ಸಾರಾಂಶ
ಹೊಳಲ್ಕೆರೆ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅವರಿಂದ ಸರ್ಕಾರ ರಚನೆಯಾಗುತ್ತದೆ. ಅದಕ್ಕಾಗಿ ಜನಸೇವೆ ಮಾಡುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂದು ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಸಂವಿಧಾನಸೌಧದಲ್ಲಿ ಶನಿವಾರ ನಡೆದ ತಾಲೂಕು ಸರ್ಕಾರಿ ನೌಕರರ ಸಮ್ಮೇಳನ, ಸರ್ವ ಸದಸ್ಯರ ಸಾಮಾನ್ಯ ಸಭೆ, ಉತ್ತಮ ನೌಕರರಿಗೆ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು ಜನಸಾಮಾನ್ಯರೊಂದಿಗೆ ಮಾನವೀಯ ಸಂಬಂಧಗಳನ್ನಿಟ್ಟುಕೊಂಡರೆ ಭವ್ಯ ಭಾರತ ನಿರ್ಮಾಣ ಮಾಡಬಹುದು. ನೀವುಗಳು ಇರುವುದು ಜನರ ಹಿತಕ್ಕಾಗಿ. ಒಂದು ಕೂಗು ಹಾಕಿದರೆ ಸರ್ಕಾರವನ್ನು ಬಗ್ಗಿಸುವ ಶಕ್ತಿಯಿದೆ ನಿಮ್ಮಲ್ಲಿದೆ ಎಂದ ಅವರು, ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ ಜನಸಾಮಾನ್ಯರ ಬದುಕಿಗೆ ದಾರಿ ದೀಪವಾಗಬಹುದು ಎಂದರು.
ಭಾರತೀಯ ಪರಂಪರೆಯಲ್ಲಿ ನಂದಿ ವಿಗ್ರಹಕ್ಕೆ ಪೂಜ್ಯ ಸ್ಥಾನವಿದೆ. ಎಲ್ಲಾ ದೇವಸ್ಥಾನಗಳ ಮುಂದೆ ನಂದಿ ವಿಗ್ರಹವಿರುತ್ತದೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿರವರನ್ನು ನಂದಿ ವಿಗ್ರಹದಂತೆ ಕೂತಿರಲು ನೇಮಕ ಮಾಡಿಲ್ಲ. ನೌಕರರ ಪರವಾಗಿ ಗೂಳಿಯಂತೆ ಗುಟುರು ಹಾಕಿದಾಗ ಮಾತ್ರ ಸರ್ಕಾರದಿಂದ ಕೆಲಸಗಳಾಗುತ್ತವೆಂದು ತಿಳಿಸಿದರು.ಸರ್ಕಾರಿ ನೌಕರರಿಗೆ ಜೀವನ ಭದ್ರತೆಯಿದೆ. ಅದೇ ಖಾಸಗಿಯವರಿಗೆ ಭದ್ರತೆಯಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಿ ನೀವುಗಳು ಕೆಲಸ ಮಾಡಬೇಕೆಂದು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಎರಡನೇ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಸಿ.ಎಸ್.ಷಡಾಕ್ಷರಿ ಸರ್ಕಾರದಿಂದ ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಐದು ಲಕ್ಷ ನೌಕರರು ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದರೆ ಸಾರ್ವಜನಿಕರ ಬದುಕನ್ನು ಹಸನುಗೊಳಿಸಬಹುದು. ಸರ್ಕಾರಿ ನೌಕರರಿಗೆ ಒಂದು ಲಕ್ಷ 55 ಸಾವಿರ ಕೋಟಿ ರು.ಗಳನ್ನು ವೇತನವಾಗಿ ನೀಡುತ್ತಿದೆ. ಪಿಂಚಣಿ ಸೇರಿದರೆ ಒಟ್ಟು 2 ಲಕ್ಷ ಹದಿನೈದು ಸಾವಿರ ಕೋಟಿ ರು.ಗಳಾಗುತ್ತದೆ ಎಂದರು.ಸರ್ಕಾರಕ್ಕೆ ಬರುವ ತೆರಿಗೆ ಕೇವಲ ಎರಡು ಲಕ್ಷದ ಎಂಟು ಸಾವಿರ ಕೋಟಿ ರು.ಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಜನಸಾಮಾನ್ಯರಿಗೆ ಸೇವೆ ಸಲ್ಲಿಸಿ ಎಂದು ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಿದಾಗ ಬಸವರಾಜ ಬೊಮ್ಮಾಯಿ ಹಾಗೂ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಂದಿಸಿದ್ದಾರೆ. ಎನ್‌ಪಿಎಸ್ ರದ್ದುಪಡಿಸಿ ಓಲ್ಡ್ ಪೆನ್ಷನ್ ಸ್ಕೀಂ ಜಾರಿಗೆ ತರಬೇಕೆಂಬುದು ನಮ್ಮ ಬಹುಮುಖ್ಯ ಬೇಡಿಕೆ. ಇದಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಸಕಾರಾತ್ಮಕ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಸಮಾಜ ಸುಧಾರಣೆಯಲ್ಲಿ ನೌಕರರ ಪಾತ್ರವಿದೆ. ಸರ್ಕಾರಿ ನೌಕರಿ ಸಿಗಬೇಕೆಂದರೆ ಪೂರ್ವಜನ್ಮದ ಪುಣ್ಯವಿರಬೇಕು. ಸಮಸ್ಯೆ ಸವಾಲುಗಳ ನಡುವೆ ನೀವುಗಳು ಕೆಲಸ ಮಾಡುತ್ತಿದ್ದೀರ. ಎಲ್ಲವನ್ನು ಹಿಮ್ಮೆಟ್ಟಿಸಿ ಜನ ಸೇವೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿಗೌಡ, ರಾಜ್ಯ ಗೌರವಾಧ್ಯಕ್ಷ ಎಸ್.ಬಸವರಾಜು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ ಮುದ್ದಜ್ಜಿ, ರಾಜ್ಯ ಉಪಾಧ್ಯಕ್ಷ ಸಿದ್ದಬಸಪ್ಪ, ಅಖಂಡ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗನಗೌಡ, ತಹಸೀಲ್ದಾರ್ ಕೊರಲಗುಂದಿ ವಿಜಯಕುಮಾರ, ತಾಪಂ ಕಾರ್ಯನಿರ್ವಹಣಾಧಿಕಾರಿ ಪಿ.ವಿಶ್ವನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್, ಆರ್.ನಿವಾಸ್, ಮಲ್ಲಿಕಾರ್ಜುನ ರಾಜಪ್ಪ, ಎನ್.ಶಿವಮೂರ್ತಿ, ಲೋಕೇಶ್ ಮತ್ತಿತರರಿದ್ದರು.