ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಹೂವಿನಹಿಪ್ಪರಗಿ-ಕಾಮನಕೇರಿ-ಯಾಳವಾರ ಜಿಲ್ಲಾ ಮುಖ್ಯರಸ್ತೆಯ ಅಗಲೀಕರಣವನ್ನು ನಿಯಮಾನುಸಾರವೇ ಮಾಡಲಾಗಿದೆ. ಆದರೆ, ಈ ಬಗ್ಗೆ ಬಸವನಬಾಗೇವಾಡಿಯಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಇದರಲ್ಲಿ ನಮ್ಮ ಪಾತ್ರವೇನು ಇಲ್ಲವೆಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಹೂವಿನಹಿಪ್ಪರಗಿ-ಕಾಮನಕೇರಿ-ಯಾಳವಾರ ಜಿಲ್ಲಾ ಮುಖ್ಯರಸ್ತೆಯ ಅಗಲೀಕರಣವನ್ನು ನಿಯಮಾನುಸಾರವೇ ಮಾಡಲಾಗಿದೆ. ಆದರೆ, ಈ ಬಗ್ಗೆ ಬಸವನಬಾಗೇವಾಡಿಯಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಇದರಲ್ಲಿ ನಮ್ಮ ಪಾತ್ರವೇನು ಇಲ್ಲವೆಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಅವರು, ಆ ರಸ್ತೆಯೂ ಬ್ರಿಟಿಷ್ ಕಾಲದ್ದಾಗಿದ್ದು, 30 ಮೀಟರ್ ಅಗಲವಿದೆ. ಈ ನಕ್ಷೆಯ ಪ್ರಕಾರ ರಸ್ತೆ ಮಾಡಲು ಹೊರಟರೆ ಜನರಿಗೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರೊಂದಿಗೆ ಚರ್ಚಿಸಿ ರಸ್ತೆ ಅಗಲೀಕರಣವನ್ನು 108 ಅಡಿ ಮಾಡುವ ಬದಲಾಗಿ 55 ಅಡಿ ಮಾಡಲು ನಿರ್ಧಾರ ಮಾಡಲಾಗಿತ್ತು. ಇದಕ್ಕೆ ರಸ್ತೆ ಬದಿ ಮನೆಗಳಿರುವ ಜನರು ಒಪ್ಪಿಗೆ ಸೂಚಿಸಿದ್ದರು. ಅದರಂತೆ, ಮನೆಗಳ ತೆರವಿಗೆ ಗ್ರಾಮ ಪಂಚಾಯಿತಿ, ಲೋಕೋಪಯೋಗಿ ಇಲಾಖೆಯಿಂದ ನೋಟೀಸ್ ನೀಡಿ ಎರಡು ತಿಂಗಳು ಕಾಲ ಮನೆಗಳನ್ನು ತೆರವುಗೊಳಿಸಲು ಕಾಲಾವಕಾಶ ನೀಡಲಾಗಿತ್ತು. ಅದರಂತೆ ಬೀರಪ್ಪ ಗುಡಿಯವರು ತಮ್ಮ ಗುಡಿಯನ್ನು ತೆರವುಗೊಳಿಸಿ ತಮ್ಮ ಒಳಾವರಣದಲ್ಲಿ ಕಟ್ಟಿಸಿಕೊಂಡರು. ದರ್ಗಾ ಆವರಣಗೋಡೆ, ಡಾ.ಅಂಬೇಡ್ಕರ ವೃತ್ತ, ಡಾ.ಅಂಬೇಡ್ಕರ ಭವನ, ಹೇಮರಡ್ಡಿ ಮಲ್ಲಮ್ಮ ವೃತ್ತ, ಸಂಗೊಳಿರಾಯಣ್ಣ ವೃತ್ತ ಸಹ ತೆರವುಗೊಳಿಸಲಾಗಿದೆ. ರಸ್ತೆ ಅಗಲೀಕರಣವನ್ನು ನಾವು ನಾವು ಕದ್ದುಮುಚ್ಚಿ ಮಾಡಿಲ್ಲ. 123 ಜನರು ರಸ್ತೆ ಅಗಲೀಕರಣಕ್ಕೆ ಸ್ವ-ಇಚ್ಛೆಯಿಂದ ಒಪ್ಪಿಗೆ ಪತ್ರ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಮುಂದೆ ಒಪ್ಪಿಗೆ ಪತ್ರ ನೀಡಿರುವ ಕುರಿತು ಹೇಳಿಕೆ ನೀಡಿದ್ದಾರೆ. 22 ಜನರು ಮಾತ್ರ ಒಪ್ಪಿಗೆ ಪತ್ರ ನೀಡಿಲ್ಲ. ಇದರ ಕುರಿತು ಅಗತ್ಯ ದಾಖಲೆಗಳನ್ನು, ರಸ್ತೆ ನಕ್ಷೆಯನ್ನು ಸುದ್ದಿಗಾರರಿಗೆ ತೋರಿಸಿದರು.ಈ ರಸ್ತೆ ಅಗಲೀಕರಣದಲ್ಲಿ ಸಂಪೂರ್ಣ ಮನೆಗಳು ತೆರವುಗೊಂಡಿಲ್ಲ. ರಸ್ತೆ ಅತಿಕ್ರಮಣವಾದವುಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಈ ಧರಣಿಯ ಮುಂದಾಳತ್ವವಹಿಸಿರುವ ಅದಾಂಸಾಬ ಢವಳಗಿ ತಮ್ಮ 25-40 ಜಾಗೆಯನ್ನು 40-60 ಎಂದು ಗ್ರಾಮ ಪಂಚಾಯಿತಿಯ ಇ-ಸ್ವತ್ತಿನಲ್ಲಿ ದಾಖಲು ಮಾಡಿದ್ದಾರೆ. ಈ ರೀತಿ ದಾಖಲು ಮಾಡಿದ ಅಧಿಕಾರಿಗಳ ಮೇಲೆ, ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾನು ಈ ರಸ್ತೆ ಅಗಲೀಕರಣ ವಿಷಯದಲ್ಲಿ ಬಡ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದೇನೆ. ಅಂಗನವಾಡಿ ಕೇಂದ್ರವನ್ನು ಬೇರೆಡೆ ಹೊಸದಾಗಿ ಮಾಡಲು ಹೇಳಲಾಗಿದೆ. ರಸ್ತೆ ಅಗಲೀಕರಣ ವೇಳೆಯಲ್ಲಿ ಹಾಳಾಗಿರುವ ಸಾರ್ವಜನಿಕರ ಆಸ್ತಿಗಳನ್ನು ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರೂ ಹೋರಾಟ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬ ಮುಗಿದ ನಂತರ ಧರಣಿ ಸ್ಥಳಕ್ಕೆ ತೆರಳಿ ಅವರ ಮನವೊಲಿಸಿ ರಸ್ತೆ ಅಗಲೀಕರಣಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷೆ ಶಕುಂತಲಾ ಲಗಳಿ, ಉಪಾಧ್ಯಕ್ಷ ಮುತ್ತಪ್ಪ ಇಂಗಳಗಿ, ಮುಖಂಡರಾದ ಸಚಿನಗೌಡ ಪಾಟೀಲ, ಅನಿಲಗೌಡ ಪಾಟೀಲ, ಗುರನಗೌಡ ಪಾಟೀಲ, ಗ್ರಾಪಂ ಸದಸ್ಯರಾದ ಬಸಣ್ಣ ಬಾಗೇವಾಡಿ, ಈರನಗೌಡ ಪಾಟೀಲ, ಜಟ್ಟೆಪ್ಪ ಕತಗಾರ, ಎಂ.ಕೆ.ಇನಾಮದಾರ ಇತರರು ಇದ್ದರು.ಕೋಟ್‌ರಸ್ತೆ ಅಗಲೀಕರಣ ವೇಳೆಯಲ್ಲಿ ನಿರಾಶ್ರಿತರಾದ ಕುಟುಂಬಗಳಿಗೆ ನಿವೇಶನ, ಮನೆ ಕಟ್ಟಡ ಮಾಡಿಕೊಡುವ ಭರವಸೆ ನೀಡಲಾಗಿದೆ. ಅವರಿಗೆ ಅನ್ಯಾಯ ಮಾಡುವುದಿಲ್ಲ. ಆದರೂ ಕೆಲವರು ನಿರಾಶ್ರಿತರಿಂದ ಹಣ ಪಡೆದು ಹೈಕೋರ್ಟ್‌ಗೆ ಹೋದರೂ ಇವರ ಅರ್ಜಿ ವಜಾ ಆಗಿದೆ. ಸ್ಟೇ ಆಗಲಿಲ್ಲ. ಈ ವಿಷಯ ಕೋರ್ಟ್‌ನಲ್ಲಿದ್ದರೂ ಕೆಲ ಮುಖಂಡರು ಹೋರಾಟ ಮಾಡುತ್ತಿರುವದು ಸರಿಯಲ್ಲ. ಈ ಹೋರಾಟದಲ್ಲಿ ನಮ್ಮ ಕುರಿತು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿರುವುದು ಸರಿಯಲ್ಲ. ನಾನು ಎಂದಿಗೂ ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ನಾನು ನನ್ನ ಕಾಯಕ ಮಾಡುತ್ತಿದ್ದೇನೆ. ಕೆಲವರು ಹತಾಶರಾಗಿ ನನ್ನ ಬಗ್ಗೆ ಇಲ್ಲ-ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಎಂದಿಗೂ ದ್ವೇಷ ರಾಜಕೀಯ ಮಾಡುವುದಿಲ್ಲ.ರಾಜುಗೌಡ ಪಾಟೀಲ, ಶಾಸಕ