ಸಾರಾಂಶ
ಮಳೆಗಾಲ ಮುಗಿಯುತ್ತಾ ಬಂದರೂ ಇಲಾಖೆಗೆ ಸಂಬಂಧಿಸಿದ ರಸ್ತೆಯ ಹೊಂಡಗಳಿಗೆ ಕನಿಷ್ಠ ತೇಪೆ ಹಚ್ಚುವ ಕಾರ್ಯವನ್ನು ಮಾಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಗೋಕರ್ಣ: ಪ್ರವಾಸಿ ತಾಣದ ರಸ್ತೆಗಳಲ್ಲಿ ಹೊಂಡಗಳು ಬಿದ್ದಿದ್ದು, ಇದನ್ನು ಸರಿಪಡಿಸಲು ಲೋಕೋಪಯೋಗಿ ಇಲಾಖೆಯವರಯ ಹಣವಿಲ್ಲ ಎನ್ನುತ್ತಿದ್ದು, ದುರಸ್ತಿ ಕಾರ್ಯ ಮಾಡುವವರು ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಳೆಗಾಲ ಮುಗಿಯುತ್ತಾ ಬಂದರೂ ಇಲಾಖೆಗೆ ಸಂಬಂಧಿಸಿದ ರಸ್ತೆಯ ಹೊಂಡಗಳಿಗೆ ಕನಿಷ್ಠ ತೇಪೆ ಹಚ್ಚುವ ಕಾರ್ಯವನ್ನು ಮಾಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವು ಕಡೆ ಜನರೇ ರಸ್ತೆ ಹೊಂಡ ಮುಚ್ಚಲು ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಜೀವಕ್ಕೆ ಕುತ್ತು ತರುವ ಮಾರ್ಗ: ಇಲ್ಲಿನ ಭದ್ರಕಾಳಿ ಕಾಲೇಜಿನ ಎದುರು, ಗಂಗಾವಳಿ ಸಾಗುವ ತಲಗೇರಿಯ ಶಾಲೆಯ ಬಳಿಯ ಬೃಹತ್ ಹೊಂಡಗಳು ವಾಹನ ಸವಾರರಿಗೆ ಜೀವಕ್ಕೆ ಅಪಾಯ ತರುವಂತಿದ್ದು, ಹಲವರು ಈಗಾಗಲೇ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನೂ ಮೇಲಿನಕೇರಿ ಸರ್ಕಾರಿ, ಆಸ್ಪತ್ರೆ, ಭದ್ರಕಾಳಿ ಮಂದಿರದ ಮುಂಭಾಗ, ರಥಬೀದಿಯ ಹಲವಡೆ ರಸ್ತೆ ಚರ್ಮ ಸುಲಿದಂತೆ ಛಿದ್ರವಾಗಿದ್ದು, ಮಳೆ ಬಂದರೆ ನೀರು ತುಂಬಿ ಹೊಂಡ ಎಲ್ಲಿದೆ ಎಂದು ತಿಳಿಯದೆ ವಾಹನ ಸವಾರರು ಪರದಾಡುತ್ತಿದ್ದಾರೆ. ಮಾದನಗೇರಿಯಿಂದ ಗೋಕರ್ಣ ತಲುಪುವವರೆಗೆ ಅನೇಕ ಕಡೆ ಹೊಂಡ ಬಿದ್ದಿದ್ದು, ಇಲ್ಲಿಯೂ ಅವಘಡಗಳು ನಡೆದಿದೆ.ಸ್ಥಳೀಯ ಆಡಳಿತವೂ ನಿಸ್ತೇಜ: ಭಾರಿ ಮಳೆ ಸುರಿದಾಗ ಇಲ್ಲಿನ ರಥಬೀದಿ, ಗಂಜಿಗದ್ದೆಯಲ್ಲಿ ಚರಂಡಿ ನೀರು ಉಕ್ಕಿ ರಸ್ತೆಯಲ್ಲಿ ಹರಿದು ನದಿಯಂತಾಗುತ್ತದೆ. ಇದನ್ನು ಸರಿಪಡಿಸಲು ಗ್ರಾಮ ಪಂಚಾಯಿತಿ ಬಳಿ ಸಾಕಷ್ಟು ಅನುದಾನವಿಲ್ಲ ಎನ್ನಲಾಗುತ್ತಿದ್ದು, ಇದರಿಂದ ಸಮಸ್ಯೆ ಮುಂದುವರಿದಿದ್ದು, ಜನರ ಪರದಾಟ ನಿರಂತರವಾಗಿದೆ.