ಅಧರ್ಮದ ಅಮಲು ಏರಿಕೆ ಆತಂಕಕಾರಿ: ಡಾ. ಹುಲಿಕಲ್ ನಟರಾಜ್

| Published : Oct 31 2024, 01:00 AM IST

ಸಾರಾಂಶ

ಸಮಾಜದಲ್ಲಿ ಅಧರ್ಮದ ಅಮಲು ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಸಮೀಪ ವೀರಭೂಮಿ ಪ್ರವಾಸಿ ಗ್ರಾಮದಲ್ಲಿ ಪರಿಷತ್ತಿನ ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸಮಾಜದಲ್ಲಿ ಅಧರ್ಮದ ಅಮಲು ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಸಮೀಪ ವೀರಭೂಮಿ ಪ್ರವಾಸಿ ಗ್ರಾಮದಲ್ಲಿ ಪರಿಷತ್ತಿನ ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲೆಡೆ ವಿಕೃತ ಮನಸ್ಸು ಜಾಗೃತವಾಗುತ್ತಿದೆ. ಮೌಢ್ಯತೆ ಅಧಿಕವಾಗುತ್ತಿದೆ. ಬೇರು ಸಹಿತ ಕೀಳಲು ಪರಿಷತ್ತು ನಾಲ್ಕು ವರ್ಷಗಳಿಂದ ನಿರಂತರ ಹಲವು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದರು.

ಮೌಢ್ಯದ ಕನಸು ಕಿತ್ತು ಹಾಕುವುದು ಧರ್ಮ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮನುಷ್ಯ ಸಂಬಂಧದ ನಡುವೆ ನೋವು ಉಂಟಾಗದಂತೆ ಮಾಡುವುದು ಧರ್ಮ ಎಂದರು.

ನಂಬಿಕೆ ಇರಲಿ, ಅಪನಂಬಿಕೆ ಬೇಡ ಆಚರಣೆಗಳ ಮೂಲಕ ಸಮಾಜಕ್ಕೆ ಯಾವುದೇ ತೊಂದರೆ ಉಂಟಾಗಬಾರದು ಎಂದು ಹೇಳಿದರು.

ಸಂಸ್ಥೆಯ ಪ್ರಮುಖರಾದ, ವೈದ್ಯ ಡಾ. ಅಂಜನಪ್ಪ ಮಾತನಾಡಿ, ಜನರ ನಂಬಿಕೆ ಪರೀಕ್ಷೆ ಮಾಡುವುದು ಅವಮಾನ ಮಾಡಿದಂತೆ ಆಗುತ್ತದೆ. ಮನಸ್ಸಿನ ಮೈಲಿಗೆ ತೊಳೆಯಬೇಕಾಗಿದೆ. ಮನುಷ್ಯನಿಗೆ ಕೇಡು ಬಯಸುವ ದೇವರು ಎಲ್ಲಿಯೂ ಇರುವುದಿಲ್ಲ. ದೇವರನ್ನು ಮಾರುಕಟ್ಟೆ ಸರಕನ್ನಾಗಿ ಮಾಡುವುದು ಸಲ್ಲದು ಎಂದರು.

ಎರಡು ದಿನಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪರಿಷತ್ ಪದಾಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಪ್ರತಿನಿಧಿಗಳು ಇದ್ದರು.