ಶ್ರೀಮಂತರು ಕಾರ್ಮಿಕರನ್ನು ದಿನದ 24 ಗಂಟೆಯೂ ದುಡಿಸಿಕೊಳ್ಳುತ್ತಿದ್ದರು: ನ್ಯಾ.ಬಿ.ಪಾರ್ವತಮ್ಮ

| Published : May 08 2025, 12:32 AM IST

ಶ್ರೀಮಂತರು ಕಾರ್ಮಿಕರನ್ನು ದಿನದ 24 ಗಂಟೆಯೂ ದುಡಿಸಿಕೊಳ್ಳುತ್ತಿದ್ದರು: ನ್ಯಾ.ಬಿ.ಪಾರ್ವತಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯಕ್ಕೂ ಮುನ್ನ ಬಂಡವಾಳ ಶಾಹಿಗಳು, ಶ್ರೀಮಂತರು ಹಾಗೂ ಹಣವಂತರು ಕಾರ್ಮಿಕರನ್ನು ಹೇಗೆ ಬೇಕು ಹಾಗೆ ಬಳಸಿಕೊಳ್ಳುತ್ತಿದ್ದರು. ಕಾರ್ಮಿಕರು ಅದನ್ನು ಸಹಿಸಿಕೊಂಡು ದುಡಿಯುತ್ತಿದ್ದರು. ಆನಂತರದಲ್ಲಿ ಕಾರ್ಮಿಕರು ಸಂಘಟನೆಗೊಂಡು ಇದನ್ನು ಪ್ರತಿರೋಧಿಸಿದ್ದರ ಫಲ ದುಡಿಮೆ ಸಮಯ ಕಡಿಮೆಯಾಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಾರ್ಮಿಕರ ಸಂಘಟಿತ ಹೋರಾಟದ ಫಲವಾಗಿ ಸ್ವಾತಂತ್ರ್ಯ ಪೂರ್ವದಲ್ಲೇ ದುಡಿಮೆಯ ಸಮಯ ನಿಗಧಿಯಾಯಿತು. ಇದಕ್ಕೂ ಮುನ್ನ ಶ್ರೀಮಂತರು ಕಾರ್ಮಿಕರನ್ನು ದಿನದ 24 ಗಂಟೆಗಳ ಕಾಲವೂ ದುಡಿಸಿಕೊಳ್ಳುತ್ತಿದ್ದರು ಎಂದು ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಬಿ.ಪಾರ್ವತಮ್ಮ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಪಂ ಹಾಗೂ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯಕ್ಕೂ ಮುನ್ನ ಬಂಡವಾಳ ಶಾಹಿಗಳು, ಶ್ರೀಮಂತರು ಹಾಗೂ ಹಣವಂತರು ಕಾರ್ಮಿಕರನ್ನು ಹೇಗೆ ಬೇಕು ಹಾಗೆ ಬಳಸಿಕೊಳ್ಳುತ್ತಿದ್ದರು. ಕಾರ್ಮಿಕರು ಅದನ್ನು ಸಹಿಸಿಕೊಂಡು ದುಡಿಯುತ್ತಿದ್ದರು. ಆನಂತರದಲ್ಲಿ ಕಾರ್ಮಿಕರು ಸಂಘಟನೆಗೊಂಡು ಇದನ್ನು ಪ್ರತಿರೋಧಿಸಿದ್ದರ ಫಲ ದುಡಿಮೆ ಸಮಯ ಕಡಿಮೆಯಾಯಿತು ಎಂದರು.

ಪ್ರಾರಂಭದಲ್ಲಿ ಅಮೆರಿಕಾದ ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸಿದರು. ಆ ನಂತರದಲ್ಲಿ ತಮಿಳುನಾಡಿನ ಮದ್ರಾಸ್‌ನಲ್ಲಿ ಹೋರಾಟ ಆರಂಭವಾಯಿತು. ಅದಕ್ಕಾಗಿ ಮೇ ಡೇಯನ್ನು ಮದ್ರಾಸ್ ಡೇ ಅಂತಲೂ ಕರೆಯುತ್ತಾರೆ ಎಂದರು.

ಕಾರ್ಮಿಕರ ದಿನ ಎಂದರೆ ಅದು ಪ್ರತಿ ವರ್ಗಕ್ಕೂ ಸೇರುತ್ತದೆ. ಎಲ್ಲಾ ವರ್ಗದಲ್ಲೂ ಶ್ರಮಿಕರಿದ್ದಾರೆ. ಯಾರು ದೈಹಿಕ ಮತ್ತು ಮಾನಸಿಕ ಶಕ್ತಿ ಬಳಸಿ ದುಡಿಮೆ ಮಾಡುತ್ತಾರೋ ಅವರನ್ನು ಕಾರ್ಮಿಕರು ಎಂದು ಕರೆಯುತ್ತೇವೆ ಎಂದರು.

ಸ್ವತಂತ್ರ್ಯವಾಗಿ ವ್ಯಾಪಾರ, ವ್ಯವಹಾರ, ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳನ್ನು ಕಾರ್ಮಿಕರು ಎನ್ನುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಕಾನೂನುಗಳು ಕಾರ್ಮಿಕರಿಗೆ ಸಹಕಾರವಾಗಿ ನಿಂತಿದೆ. ಇದರ ಫಲವಾಗಿ ದಿನಕ್ಕೆ 8 ಗಂಟೆ ದುಡಿಮೆ ಮಾಡಬೇಕು. ಆನಂತರದ ದುಡಿಮೆಗೆ ಓವರ್ ಟೈಮ್ ಎಂದು ಪರಿಗಣಿಸಿ ಅದಕ್ಕೆ ಹೆಚ್ಚುವರಿಯಾಗಿ ಹಣ ಸಂದಾಯ ಮಾಡಬೇಕು ಎಂಬ ನಿಯಮಗಳು ಬಂದಿವೆ ಎಂದರು.

ಕಾರ್ಮಿಕ ಅಧಿಕಾರಿ ಸವಿತಾ ಮಾತನಾಡಿ, ಕಾರ್ಮಿಕರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಇಒ ಲೋಕೇಶ್‌ಮೂರ್ತಿ, ಕಾರ್ಮಿಕ ನಿರೀಕ್ಷಕಿ ಅಮರಾವತಿ, ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಕಾರ್ಯದರ್ಶಿ ನಾಗರಾಜು ಇತರರು ಇದ್ದರು.