ಸಾರಾಂಶ
- ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆಯಲ್ಲಿ ದಿನೇಶ್ ಕೆ.ಶೆಟ್ಟಿ ಲೇವಡಿ । ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಗೆ ಖಂಡನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಎಲ್‌ಪಿಜಿ ಸಿಲಿಂಡರ್‌ಗಳು, ಅಕ್ಕಿ, ಚಿನ್ನ, ಎಲ್ಲ ಸರಕುಗಳ ಬೆಲೆ, ದಿನಬಳಕೆ ವಸ್ತುಗಳ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಜ್ಞಾನವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಲೇವಡಿ ಮಾಡಿದರು.ನಗರದ ಜಯದೇವ ಸರ್ಕಲ್‌ನಲ್ಲಿ ಶುಕ್ರವಾರ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ದೇಶದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿಯಾಗಿದೆ. ಗ್ಯಾಸ್ ಸಬ್ಸಿಡಿ ತೆಗೆದು ಪ್ರಧಾನಿ ಮೋದಿ ಸರ್ಕಾರ ಬಡವರ ವಿರೋಧಿಯೆನಿಸಿದೆ. ಔಷಧಿ, ಗೊಬ್ಬರ, ಡೀಸೆಲ್, ಪೆಟ್ರೋಲ್ ಸೇರಿ ಎಲ್ಲದರ ಬೆಲೆ ಏರಿಕೆ ಮಾಡುವ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್ ಮಾತನಾಡಿ, ಬಿಜೆಪಿ ಯಾವ ಮುಖವಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುತ್ತಿದೆ. ₹4 ಹಾಲಿನ ದರ ಹೆಚ್ಚಿಸಿ ಅದನ್ನು ನೇರವಾಗಿ ರೈತರ ಜೇಬಿಗೆ ಹಾಕಿದ್ದೇವೆ. ಇದರಲ್ಲಿ ನಯಾಪೈಸೆಯೂ ಸರ್ಕಾರದ ಖಜಾನೆಗೆ ಬರುವುದಿಲ್ಲ. ರಾಜಕೀಯ ಅಂದರೆ ಬರೀ ಅಧಿಕಾರ ಅಲ್ಲ. ಸೈದ್ಧಾಂತಿಕ ಸ್ಪಷ್ಟತೆಯಿಂದ ಜನರ ಪರವಾಗಿ ನಿಂತು ನಿರಂತರ ಹೋರಾಟ ನಡೆಸುವುದು ರಾಜಕೀಯ ಬದ್ಧತೆಯೇ ಆಗಿದೆ ಎಂದರು.ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಷ್ಮಾ ಪಾಟೀಲ್ ಮಾತನಾಡಿ, ದೇಶದ ಇಂಧನ, ರಸಗೊಬ್ಬರ, ಪೆಟ್ರೋಲ್ ಸೇರಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ. ಜನಾಕ್ರೋಶ ಏನಿದ್ದರೂ ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಬೇಕೇ ಹೊರತು ಬೆಲೆ ಏರಿಕೆ ತಗ್ಗಿಸಲು ಗ್ಯಾರಂಟಿ ಯೋಜನೆ ಕೊಟ್ಟ ಕಾಂಗ್ರೆಸ್ ಪಕ್ಷದ ವಿರುದ್ಧವಲ್ಲ ಎಂದರು.ಮುಖಂಡರಾದ ಶುಭಮಂಗಳ, ರುದ್ರಮ್ಮ, ರಾಧಾಬಾಯಿ, ಗೀತಾ ಚಂದ್ರಶೇಖರ್, ಸಲ್ಮಾಬಾನು, ಜಯಮ್ಮ, ಗೀತಾ, ಸುಧಾ, ಸುಮಿತ್ರ, ಕಾವ್ಯ, ಸುಧಾ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಹನುಮಂತರಾಜ್, ಅಕ್ಬರ್ ಖಾನ್ ಇತರರು ಇದ್ದರು.- - -
-18ಕೆಡಿವಿಜಿ36:ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ದಾವಣಗೆರೆಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು.