ಇಂದು ಜಗತ್ತಿನಲ್ಲಿ ಚೀನಾ, ಅಮೆರಿಕ ಮತ್ತು ಯೂರೋಪ್ ನಂತರದಲ್ಲಿ ಭಾರತ ಟೆಕ್ಸಟೈಲ್ ಉದ್ಯಮದಲ್ಲಿ ಮುಂದುವರೆಯಲು ಭಾವಸಾರ ಸಮಾಜದ ಪ್ರಮುಖ ಪಾತ್ರವಿದೆ ಎಂದು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.
ಸವಣೂರು: ಇಂದು ಜಗತ್ತಿನಲ್ಲಿ ಚೀನಾ, ಅಮೆರಿಕ ಮತ್ತು ಯೂರೋಪ್ ನಂತರದಲ್ಲಿ ಭಾರತ ಟೆಕ್ಸಟೈಲ್ ಉದ್ಯಮದಲ್ಲಿ ಮುಂದುವರೆಯಲು ಭಾವಸಾರ ಸಮಾಜದ ಪ್ರಮುಖ ಪಾತ್ರವಿದೆ ಎಂದು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.
ಪಟ್ಟಣದ ಶ್ರೀ ವಿಠಲ ಹರಿಮಂದಿರದ ಸಭಾಭವನದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಭಾವಸಾರ ಉತ್ಸವ 2026ರ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಭಾವಸಾರ ಸಮುದಾಯವು ಸೌರಾಷ್ಟ್ರ ಗುಜರಾತ್‌ನಿಂದ ಬಂದಿದ್ದು, ಭಾರತದ ಜವಳಿ ಉದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜವಳಿ ವ್ಯಾಪಾರದಲ್ಲಿ ಭಾವಸಾರ ಸಮುದಾಯದ ಪ್ರಾಬಲ್ಯವಿದೆ. ಆರಂಭದಲ್ಲಿ ಬಟ್ಟೆಯ ಮೇಲೆ ಮುದ್ರಣ ಭಾವಸಾರ ಸಮಾಜ, ಕಾಲ ಕಾಲಕ್ಕೆ ಈ ಸಮಾಜ ಟೆಕ್ಸಟೈಲ್ ಟ್ರೇಡಿಂಗ್‌ನಲ್ಲಿ ಪ್ರಾಮುಖ್ಯತೆ ಪಡೆದಿದೆ. ಈ ಹಿಂದೆ ಕಾಲ ಒಂದಿತ್ತು ರಾಜರು ಭೂಮಿ ಉಳ್ಳವರು ಜಗತ್ತನ್ನು ಆಳುತ್ತಿದ್ದರು. ನಂತರದಲ್ಲಿ ಕೈಗಾರಿಕಾ ಕ್ರಾಂತಿಯಿಂದಾಗಿ ಹಣ ಉಳ್ಳವರು ಆಳುತ್ತಿದ್ದರು. ಆದರೆ ಇದು ಕಲಿಯುಗ ಕಾಲ, ಜ್ಞಾನದ ಕಾಲ, ಜ್ಞಾನ ಉಳ್ಳವರು ಇಂದು ಜಗತ್ತನ್ನು ಆಳಬಹುದಾಗಿದೆ. ಜ್ಞಾನದ ಹಿಂದೆ ಜಯ ಸಾಧ್ಯ ಎಂದು ಜ್ಞಾನದ ಮಹತ್ವವನ್ನು ತಿಳಿಸಿ ವ್ಯಕ್ತಿತ್ವ ಮತ್ತು ಮನುಷ್ಯತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಮುದಾಯವು ಶಿಕ್ಷಣ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿದೆ. ಇದೇ ರೀತಿ ಎಲ್ಲ ಕ್ಷೇತ್ರಗಳಲ್ಲಿ ಸಮಾಜ ಪ್ರಗತಿಸಿ ಸಾಧಿಸಲು ಮುಂದಾಗಬೇಕು. ಅಧಿಕಾರ ಇದ್ದರೂ, ಇರದಿದ್ದರೂ ಸಹ ನಾವೆಲ್ಲರೂ ಸೇರಿ ಸಹಾಯ ಮಾಡೋಣ ಎಂದು ಕರೆ ನೀಡದರು.
ತಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿನಂತೆ ಭಾವಸಾರ ಕ್ಷತ್ರಿಯ ಸಮಾಜದವರು ನಮ್ಮೊಂದಿಗೆ ಇದ್ದಾರೆ. ಇಂತಹ ಸಣ್ಣ ಸಮಾಜಗಳನ್ನು ಗುರುತಿಸಿ ಅವರೊಂದಿಗೆ ಒಡನಾಡಿಯಾಗಿ ಸಹಾಯಹಸ್ತ ಚಾಚಬೇಕೆಂಬ ನಿಟ್ಟಿನಲ್ಲಿ ನಾವು ಸಹ ಕಳೆದ 25 ವರ್ಷಗಳಿಂದ ಎಸ್.ಆರ್. ಬೊಮ್ಮಾಯಿ ಹಾಗೂ ಶ್ರೀಮತಿ ಗಂಗಮ್ಮ ಎಸ್.ಬೊಮ್ಮಾಯಿ ಅವರ ಟ್ರಸ್ಟ್ ಮೂಲಕ ಪ್ರತಿ ವರ್ಷ ಕನಿಷ್ಠ 100 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಆದ್ದರಿಂದ ಮುಂಬರುವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ತಮ್ಮೊಂದಿಗೆ ಕೈಜೋಡಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಪುರಸ್ಕರಿಸಿ ವಿದ್ಯಾರ್ಥಿವೇತನ ನೀಡುತ್ತೇನೆ ಎಂದು ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಈ ಸಮುದಾಯವು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದೆ. ಮಕ್ಕಳನ್ನು ಪೋಷಿಸಿ, ಅವರಿಗೆ ಸಂಸ್ಕಾರವನ್ನು ನೀಡಿ, ವಿದ್ಯೆಯ ಜೊತೆಗೆ ಸಂಸ್ಕಾರಯುತ ಜೀವನ ನಡೆಸಲು ಪ್ರೇರೇಪಿಸಬೇಕು ಎಂದು ಹೇಳಿದ ಅವರು, ಸಮಾರಂಭದಲ್ಲಿ ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ತೋರಿದ 7 ತಾಲೂಕಿನ ವಿದ್ಯಾರ್ಥಿಗಳಿಗೆ ಪುರಸ್ಕರಿಸುವುದರ ಮೂಲಕ ವಿದ್ಯಾರ್ಥಿ ವೇತನ ನೀಡಲಾಯಿತು.ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಬೃಂದಾ ಎಂ. ತಾಪ್ಸೆ, ಬಿ.ಎಸ್.ಸಿ ತೋಟಗಾರಿಕೆ ಕ್ಷೇತ್ರದಲ್ಲಿ 17 ಚಿನ್ನದ ಪಡೆದ ಸಹನಾ ಮಂಜುನಾಥ ಪಟಗೆ, ಎಂಬಿಬಿಎಸ್ ಪಡೆದ ಸವಣೂರಿನ ಡಾ. ಸುಮಾ ಕಿಶೋರಕುಮಾರ ರಾಶಿನಕರ ಹಾಗೂ ಹಾನಗಲ್ ತಾಲೂಕು ಅಕ್ಕಿಆಲೂರಿನ ಡಾ. ಅನುಪ ಮಾಳದಕರ ಅವರಿಗೆ ವಿಶೇಷ ಗೌರವ ಸಲ್ಲಿಸಿ ಪುರಸ್ಕರಿಸಲಾಯಿತು. ಇದೇ ವೇಳೆ ಭಾವಸಾರ ಸಮಾಜದ ಹಾವೇರಿ ಆರ್.ಟಿ.ಓ ವಿನಯಾ ಕಾಟೋಕರ, ಹುಬ್ಬಳಿಯ ಉಪಮೇಯರ್ ರತ್ನಾಬಾಯಿ ನಾಜರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾನಿಧ್ಯ ವಹಿಸಿದ್ದ ಪಂಢರಪುರದ ಗುರುವರ್ಯ ಪ್ರಭಾಕರಬುವಾ ಬೋದಲೆ ಮಹಾರಾಜರು ಆಶೀರ್ವಚನ ನೀಡಿದರು. ಜಿಲ್ಲಾಧ್ಯಕ್ಷ ಪ್ರಕಾಶ ಮಾಳದಕರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾ ಸಭಾದ ರಾಜ್ಯಾಧ್ಯಕ್ಷ ಶ್ರೀನಿವಾಸ ಪಿಸ್ಸೆ, ಪದಾಧಿಕಾರಿಗಳಾದ ಕೆ.ಜಿ ಟಿಕಾರೆ, ಉಮೇಶ ಗುಜ್ಜರ, ಗೀತಾಬಾಯಿ ಅಂಬೇಕರ, ಪ್ರಮೋದ ನವಲೆ, ಅರುಣಕುಮಾರ ಕುಂಟೆ, ತಾಲೂಕು ಅಧ್ಯಕ್ಷರಾದ ಖಂಡೋಬ ರಾಶಿನಕರ, ಮಹಿಳಾ ಅಧ್ಯಕ್ಷೆ ಮಮತಾ ಶೆಂಡಗೆ, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಮುರುಳಿಧರ ಶೆಂಡಗೆ ಸೇರಿದಂತೆ ಇತರರು ಇದ್ದರು.