ಲೋಕಾ ಚುನಾವಣೆ ಫಲಿತಾಂಶ ಕಾಂಗ್ರೆಸ್ಸಿಗರ ಅಧಿಕಾರದ ಮದ ಇಳಿಸಲಿದೆ-ಮಾಜಿ ಸಿಎಂ ಬೊಮ್ಮಾಯಿ

| Published : Mar 30 2024, 12:51 AM IST

ಲೋಕಾ ಚುನಾವಣೆ ಫಲಿತಾಂಶ ಕಾಂಗ್ರೆಸ್ಸಿಗರ ಅಧಿಕಾರದ ಮದ ಇಳಿಸಲಿದೆ-ಮಾಜಿ ಸಿಎಂ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರದ ಮದದಲ್ಲಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಇವರ ಮದ ಇಳಿದು ಕಣ್ಣು ತೆರೆಸಲಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರದ ಮದದಲ್ಲಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಇವರ ಮದ ಇಳಿದು ಕಣ್ಣು ತೆರೆಸಲಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅನ್ಯ ಪಕ್ಷಗಳ ಹಿಂದುಳಿದ ವರ್ಗಗಳ ಮುಖಂಡರು, ನಗರಸಭೆ ಸದಸ್ಯರ ಬಿಜೆಪಿ ಸೇರ್ಪಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯಾದ್ಯಂತ ಬದಲಾವಣೆ ಗಾಳಿ ಬೀಸುತ್ತಿದೆ. ರಾಜ್ಯದ ಜನರು ಬಹಳ ಪ್ರಬುದ್ಧರು. ಈ ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು. ಆದರೆ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪುನಃ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾ ದಳ ಸರ್ಕಾರ ಅಧಿಕಾರಕ್ಕೆ ಬಂದಿತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶ ಬಂಡವಾಳ ಹರಿದು ಬರುತ್ತಿದೆ. ಯುಪಿಎ ಸರ್ಕಾರವಿದ್ದಾಗ ಪದೇ ಪದೇ ಪಾಕಿಸ್ತಾನದಿಂದ ದಾಳಿ ಆಗುತ್ತಿತ್ತು. ಈಗ ಕಾಲ ಬದಲಾಗಿದೆ. ಮೋದಿಯವರು ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ರ‍್ಟೈಕ್ ಮಾಡಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಅಗತ್ಯ ಸೌಕರ್ಯಗಳನ್ನು ಕೊಟ್ಟಿದೆ. ಜನರಿಗೆ ಬದುಕನ್ನು ಕಟ್ಟಿಕೊಳ್ಳುವ ಭರವಸೆಯ ಗ್ಯಾರಂಟಿಯನ್ನು ಮೋದಿ ಕೊಟ್ಟಿದ್ದಾರೆ. ಆದ್ದರಿಂದ ಭವ್ಯ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಬಿಜೆಪಿಗೆ ಮತ ನೀಡುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ. ಸ್ವಾವಲಂಬಿ ಬದುಕಿಗಾಗಿ ಎಲ್ಲರೂ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. ಮಾಜಿ ಸಚಿವ ಬೈರತಿ ಬಸವರಾಜ ಮಾತನಾಡಿ, ಕಾಂಗ್ರೆಸ್ ಸರ್ಕಾರ ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸ ನಿಲ್ಲಿಸಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಲುವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡಬೇಕು. ಸಮಾಜದ ಎಲ್ಲರೂ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದರು. ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಈ ಹಿಂದೆ ಹಿಂದುಳಿದ ವರ್ಗಗಳ ಜನರು ತಮ್ಮ ಆಸ್ತಿ ಎಂದು ಕೆಲವರು ಭಾವಿಸಿದ್ದರು. ಕಾಂಗ್ರೆಸ್ನವರು ತಾವು ನುಡಿದಂತೆ ನಡೆದಿರುವುದಾಗಿ ಹೇಳುತ್ತಾರೆ. ಆದರೆ ಅಭಿವೃದ್ಧಿ ಶೂನ್ಯ ಆಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಕೆಲಸಗಳನ್ನು ತಮ್ಮದೇ ಎಂದು ಬಿಂಬಿಸುತ್ತಾರೆ. ದೇಶದ ಭದ್ರತೆ ಬಹುಮುಖ್ಯ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಮತ್ತೊಮ್ಮೆ ವಿಧಾನಸೌಧ ಒಳಗೆ ಬಿಡಬಾರದು. ಮೋದಿಯವರು ರೈತರಿಗೆ ಕೃಷಿ ಯೋಜನೆಗಳನ್ನು, ಜನರಿಗೆ ಉಚಿತವಾಗಿ ಅಕ್ಕಿ, ಕಾರ್ಮಿಕರಿಗೆ ದುಡಿಮೆ ಕೊಟ್ಟಿದ್ದಾರೆ. ಇದನ್ನು ನೋಡಿ ಎಲ್ಲರೂ ಬಿಜೆಪಿಗೆ ಮತ ನೀಡಬೇಕು ಎಂದರು. ಕಾಂಗ್ರೆಸ್‌ನಿಂದಾಗಿ ರಾಜ್ಯ ಸಂಪೂರ್ಣ ದಿವಾಳಿಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿ ನಿಲ್ಲಿಸುವ ಬೆದರಿಕೆ ನೀಡುತ್ತಿದ್ದಾರೆ. ದೇಶಕ್ಕೆ ಭದ್ರತೆ ನೀಡುವ ಗ್ಯಾರಂಟಿ ಪ್ರಧಾನಿ ಮೋದಿ ನೀಡಿದ್ದಾರೆ. ಆದ್ದರಿಂದ ನಾವು ಮೋದಿಯವರಿಗೆ ಬೆಂಬಲ ನೀಡೋಣ ಎಂದರು.ಸಮಾರಂಭದಲ್ಲಿ ವಿವಿಧ ಪಕ್ಷಗಳ ಸುಮಾರು 400ಕ್ಕೂ ಅಧಿಕ ಜನರು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಪ್ರಮುಖರಾದ ಸಂತೋಷಕುಮಾರ ಪಾಟೀಲ, ಕೆ. ಶಿವಲಿಂಗಪ್ಪ, ಭಾರತಿ ಅಳವಂಡಿ, ಮಂಜುನಾಥ ಓಲೇಕಾರ, ಎಸ್.ಎಸ್. ರಾಮಲಿಂಗಣ್ಣನವರ, ಕುಬೇರ ಕೊಂಡಜ್ಜಿ, ರಮೇಶ ಗುತ್ತಲ, ಶಿವಕುಮಾರ ನರಸಗೊಂಡರ, ಪರಮೇಶ ಗೂಳಣ್ಣನವರ, ಚೋಳಪ್ಪ ಕಸವಾಳ, ಜಿ.ಜಿ. ಹೊಟ್ಟಿಗೌಡ್ರ, ಕುಬೇರ ಹುಲಗೆಮ್ಮನವರ, ಮಂಜುಳಾ ಹತ್ತಿ, ಪ್ರಕಾಶ ಪೂಜಾರ, ಎ.ಬಿ. ಪಾಟೀಲ, ನಿಂಗರಾಜ ಕೋಡಿಹಳ್ಳಿ, ಮಾಳಪ್ಪ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.