ಹೈವೋಲ್ಟೇಜ್ ಕ್ಷೇತ್ರದಲ್ಲಿ ಫಲಿತಾಂಶದ ಹೈಟೆನ್ಷನ್!

| Published : Nov 18 2024, 12:00 AM IST

ಸಾರಾಂಶ

ಚನ್ನಪಟ್ಟಣ: ಹೈವೋಲ್ಟೇಜ್ ಕ್ಷೇತ್ರವೆಂದು ಪರಿಗಣಿಸ್ಪಟಿರುವ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಚುನಾವಣೆ ಮುಗಿದ ಬೆನ್ನಲ್ಲೆ ಒಂದು ಕಡೆ ಕಾಂಗ್ರೆಸ್-ಎನ್‌ಡಿಎ ಅಭ್ಯರ್ಥಿಗಳು ಹಾಗೂ ಮುಖಂಡರು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಮತ್ತೊಂದು ಕಡೆ ಬೆಟ್ಟಿಂಗ್ ಭರಾಟೆಯೂ ಜೋರಾಗಿ ನಡೆದಿದೆ.

ಚನ್ನಪಟ್ಟಣ: ಹೈವೋಲ್ಟೇಜ್ ಕ್ಷೇತ್ರವೆಂದು ಪರಿಗಣಿಸ್ಪಟಿರುವ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಚುನಾವಣೆ ಮುಗಿದ ಬೆನ್ನಲ್ಲೆ ಒಂದು ಕಡೆ ಕಾಂಗ್ರೆಸ್-ಎನ್‌ಡಿಎ ಅಭ್ಯರ್ಥಿಗಳು ಹಾಗೂ ಮುಖಂಡರು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಮತ್ತೊಂದು ಕಡೆ ಬೆಟ್ಟಿಂಗ್ ಭರಾಟೆಯೂ ಜೋರಾಗಿ ನಡೆದಿದೆ.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮುಗಿದ ಬೆನ್ನಲ್ಲೆ ಸೋಲು-ಗೆಲುವಿನ ಲೆಕ್ಕಾಚಾರ ಕುರಿತು ಚರ್ಚೆ ತೀವ್ರಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಅವರ ಬೆಂಬಲಿಗರು ನಿರತರಾಗಿದ್ದಾರೆ.

ಕಳೆದ ೨೦ದಿನಗಳಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿರುಬಿಸಿಲಿನಲ್ಲಿ ಬೆವರು ಸುರಿಸಿದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ಇದೀಗ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಮತ್ತೊಂದು ಕಡೆ ಗೆಲ್ಲುವ ಕುದುರೆಯ ಮೇಲೆ ಬಾಜಿ ಕಟ್ಟಲು ಜೂಜುಕೋರರು ಕಾಯುತ್ತಿದ್ದಾರೆ.

ಲೆಕ್ಕಾಚಾರದಲ್ಲಿ ಮುಖಂಡರು: ಮತದಾನ ಮುಗಿದ ಮರುದಿನದಿಂದಲೇ ಉಭಯ ಪಕ್ಷಗಳ ಮುಖಂಡರು ತಮಗೆ ದೊರೆತಿರುವ ಮತಗಳ ಕುರಿತು ಲೆಕ್ಕಾಚಾರ ಆರಂಭಿಸಿದ್ದಾರೆ. ನಗರ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಮಗೆ ದೊರೆತಿರಬಹುದಾದ ಲೀಡ್ ಹಾಗೂ ಎದುರಾಳಿ ಅಭ್ಯರ್ಥಿ ಪಡೆದಿರಬಹುದಾದ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ನಗರ ಪ್ರದೇಶದಲ್ಲಿ ಯಾವ ವಾರ್ಡ್‌ನಲ್ಲಿ ಯಾರಿಗೆ ಎಷ್ಟು ಲೀಡ್, ಗ್ರಾಮೀಣ ಭಾಗದಲ್ಲಿ ಯಾವ ಜಿಪಂ ವ್ಯಾಪ್ತಿಯಲ್ಲಿ ತಮ್ಮ ಪರ ಒಲವು ವ್ಯಕ್ತವಾಗಿಬಹುದು ಎಂಬ ಲೆಕ್ಕಾಚಾರೆ ನಡೆಸಿದ್ದು, ತಮ್ಮ ಮುಖಂಡರಿಗೆ ತಮ್ಮ ಲೆಕ್ಕಾಚಾರದ ವರದಿಯನ್ನು ಒಪ್ಪಿಸಿದ್ದಾರೆ.

ಜಾತಿ ಲೆಕ್ಕಾಚಾರವೂ ಜೋರು: ಜಾತಿವಾರು ಸಮೀಕರಣಗಳ ಕುರಿತು ಉಭಯ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ನಿರತವಾಗಿವೆ. ಯಾವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ, ಯಾರು ಹೆಚ್ಚು ಬೆಂಬಲಿಸಿಲ್ಲ ಎಂಬ ಲೆಕ್ಕಾಚಾರದ ಕುರಿತು ಉಭಯ ಪಕ್ಷಗಳ ಮುಖಂಡರು ತಮ್ಮದೇ ಆದ ವ್ಯಾಖ್ಯಾನ ಆರಂಭಿಸಿದ್ದಾರೆ.

ಬೆಟ್ಟಿಂಗ್ ಭರಾಟೆ: ಈ ಲೆಕ್ಕಾಚಾರನ್ನು ಆಧರಿಸಿ ಚನ್ನಪಟ್ಟಣದಲ್ಲಿ ಇದೀಗ ಬೆಟ್ಟಿಂಗ ಭರಾಟೆಯೂ ಜೋರಾಗಿ ನಡೆದಿದೆ. ಮತದಾನ ಮುಗಿದ ಬೆನ್ನಲ್ಲೆ ತಮ್ಮ ಫೇವರೇಟ್ ಅಭ್ಯರ್ಥಿ ಪರ ಬೆಟ್ಟಿಂಗ್ ಕಟ್ಟಲು ಹವ್ಯಾಸಿ ಜೂಜುಕೋರರು ಮುಂದಾಗಿದ್ದಾರೆ. ಕೆಲ ಹೋಟೆಲ್, ಟೀ ಅಂಗಡಿಗಳು ಬಾಜಿಕಟ್ಟೆಗಳಾಗಿ ಪರಿವರ್ತಿತವಾಗಿವೆ. ೫೦ ಸಾವಿರದಿಂದ ಐದು ಲಕ್ಷದವರೆಗೆ ಬಾಜಿ ಕಟ್ಟುತ್ತಿದ್ದು, ಫಲಿತಾಂಶದ ದಿನ ಹತ್ತಿರವಾದಂತೆ ಇದು ಇನ್ನು ತೀವ್ರಗೊಳ್ಳುವ ನಿರೀಕ್ಷೆ ಇದೆ.

ಏಜೆಂಟರಿಗೆ ಶುಕ್ರದೆಸೆ: ಇನ್ನು ಬಾಜಿ ಕಟ್ಟುವವರ ಜತೆಗೆ ಉಭಯತ್ರೇಯರಿಂದ ಬಾಜಿ ಕಟ್ಟಿಸಲು ತಾತ್ಕಾಲಿಕ ಏಜೆಂಟರು ಹುಟ್ಟಿಕೊಂಡಿದ್ದಾರೆ. ಎರಡು ಕಡೆಯವರನ್ನು ಒಂದುಕಡೆ ಸೇರಿಸಿ ಬಾಜಿ ಕಟ್ಟಿಸಿ ಕಮಿಷನ್ ಪಡೆಯುವ ದಂಧೆಯಲ್ಲಿ ಇವರು ನಿರತರಾಗಿದ್ದಾರೆ. ಎರಡು ಕಡೆ ಬಾಜಿ ಕಟ್ಟಿಸುವ ಏಜೆಂಟರ ಓಡಾಟ ಜೋರಾಗಿ ನಡೆದಿದೆ. ಬೆಟ್ಟಿಂಗ್ ಕಟ್ಟುವುದಕಿಂತ ಬಾಜಿ ಕಟ್ಟಿಸಿ ಕಮಿಷನ್ ಪಡೆಯುವುದು ಲೇಸೆಂದು ಇವರು ಈ ಕೆಲಸದಲ್ಲಿ ನಿರತರಾಗಿದ್ದಾರೆ.

ಲೀಡ್‌ಗೂ ಬಾಜಿ: ಅಭ್ಯರ್ಥಿಗಳ ಸೋಲು ಗೆಲುವಿಗೆ ಜತೆಗೆ ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರು ಲೀಡ್ ಪಡೆಯಲಿದ್ದಾರೆ. ನಗರದ ಯಾವ ವಾರ್ಡ್‌ನಲ್ಲಿ ಯಾರು ಲೀಡ್ ಪಡೆಯಲಿದ್ದಾರೆ ಎಂಬುದುರ ಕುರಿತು ಬೆಟ್ಟಿಂಗ್ ನಡೆಯುತ್ತಿದೆ ಎನ್ನಲಾಗಿದೆ. ಎಲ್ಲರೂ ತಮ್ಮದೇ ಆದ ಲೆಕ್ಕಾಚಾರ ಆಧರಿಸಿ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದಾರೆ.

ಹೊರಗಿನವರೇ ಹೆಚ್ಚು: ಇನ್ನು ಬೆಟ್ಟಿಂಗ್ ಕಟ್ಟುವ ವಿಚಾರದಲ್ಲಿ ಚನ್ನಪಟ್ಟಣದವರಿಗಿಂತ ಹೊರಗಿನವರೇ ಹೆಚ್ಚಾಗಿ ಆಸಕ್ತಿ ವಹಿಸುತ್ತಿರುವುದು ಕಂಡುಬಂದಿದೆ. ಅದರಲ್ಲೂ ಮಂಡ್ಯ, ಬೆಂಗಳೂರು ಬಾಜಿದಾರರ ಹಾಟ್ ಫೇವರೇಟ್ ಸ್ಪಾರ್ಟ್ ಆಗಿ ಚನ್ನಪಟ್ಟಣ ಪರಿವರ್ತಿತವಾಗಿದ್ದು, ಚನ್ನಪಟ್ಟಣ ಕ್ಷೇತ್ರದ ಫಲಿತಾಂಶದ ಕುರಿತು ಇವರು ಹೆಚ್ಚು ಬೆಟ್ಟಿಂಗ್ ಕಟ್ಟಲು ಆಸಕ್ತಿ ತೋರಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಬಾಕ್ಸ್

ಗೊಂದಲಕ್ಕೆ ಕಾರಣವಾದ ಸಿಪಿವೈ ಹೇಳಿಕೆ

ಚನ್ನಪಟ್ಟಣದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆದಿರುವ ಮಧ್ಯೆಯೇ ಗುರುವಾರ ಮಾಧ್ಯಮಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನೀಡಿದ ಹೇಳಿಕೆ ಸಾಕಷ್ಟು ಗೊಂದಲ ಮೂಡಿಸಿದೆ.

ದೇವೇಗೌಡರು ಹಾಗೂ ಕುಮಾರಸ್ವಾಮಿಯವರನ್ನು ಏನಾದರೂ ಅಂದರೆ ಒಕ್ಕಲಿಗರು ಸಹಿಸುವುದಿಲ್ಲ. ಜಮೀರ್ ಹೇಳಿಕೆಯಿಂದ ಲಾಭ, ನಷ್ಟ ಎರಡು ಆಗಿದ್ದು, ಯಾರು ಗೆದ್ದರೂ ಕೂದಲೆಳೆ ಅಂತದಿಂದ ಅವರು ಹೇಳಿರುವುದು ಸಾಕಷ್ಟು ಸಂಚಲನ ಮೂಡಿಸಿದೆ.

ಯೋಗೇಶ್ವರ್ ಹೇಳಿಕೆ ಬಾಜಿ ಕಟ್ಟುವವರಲ್ಲಿ ಗೊಂದಲ ಮೂಡಿಸಿದ್ದು, ಅಳೆದುತೂಗಿ ಬೆಟ್ಟಿಂಗ್ ಕಟ್ಟುವಂತೆ ಮಾಡಿದೆ.

ಪೊಟೋ೧೭ಸಿಪಿಟಿ೧:

ಸಾಂದರ್ಭಿಕ ಚಿತ್ರ.