ನಿಸ್ವಾರ್ಥ ಸೇವೆಗೆ ಫಲ ನಿಶ್ಚಿತ: ಪೂರ್ಣಿಮಾ

| Published : Dec 30 2023, 01:15 AM IST

ಸಾರಾಂಶ

ಯಾವುದೇ ಕಾರ್ಯವಾಗಲಿ ನಿಸ್ವಾರ್ಥ ಮನೋಭಾವನೆಯಿಂದ ಮಾಡಿದಲಿ ಅದಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ.

ಬಾಳೆಹೊನ್ನೂರು: ಸಂಘ ಸಂಸ್ಥೆಯ ಪದಾಧಿಕಾರಿಗಳು ಒಳ್ಳೆಯ ಮನಸ್ಸಿನಿಂದ ನಿಸ್ವಾರ್ಥ ಸೇವೆ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ಹೇಳಿದರು.

ಪಟ್ಟಣದ ಇನ್ನರ್‌ವ್ಹೀಲ್ ಕ್ಲಬ್ ಆಯೋಜಿಸಿದ್ದ ಜಿಲ್ಲಾ ಚೇರ್ಮನ್‌ರ ಅಧಿಕೃತ ಭೇಟಿ ಸಮಾರಂಭದಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಿ ಅವರು ಮಾತನಾಡಿದರು.

ಮಹಿಳೆಯರು ಸಮಾಜ ಸೇವೆ ಮಾಡಲು ಇನ್ನರ್‌ವ್ಹೀಲ್ ಕ್ಲಬ್ ಪೂರಕ ವೇದಿಕೆಯನ್ನು ಒದಗಿಸುತ್ತಿದ್ದು, ವಿಶ್ವದಾದ್ಯಂತ ಕ್ಲಬ್ ತನ್ನದೇ ಆದ ಕಾರ್ಯ ಚಟುವಟಿಕೆಯನ್ನು ನಡೆಸುತ್ತ ಸಮಾಜಮುಖಿಯಾಗಿದೆ. ಸಂತೋಷ, ಒಳ್ಳೆಯ ಮನಸ್ಸಿನಿಂದ ಸೇವಾ ಕಾರ್ಯಗಳನ್ನು ಮಾಡುವಾಗ ದೇವರಿಗೂ ಭಯಪಡದೇ ಕೆಲಸ ಮಾಡಬೇಕು.

ಇನ್ನರ್‌ವ್ಹೀಲ್ ಕ್ಲಬ್ ಪ್ರಸ್ತುತ ವರ್ಷ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ವಿಶ್ವದಲ್ಲಿ 1.20 ಲಕ್ಷ ಮಹಿಳೆಯರು ಸಕ್ರಿಯವಾಗಿ ಇದರಲ್ಲಿ ತೊಡಗಿಕೊಂಡಿದ್ದಾರೆ. ಭಾರತದಲ್ಲಿಯೇ 55 ಸಾವಿರ ಮಹಿಳೆಯರು ಇನ್ನರ್‌ವ್ಹೀಲ್‌ ಸಂಸ್ಥೆಯ ಸದಸ್ಯರಾಗಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಭಾರತದ 100 ಕ್ಲಬ್‌ಗಳು ಪ್ರಸ್ತುತ ವರ್ಷ 26 ಸಾವಿರಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ್ದು, ಬಾಳೆಹೊನ್ನೂರು ಕ್ಲಬ್ 25 ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇನ್ನರ್‌ವ್ಹೀಲ್ ಜಿಲ್ಲೆ 318ರವತಿಯಿಂದ ವಿದ್ಯಾರ್ಥಿಗಳಿಗಾಗಿ 100 ಬೈಸಿಕಲ್, ಟ್ಯಾಬ್‌ಗಳನ್ನು ವಿದ್ಯಾಭ್ಯಾಸದ ಉಪಯೋಗಕ್ಕಾಗಿ ನೀಡಿದೆ ಎಂದರು.

ಜಿಲ್ಲಾ ಚೇರ್ಮನ್‌ರ ಭೇಟಿ ಸಂದರ್ಭದಲ್ಲಿ ನಡೆಸಿರುವ ಸನ್ಮಾನ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದು, ಸನ್ಮಾನಿತರು ಹಂಚಿಕೊಂಡಿರುವ ತಮ್ಮ ಜೀವನದ ಅನುಭವಗಳು ಇತರರಿಗೆ ಮಾದರಿಯಾಗಿದೆ. ಅವುಗಳನ್ನು ನಾವು ಸಹ ಅಳವಡಿಸಿಕೊಳ್ಳಬೇಕಿದೆ ಎಂದರು.

ಕ್ಲಬ್ ಅಧ್ಯಕ್ಷೆ ಮೇನಕಾ ಜಯಪ್ರಕಾಶ್ ಮಾತನಾಡಿ, ಬಾಳೆಹೊನ್ನೂರು ಇನ್ನರ್‌ವ್ಹೀಲ್ ಕ್ಲಬ್ ಸದಾ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಾ ಮಹಿಳೆಯರ ಧ್ವನಿಯಾಗಿದ್ದು, ಮುಂದಿನ ದಿನಗಳಲ್ಲಿ ಕ್ಲಬ್‌ವತಿಯಿಂದ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯಿದೆ ಎಂದರು.

ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ ಶತಮುಖಿ ಎಂಬ ಕ್ಲಬ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸ್ಥಳೀಯ ಇನ್ನರ್‌ವ್ಹೀಲ್ ಸಂಸ್ಥೆ ರೋಟರಿ ಸಂಸ್ಥೆಯೊಂದಿಗೆ ಸೇರಿ ಮೌಲ್ಯಾಧಾರಿತ ಶಿಕ್ಷಣ, ರೈತಮಿತ್ರ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಿದೆ. ಕ್ಲಬ್ ವತಿಯಿಂದ ಶಾಶ್ವತ ಯೋಜನೆಯಾಗಿ ಪ್ರಯಾಣಿಕರ ತಂಗುದಾಣ ಮಾಡಿರುವುದು ಸಂಸ್ಥೆಯ ಕಾರ್ಯಕ್ಕೆ ಇನ್ನಷ್ಟು ಹೆಸರು ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಶ್ರಾವಣಿಗೆ ಸೈಕಲ್ ನೀಡಲಾಯಿತು. ಗಡಿಗೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ರೀಡಿಂಗ್ ಟೇಬಲ್, ಕುರ್ಚಿಗಳನ್ನು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಹೀಲ್‌ಚೇರ್ ನೀಡಲಾಯಿತು.

ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಇನ್ನರ್‌ವ್ಹೀಲ್ ಜಿಲ್ಲಾ ಉಪಾಧ್ಯಕ್ಷೆ ವೈಶಾಲಿ ಕುಡ್ವ, ಗ್ರಾಪಂ ಮಾಜಿ ಅಧ್ಯಕ್ಷೆ ಹೂವಮ್ಮ, ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಣಾಧಿಕಾರಿ ಎ.ಪಿ.ಶೈಲಾ, ಹ್ಯಾಮರ್ ಥ್ರೋನಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಸಾಲೀಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇನ್ನರ್‌ವ್ಹೀಲ್ ಕಾರ್ಯದರ್ಶಿ ಕಾಂಚನಾ ಸುಧಾಕರ್, ಬುಲೆಟಿನ್ ಎಡಿಟರ್ ನಿಶ್ಚಿತ, ಸಮತಾ ಮಿಸ್ಕಿತ್, ಜಾಹ್ನವಿ, ಸಹನಾ ಮತ್ತಿತರರು ಹಾಜರಿದ್ದರು.