ರೈತರ ಶ್ರೇಯೋಭಿವೃದ್ಧಿಗೆ ಸಹಕಾರ ಬ್ಯಾಂಕ್‌ಗಳ ಪಾತ್ರ ಅಪಾರ: ಸಚಿವ ಕೆ.ಎನ್. ರಾಜಣ್ಣ

| Published : Oct 07 2024, 01:34 AM IST

ರೈತರ ಶ್ರೇಯೋಭಿವೃದ್ಧಿಗೆ ಸಹಕಾರ ಬ್ಯಾಂಕ್‌ಗಳ ಪಾತ್ರ ಅಪಾರ: ಸಚಿವ ಕೆ.ಎನ್. ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕು ಆರ್ಥಿಕವಾಗಿ ಪ್ರಗತಿಯತ್ತ ಸಾಗಿದ್ದು, ಆರ್ಥಿಕವಾಗಿ ಸಬಲವಾಗಲು ಹೆಚ್ಚು ಹೆಚ್ಚಾಗಿ ಕೃಷಿಯೇತರ ಸಾಲ ಸೌಲಭ್ಯಗಳನ್ನು ವಿತರಿಸಬೇಕು ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಧಾರವಾಡ: ರೈತರಿಗೆ ಮತ್ತು ಬಡ ವರ್ಗದ ಜನತೆಗೆ ಆರ್ಥಿಕ ಸಾಲ ಸೌಲಭ್ಯ ಕಲ್ಪಿಸುವಲ್ಲಿ ಸಹಕಾರ ಬ್ಯಾಂಕುಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಶುಕ್ರವಾರ ಕೆ.ಸಿ.ಸಿ. ಬ್ಯಾಂಕಿನ ಗದಗ ಶಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಸಹಕಾರ ಬ್ಯಾಂಕುಗಳ ಆರ್ಥಿಕ ಬಲವರ್ಧನೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಅನುದಾನ ರಾಷ್ಟ್ರೀಕೃತ ಬ್ಯಾಂಕುಗಳ ಬದಲಿಗೆ ಜಿಲ್ಲಾ ಕೇಂದ್ರ ಬ್ಯಾಂಕುಗಳಲ್ಲಿ ಇಡುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಮುಂದಿನ ತೀರ್ಮಾನ ಕೈಕೊಳ್ಳುವುದಾಗಿ ತಿಳಿಸಿದರು.

ಬ್ಯಾಂಕು ಆರ್ಥಿಕವಾಗಿ ಪ್ರಗತಿಯತ್ತ ಸಾಗಿದ್ದು, ಆರ್ಥಿಕವಾಗಿ ಸಬಲವಾಗಲು ಹೆಚ್ಚು ಹೆಚ್ಚಾಗಿ ಕೃಷಿಯೇತರ ಸಾಲ ಸೌಲಭ್ಯಗಳನ್ನು ವಿತರಿಸಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನೂ ಬಲಪಡಿಸಬೇಕು. ಸಹಕಾರ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವೃತ್ತಿಪರ ತರಬೇತಿ ಕೇಂದ್ರಗಳಲ್ಲಿನ ಅನುಭವಿಕ ತಜ್ಞರಿಂದ ಕಾಲ ಕಾಲಕ್ಕೆ ತರಬೇತಿ ಕೊಡಿಸಬೇಕು. ಸಹಕಾರ ಬ್ಯಾಂಕುಗಳ ಕಾರ್ಯನಿರ್ವಹಣೆಯ ಮೇಲೆ ಆಡಳಿತವರ್ಗ ಸೂಕ್ತ ನಿಯಂತ್ರಣ ಹೊಂದಿರಬೇಕು. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗುವ ಸೇವೆ ಒದಗಿಸಲು ಮತ್ತು ಸಹಕಾರ ಸಂಸ್ಥೆಗೆ ಯಾವುದೇ ಹಾನಿಯಾಗದಂತೆ ಆಡಳಿತವರ್ಗ ಸೂಕ್ತ ನಿಗಾ ವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ಕೆಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಬ್ಯಾಂಕಿನ ಪ್ರಗತಿಗೆ ರೂಪಿಸಿದ ಅಭಿವೃದ್ಧಿಪರ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಬ್ಯಾಂಕು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಆದ್ದರಿಂದ ಮೂರು ಜಿಲ್ಲೆಗಳ ರೈತ ಸದಸ್ಯರಿಗೆ ಕೃಷಿ ಸಂಬಂಧಿತ ಸಾಲ ಸೌಲಭ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸುವಂತೆ ಸಚಿವರಿಗೆ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.

ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕ ಮಲ್ಲಪ್ಪ ಕಲಗುಡಿ, ಸಿ.ಎಂ. ಪಾಟೀಲ, ಜಿ.ವ್ಹಿ. ಪಾಟೀಲ, ಸಿ.ಬಿ.ದೊಡ್ಡಗೌಡ್ರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಎಸ್. ರಮಣರೆಡ್ಡಿ, ಕೆಸಿಸಿ ಬ್ಯಾಂಕಿನ ಅಧಿಕಾರಿಗಳಾದ ಎಸ್.ಜಿ. ಆಲದಕಟ್ಟಿ, ವಸೂಲಾಧಿಕಾರಿ ಬಿ.ಬಿ. ನಾಯಕ ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.