ಚಿಕ್ಕಮಗಳೂರುಸಮಾಜ ಪರಿವರ್ತನೆಯಲ್ಲಿ ಸಿನಿಮಾ ಮಾಧ್ಯಮದ ಕೊಡುಗೆ ಅಪಾರ. ಪೋಷಕರು ಮಕ್ಕಳಿಗೆ ಸದಭಿರುಚಿಯುಳ್ಳ ಸಿನಿಮಾ ಗಳನ್ನು ನೋಡುವ ಹವ್ಯಾಸ ಬೆಳೆಸಬೇಕು ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಡಾ. ಬಸವ ಮರುಳಸಿದ್ದ ಸ್ವಾಮೀಜಿಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಮಾಜ ಪರಿವರ್ತನೆಯಲ್ಲಿ ಸಿನಿಮಾ ಮಾಧ್ಯಮದ ಕೊಡುಗೆ ಅಪಾರ. ಪೋಷಕರು ಮಕ್ಕಳಿಗೆ ಸದಭಿರುಚಿಯುಳ್ಳ ಸಿನಿಮಾ ಗಳನ್ನು ನೋಡುವ ಹವ್ಯಾಸ ಬೆಳೆಸಬೇಕು ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ದೊಡ್ಡಕುರುಬರಹಳ್ಳಿಯ ಬಸವತತ್ವಪೀಠದ ಆವರಣದಲ್ಲಿ ಆಯೋಜಿಸಿದ್ದ ನೋಡುವುದನ್ನೇ ನೋಡೋಣ ಸದಭಿ ರುಚಿಯ ಸಿನಿಮಾಗಳ ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಪ್ರಸ್ತುತ ದಿನಮಾನದಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ನೋಡಲು ಸಹ ಬೇಜಾರಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಿನಿಮಾಗಳನ್ನು ನೋಡುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಸಿನಿಮಾಗಳಲ್ಲಿ ಅಪರಾಧ, ಅನೈತಿಕ ಚಟುವಟಿಕೆಗಳನ್ನು ವೈಭವಿಕರಿಸುವ ವಾತಾವರಣ ನಿರ್ಮಾಣವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಸಮಾಜದ ಮೇಲೆ ಸಿನಿಮಾಗಳ ಪ್ರಭಾವ ಬಹಳಷ್ಟಿದೆ. ಸಿನಿಮಾಗಳಲ್ಲಿ ಒಳ್ಳೆಯ ಸಂದೇಶ ತೋರಿಸುವ ಅಭಿರುಚಿಯನ್ನು ನಿರ್ದೇಶಕರು ಮತ್ತು ನಿರ್ಮಾಪಕರು ಬೆಳೆಸಿಕೊಳ್ಳಬೇಕು. ಸದಭಿರುಚಿಯುಳ್ಳ ಸಿನಿಮಾಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.

ಕೌದಿ ಸಿನಿಮಾ ಅಪರೂಪದ ಸಿನಿಮಾಗಳಲ್ಲಿ ಒಂದಾಗಿದೆ. ಮನಸ್ಸು ಮತ್ತು ಸಮಾಜವನ್ನು ಬೇರೆಡೆಗೆ ಕೊಂಡೊಯ್ಯುವ ಸಿನಿಮಾಗಳ ನಡುವೆ ಇಂತಹ ಸಿನಿಮಾ ನೋಡುವಂತಾಗಬೇಕು. ನೋಡಬಾರದನ್ನು ನೋಡಿ ಇಂದಿನ ಯುವ ಸಮುದಾಯ ಹಾಳಾಗುತ್ತಿದೆ. ಈ ಹಿನ್ನಲೆಯಲ್ಲಿ ನೋಡುವುದನ್ನೇ ನೋಡೋಣ ಎಂಬ ವಿಭಿನ್ನ ಕಾರ್ಯಕ್ರಮವನ್ನು ಬಸವತತ್ವಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ಕೌದಿ ಸಿನಿಮಾ ನಿರ್ದೇಶಕ ರವೀಂದ್ರನಾಥ್ ಸಿರಿವರ ಸಿನಿಮಾ ಕುರಿತು ಮಾತನಾಡಿ ಹಿಂದೆ ಸಿನಿಮಾ ನೋಡುಗರು ಪಂಚೇಂದ್ರಿಯ ಗಳನ್ನು ಏಕೀಕರಿಸಿ, ಏಕಾಗ್ರತೆಯಿಂದ ಸಿನಿಮಾ ನೋಡುತ್ತಿದ್ದರು. ಸಿನಿಮಾದಿಂದ ಪ್ರೇರಿತರಾಗಿ ತಮ್ಮನ್ನು ತಾವು ಬದಲಾಯಿಸಿ ಕೊಳ್ಳುತ್ತಿದ್ದರು. ಅಂತಹ ಮೌಲ್ಯಾಧಾರಿತ ಸಿನಿಮಾಗಳು ತೆರೆಮೇಲೆ ಬರುತ್ತಿದ್ದವು. ಹಿಂದಿನ ಸದಭಿ ರುಚಿಯುಳ್ಳ ಚಿತ್ರಗಳು ಇಂದು ಬರುತ್ತಿಲ್ಲ. ಅಂತಹ ಸದಭಿರುಚಿಯುಳ್ಳ ಚಿತ್ರಗಳನ್ನು ಮತ್ತೆಬರುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.ಕೌದಿ ಸಿನಿಮಾ ಉತ್ತರ ಕರ್ನಾಟಕದ ಒಂದು ಜನಾಂಗದ ಕಥೆ. ‘ಗೋಂದಲಿಗರು’ ಎಂಬ ಸಮುದಾಯದ ಜೀವನ ಚಿತ್ರಣ ವನ್ನು ತೆರೆಯ ಮೇಲೆ ತರಲಾಗಿದೆ. ಈ ಜನಾಂಗ ಹಿಂದೆ ರಾಜಮಹಾರಾಜರ ಕಾಲದಲ್ಲಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಕೌದಿ ಹೊಲೆಯುವ ಕಸಬು ಮಾಡುತ್ತಿದ್ದರು ಎಂದು ತಿಳಿಸಿದರು.

ಈ ಬಡ ಸಮುದಾಯದ ಮೇಲೆ ಶ್ರೀಮಂತರ ದಬ್ಬಾಳಿಕೆ, ಕೌದಿ ಹೊಲೆಯುವ ಕರಕುಶಲ ಈಗಿನ ಜನಾಂಗಕ್ಕೆ ತಿಳಿಸುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಹಿರಿಯರ ಬಟ್ಟೆ ಸಂಗ್ರಹಿಸಿ ಕೌದಿ ಹೊಲೆದು ಬಳಸುವುದರಿಂದ ಹಿರಿಯರು ನಮಗೆ ಹಾರೈಸುತ್ತಾರೆ ಎಂಬ ಭಾವನೆ ಕೌದಿ ತಯಾರಿಕೆ ಹಿಂದೆ ಇದೆ ಎಂದು ಹೇಳಿದರು.

ಇದೆ ವೇಳೆ ಕೌದಿ ಸಿನಿಮಾ ಪ್ರರ್ದಶನ ನಡೆಯಿತು. ಕಾರ್ಯಕ್ರಮದಲ್ಲಿ ಸಿನಿಮಾಸಕ್ತರು ಇದ್ದರು.