ಸಾರಾಂಶ
ಹಾವೇರಿ: ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಹಿರಿದಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ ಹೇಳಿದರು.
ನಗರದ ರಜನಿ ಸಭಾಭವನದಲ್ಲಿ ಸುಯೋಗ ವಿವಿಧೋದ್ದೇಶಗಳ ಸಹಕಾರಿ ಸಂಘದ ೧೩ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಎಂಬುದು ಅಭಿವೃದ್ಧಿಯ ಸಂಕೇತ. ಪ್ರಗತಿಗೆ ಪೂರಕ. ಎಲ್ಲರ ದುಡಿಮೆ ನಾಡಿಗೆ ಹಿರಿಮೆ ತರಬಲ್ಲದು ಎಂಬುದಕ್ಕೆ ಸಹಕಾರ ರಂಗ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.ಮಹಿಳೆಯರಿಗೆ, ಕೃಷಿಕರಿಗೆ ಹಾಗೂ ಯುವಕರ ಸಬಲೀಕರಣಕ್ಕಾಗಿ ಆರ್ಥಿಕ ನೆರವು ಹಾಗೂ ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಅರ್ಹರಿಗೆ ಶೇ. ೬ ಬಡ್ಡಿದರದಲ್ಲಿ ಸಾಲ ನೀಡಿದ್ದು ಶ್ಲಾಘನೀಯ ಎಂದರು.ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೆಕಾರ ಮಾತನಾಡಿ, ಸಾಲ ಕೊಡುವುದು ಸುಲಭ, ಮರುಪಾವತಿ ಮಾಡುವುದು ಕಷ್ಟಕರ. ಕಟ್ಟಕಡೆಯ ವ್ಯಕ್ತಿಗೂ ಸಾಲ ದೊರೆಯುವಂತಾಗಬೇಕು ಎಂದರು.
ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಏನೆಲ್ಲ ಸಾಧನೆಯಾಗಿದ್ದರೂ ಆಗಬೇಕಾದ್ದು ಇನ್ನೂ ಬಹಳಷ್ಟು ಇದೆ ಎಂಬುದನ್ನು ಮರೆಯಲಾಗದು ಎಂದರು.ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಮಾಡುವ ಕೆಲಸವನ್ನು ಪ್ರೀತಿಸುವವರಿಗೆ ಕೆಲಸ ಎಂದು ಹೊರೆಯಾಗುವುದಿಲ್ಲ, ಆನಂದವನ್ನು ತರುವ ಹೊಳೆಯಾಗುತ್ತದೆ. ಪ್ರೇರಣೆ, ಪ್ರೋತ್ಸಾಹ ಮತ್ತು ಪ್ರಯತ್ನ ಈ ಮೂರು ಪದಗಳು ನಮ್ಮ ಜೀವನವನ್ನು ಬದಲಾಯಿಸುತ್ತದೆ. ಸಂಘದ ಪ್ರಗತಿಗೆ ಗ್ರಾಹಕರು ಬಂಡವಾಳವಾಗಿರುವುದರಿಂದ ನಗುಮೊಗದ ಸೌಜನ್ಯ ಸೇವೆ ಅವರಿಗೆ ಸಿಗುವಂತಾಗಬೇಕು ಎಂದರು.
ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಎಸ್.ಡಿ. ಬಳಗಾರ್ ಮಾತನಾಡಿ, ಸಹಕಾರ ಚಳವಳಿ ಜನರ ಚಳವಳಿಯಾಗಿದ್ದು, ಜನರು ಜನರಿಗಾಗಿ ನಡೆಸುವ ಆಂದೋಲನವಾಗಿದೆ ಎಂದರು.ಸುಯೋಗ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಕಸವನಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾದ್ಯಂತ ೩೫೦೦ಕ್ಕೂ ಹೆಚ್ಚು ಶೇರುದಾರರನ್ನು ಹೊಂದಿದ್ದು, ಸುಮಾರು ₹೨೦ ಕೋಟಿ ಸಾಲ ವಿತರಣೆ ಮಾಡಲಾಗಿದೆ. ನಿರಂತರವಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಅನೇಕ ಕುಟುಂಬಗಳಿಗೆ ನೆರವು ನೀಡಿ ಅವರ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಲಾಗಿದೆ ಎಂದರು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಂಗನಾಥ ಜಿ.ಎಸ್., ರಾಮಚಂದ್ರ, ಶಿವಾನಂದಪ್ಪ, ವೆಂಕಟೇಶ ನಾರಾಯಣಿ, ವಿನಾಯಕ ಕುರುಬರ, ಸಂತೋಷ್ ಕುಮಾರ್, ದಾನಪ್ಪಗೌಡ ಹಾಗೂ ಆಡಳಿತ ಮಂಡಳಿಯ ಸದಸ್ಯ ಉಪಸ್ಥಿತರಿದ್ದರು. ಭಾಗ್ಯ ವಿರಕ್ತಮಠ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮಾಸನಕಟ್ಟಿ ವರದಿ ಮಂಡಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.