನ್ನು ಜಿಲ್ಲಾ ಕಸಾಪ ನಿರಂತರವಾಗಿ ಮಾಡುತ್ತಿದೆ ಎಂದರು.ಸಾಹಿತಿ ಡಿ.ಎಂ.ಮಂಜುನಾಥ ಸ್ವಾಮಿ ಮಾತನಾಡಿ, ಮಾತೃಭಾಷೆ ಕಳೆದುಕೊಂಡರೆ ನಾವು ನಮ್ಮತನ ಕಳೆದುಕೊಂಡು ಅನಾಥರಂತಾಗುತ್ತೇವೆ ಎಂದು ಎಚ್ಚರಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಮಾವಿನಕೆರೆ ದಯಾನಂದ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ. 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಗೌರವ ಡಾಕ್ಟರೇಟ್ ಪಡೆದ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಂಡಿಕೇಟ್ ಸದಸ್ಯರನ್ನು ಗೌರವಿಸಲಾಯಿತು.
ಇದೇ ವೇಳೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್. ಸಿ.ವಿ. ರಾಮನ್ ಅವರ ಸ್ಮರಣಾರ್ಥ ಆನ್ಲೈನ್ ನಲ್ಲಿ ನಡೆಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಆದಿಚುಂಚನಗಿರಿ ಮಹಾವಿದ್ಯಾಲಯದ ಕುಲಸಚಿವ ಡಾ.ಸಿ.ಕೆ. ಸುಬ್ಬರಾಯ, ಎಐಟಿ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್, ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಡಾ. ಜಿ.ಡಿ. ನಾರಾಯಣ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ.ಮಂಜುಳ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಟಿ. ಸಂದೀಪ್ ಉಪಸ್ಥಿತರಿದ್ದರು.18 ಕೆಸಿಕೆಎಂ 2ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 100 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗೌರವ ಡಾಕ್ಟರೇಟ್ ಪಡೆದ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಂಡಿಕೇಟ್ ಸದಸ್ಯರನ್ನು ಸನ್ಮಾನಿಸಲಾಯಿತು.