ಪ್ರತಿ ರೋಗಿಯ ಚೇತರಿಕೆಯಲ್ಲಿ ವೈದ್ಯರಷ್ಟೇ ಸಹಾಯಕ ಆರೋಗ್ಯ ಪದವೀಧರರ ಪಾತ್ರ ಮುಖ್ಯವಾಗಿದ್ದು ಅವರ ಸೇವೆ ಹಾಗೂ ಬದ್ಧತೆಯೇ ಪ್ರತಿ ಆಸ್ಪತ್ರೆ ಶಕ್ತಿ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿಯವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಪ್ರತಿ ರೋಗಿಯ ಚೇತರಿಕೆಯಲ್ಲಿ ವೈದ್ಯರಷ್ಟೇ ಸಹಾಯಕ ಆರೋಗ್ಯ ಪದವೀಧರರ ಪಾತ್ರ ಮುಖ್ಯವಾಗಿದ್ದು ಅವರ ಸೇವೆ ಹಾಗೂ ಬದ್ಧತೆಯೇ ಪ್ರತಿ ಆಸ್ಪತ್ರೆ ಶಕ್ತಿ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿಯವರು ತಿಳಿಸಿದರು. ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಪ್ರಥಮ ವರ್ಷದ ಅಲೈಡ್ ಹೆಲ್ತ್ ಸೈನ್ಸಸ್, ಫಿಸಿಯೋ ಥೆರಪಿ ಮತ್ತು ಡಿಪ್ಲೋಮಾ ಕೋರ್ಸ್‌ಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿ ಚಿಕಿತ್ಸೆಗೆ ಕೇವಲ ವೈದ್ಯರು ಮಾತ್ರ ಸಾಲದು. ಉತ್ತಮ ಪ್ರಯೋಗಶಾಲಾ ತಂತ್ರಜ್ಞರು, ಎಕ್ಸ್‌-ರೇ ತಂತ್ರಜ್ಞರು, ಫಿಸಿಯೋ ಥೆರಪಿಸ್ಟ್‌ಗಳು ಮತ್ತು ಇತರ ಅಲೈಡ್ ಹೆಲ್ತ್ ವೃತ್ತಿಪರರ ಅವಶ್ಯಕತೆ ಇದೆ ಎಂದರು. ಈ ಸಹಾಯಕ ವಿಜ್ಞಾನಿಗಳು ವೈದ್ಯಕೀಯ ತಂಡದ ಬೆನ್ನೆಲುಬಾಗಿದ್ದು, ರೋಗಿಯ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದರು. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವುದರ ಜೊತೆಗೆ, ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಮಾನವೀಯತೆಯ ಆಧಾರದ ಮೇಲೆ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶಯದಂತೆ, ನಿಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಸಮಾಜದ ಆರೋಗ್ಯ ರಕ್ಷಣೆಗಾಗಿ ಮುಡಿಪಾಗಿಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಸ್. ಸಚ್ಚಿದಾನಂದ್ ಇಂದು ವಿಶ್ವದಾದ್ಯಂತ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ವೈದ್ಯರು ಮತ್ತು ನರ್ಸ್‌ಗಳ ಕೊರತೆಯಷ್ಟೇ ಸಹಾಯಕ ಆರೋಗ್ಯ ವೃತ್ತಿಪರರ ಕೊರತೆಯೂ ಇದೆ. ಸಿದ್ಧಗಂಗಾ ಸಂಸ್ಥೆಯ ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗಿಸಿವೆ. ಅಲೈಡ್ ಹೆಲ್ತ್ ಸೈನ್ಸಸ್ ಪದವೀಧರರು ಕೇವಲ ಆಸ್ಪತ್ರೆಗಳಿಗಷ್ಟೇ ಸೀಮಿತರಾಗದೆ, ಸಂಶೋಧನೆ ಮತ್ತು ಅಭಿವೃದ್ಧಿ, ಆರೋಗ್ಯ ವಿಮೆ, ಶಿಕ್ಷಣ, ವೈದ್ಯಕೀಯ ಪ್ರವಾಸೋದ್ಯಮ ಮತ್ತು ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲೂ ತಮ್ಮ ವೃತ್ತಿಯನ್ನು ರೂಪಿಸಿಕೊಳ್ಳಬಹುದು ಎಂದು ಕರೆ ನೀಡಿದರು.ಸಿದ್ಧಗಂಗಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಜಂಟಿ ಕಾರ್ಯದರ್ಶಿಗಳಾದ ಡಾ. ಶಿವಕುಮಾರಯ್ಯ, ವೈದ್ಯಕೀಯ ಸೇವೆಗಳ ಕಾರ್ಯದರ್ಶಿ ಟಿ.ಎಂ.ಸ್ವಾಮಿ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ, ನಿರ್ದೇಶಕ ಡಾ.ಎಸ್.ಪರಮೇಶ್‌, ಪ್ರಾಚಾರ್ಯರಾದ ಡಾ.ಶಾಲಿನಿ, ವೈದ್ಯಕೀಯ ಅಧಿಕ್ಷಕ ಡಾ.ನಿರಂಜನಮೂರ್ತಿ, ಪಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಜತಾ ಆನಂದ್, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಕಾಂತ್ ಎನ್, ಸಿಇಓ ಡಾ.ಸಂಜೀವಕುಮಾರ್ ಮುಂತಾದವರಿದ್ದರು.