ಸಾರಾಂಶ
ಮೊಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬೇಸರ
ಕನ್ನಡಪ್ರಭ ವಾರ್ತೆ ಕುಷ್ಟಗಿ
ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟದ ಸುಧಾರಣೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಹೆಚ್ಚಿನ ಫಲಿತಾಂಶ ಬರುತ್ತಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ಕೃಷ್ಣಗಿರಿ ಕಾಲನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ನಡೆದ ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಊಟ, ಬಾಳೆಹಣ್ಣು, ಶೇಂಗಾ ಚಿಕ್ಕಿ, ಪಠ್ಯಪುಸ್ತಕ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಸೌಲಭ್ಯ ಒದಗಿಸುತ್ತಿದೆ. ಈಗ ಅಜೀಮ್ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ವಾರದಲ್ಲಿ ನಾಲ್ಕು ದಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವ ಮೂಲಕ ಸಾಮಾಜಿಕ ಬದ್ಧತೆ ಎತ್ತಿ ಹಿಡಿಯುತ್ತಿದೆ ಎಂದರು.
ಈ ಹಿಂದೆ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶವೂ ಅತ್ಯಂತ ಕಡಿಮೆ ಬಂದಿದ್ದು, ಈ ಸಲ ಶಿಕ್ಷಕರು ಅಲಕ್ಷ್ಯತನ ತೋರದೆ ಕರ್ತವ್ಯನಿಷ್ಠೆಯಿಂದ ಮಕ್ಕಳಿಗೆ ಸಮರ್ಪಕವಾಗಿ ಬೋಧನೆ ಮಾಡುವ ಮೂಲಕ ಫಲಿತಾಂಶದಲ್ಲಿ ನಮ್ಮ ಜಿಲ್ಲೆಯಲ್ಲಿಯೆ ಮೊದಲ ಸ್ಥಾನದಲ್ಲಿ ಬರುವಂತೆ ನೋಡಿಕೊಳ್ಳಬೇಕು ಎಂದರು.ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ಸರ್ಕಾರ ವಾರದಲ್ಲಿ ಎರಡು ದಿನಗಳ ಕಾಲ ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿ ನೀಡುತ್ತಿತ್ತು. ಅಜೀಮ್ ಪ್ರೇಮ್‌ಜಿ ಫೌಂಡೇಷನ್‌ನವರು ಮೂರು ವರ್ಷದ ಅವಧಿಯ ತನಕ ವಾರದಲ್ಲಿ ನಾಲ್ಕು ದಿನ ಮೊಟ್ಟೆ, ಬಾಳೆಹಣ್ಣು. ಶೇಂಗಾ ಚಿಕ್ಕಿ ಕೊಡುವ ಒಪ್ಪಂದ ಮಾಡಿಕೊಂಡಿದ್ದು, ರಾಜ್ಯದಲ್ಲಿ ₹1591 ಕೋಟಿ ವೆಚ್ಚ ಮಾಡುತ್ತಿದೆ. ನಮ್ಮ ತಾಲೂಕಿನಲ್ಲಿ ಸುಮಾರು 53 ಸಾವಿರ ಮಕ್ಕಳು ಉಪಯೋಗ ಪಡೆದುಕೊಳ್ಳಲಿದ್ದಾರೆ. ನಮ್ಮ ತಾಲೂಕಿಗೆ ಅಂದಾಜು ₹12 ಲಕ್ಷ ವೆಚ್ಚವಾಗುತ್ತಿದೆ ಎಂದರು.
ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ತಾಲೂಕಿನ ಎಲ್ಲ ಶಾಲೆಗಳಲ್ಲಿ ಶುದ್ಧ ನೀರು ಬಳಸುವಂತಾಗಬೇಕು. ಪರಿಸರ ಸ್ವಚ್ಛತೆ, ನೈರ್ಮಲ್ಯದಿಂದ ಕೂಡಿರುವಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ ಎಂದರು.ಪುರಸಭೆ ಸದಸ್ಯೆ ಗೀತಾ ಕೋಳೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ ಮೇಣೆದಾಳ, ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ ಸೇಬಿನಕಟ್ಟಿ, ಮುಖ್ಯ ಶಿಕ್ಷಕ ಹನುಮಂತಪ್ಪ, ಮಾಜಿ ಜಿಪಂ ಸದಸ್ಯ ಕೆ. ಮಹೇಶ, ಫೌಂಡೇಶನ್ ಅಧಿಕಾರಿ ಭೋಜನಾಯಕ, ಮಹಿಬುಬು ಹಾವಾಡಿಗ, ದೈಹಿಕ ಶಿಕ್ಷಣಾಧಿಕಾರಿ ಎಂ. ಸರಸ್ವತಿ, ವೈ.ಬಿ. ಚೂರಿ, ಇಂದಿರಾ, ಅಮರೇಗೌಡ ನಾಗೂರು, ಸಿದ್ರಾಮಪ್ಪ ಅಮರಾವತಿ, ಸೋಮಲಿಂಗಪ್ಪ ಗುರಿಕಾರ, ವೀರೇಶ ಬಂಗಾರಶೆಟ್ಟರ, ಮಹೇಶ ಪಡಿ, ಯಮನಪ್ಪ ಲಮಾಣಿ ಇದ್ದರು.
ಅಕ್ಷರ ದಾಸೋಹ ಅಧಿಕಾರಿ ಸೋಮನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಬಿಆರ್‌ಪಿ ಡಾ. ಜೀವನಸಾಬ ಬಿನ್ನಾಳ ಕಾರ್ಯಕ್ರಮ ನಿರ್ವಹಿಸಿದರು.