ಬಾಗಲಕೋಟೆ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಗಳ 35ನೇ ಪದವಿ ಪ್ರದಾನ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಾರ್ವಜನಿಕರಲ್ಲಿ ಈಗ ದಂತ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿದೆ. ಪದವಿಧರರಾದ ನೀವು ಈಗ ವೈದ್ಯರಾಗಿರುವಿರಿ. ವೃತ್ತಿಯಿಂದ ಜಗತ್ತಿಗೆ ಮುಖಾಮುಖಿಯಾಗಬೇಕಾದ ಸಮಯವಿದು. ವೃತ್ತಿ ಘನತೆಯನ್ನು ಸೇವೆಯ ಮೂಲಕ ಹೆಚ್ಚಿಸಿ. ಈಗ ಆರೋಗ್ಯ ಕ್ಷೇತ್ರದಲ್ಲಿ ದಂತ ವೈದ್ಯಕೀಯ ಪಾತ್ರ ಮಹತ್ವದ್ದಾಗಿದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಈಸ್ಥೆಟಿಕ್ ಆ್ಯಂಡ್ ಕಾಸ್ಮೆಟಿಕ್ ಡೆಂಟಿಸ್ಟ್ರಿ ಸಂಸ್ಥಾಪಕ ಅಧ್ಯಕ್ಷ ಡಾ.ಸಂದೇಶ ಮಾಯೆಕರ್ ಹೇಳಿದರು.ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಗಳ 35ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯಲ್ಲಿ ನೀತಿ ಮತ್ತು ಅನುಕಂಪ ಮುಖ್ಯವಾದದ್ದು, ರೋಗಿಗಳೊಂದಿಗೆ ಉತ್ತಮವಾಗಿ ವರ್ತಿಸಿ. ಈ ವೃತ್ತಿಯಲ್ಲಿ ಸಂವಹನ ಕಲೆ ಅಗತ್ಯವಾಗಿ ಬೇಕು. ಜೊತೆಗೆ ಮಾನವೀಯತೆಯೂ ಇರಲಿ ಎಂದು ಯುವವೈದ್ಯರಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಇದುವರೆಗೆ ವಿದ್ಯಾರ್ಥಿಗಳಾಗಿದ್ದ ನೀವು ಇಂದಿನಿಂದ ವೈದ್ಯರಾಗಿ ವೃತ್ತಿ ಜೀವನ ಆರಂಭಿಸಿರುವಿರಿ. ನಿಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಗ್ರಾಮೀಣ ಜನರ ಮತ್ತು ಬಡವರ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿ. ವೈದ್ಯ ವೃತ್ತಿಯ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿ ಎಂದು ಹೇಳಿದರು.ವಿದ್ಯಾರ್ಥಿನಿ ಪ್ರಾರ್ಥನಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ರವಿರಾಜ ದೇಸಾಯಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ನಿವೇದಿತಾ ಪಾಟೀಲ ಪರಿಚಯಿಸಿದರು. ಡಾ.ಮಹೇಶ ಗೌಡರ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವೇದಿಕೆಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಮತ್ತು ಪ್ರಾಚಾರ್ಯ ಡಾ.ರವಿರಾಜ ದೇಸಾಯಿ ಉಪಸ್ಥಿತರಿದ್ದರು.75 ಬಿಡಿಎಸ್ ಮತ್ತು 18 ಎಂಡಿಎಸ್ ಪದವಿಧರರಿಗೆ ಪದವಿ ಪ್ರದಾನ ಮಾಡಲಾಯಿತು. ಎಂಡಿಎಸ್ ಪರೀಕ್ಷೆಯಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದ ಡಾ.ಮಹಮದ್ ಫಾಝಿಲ್ ಹಾಗೂ 10ನೇ ರ್ಯಾಂಕ್ ಪಡೆದ ಡಾ.ಉಜ್ಮಾ ಪರ್ವಿನ್ ಸುಲ್ತಾನಾ ಅವರನ್ನು ಮತ್ತು ಬಿ.ಡಿ.ಎಸ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ 15 ಪದವಿಧರರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಎಂ.ಡಿ.ಎಸ್ ನೀಟ್ ಪರೀಕ್ಷೆಯಲ್ಲಿ 499ನೇ ರ್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿ ಡಾ.ಸಾಯಿಪ್ರಭು ಅವರನ್ನು ಕೂಡ ಸನ್ಮಾನಿಸಲಾಯಿತು.
ಪದವಿಧರರಾದ ಡಾ.ಪ್ರಿಯಮ್, ಡಾ.ಅನನ್ಯ ಮತ್ತು ಡಾ.ಶ್ರೇಯಾ ಅನಿಸಿಕೆ ಹಂಚಿಕೊಂಡರು. ಡಾ.ಗಿರೀಶ ಚೌರ ವಂದಿಸಿದರು. ಡಾ.ಸೌಮ್ಯಾ, ಡಾ.ಮಹಾಂತೇಶ ಮತ್ತು ಡಾ.ವಿಜಯಲಕ್ಷ್ಮಿ ನಿರೂಪಿಸಿದರು. ಬಿವಿವಿ ಸಂಘದ ಗೌರವಾನ್ವಿತ ಸದಸ್ಯರು, ವಿವಿಧ ಕ್ಷೇತ್ರಗಳ ಆಹ್ವಾನಿತ ಗಣ್ಯರು, ಅಂಗ-ಸಂಸ್ಥೆಗಳ ಮುಖ್ಯಸ್ಥರು, ದಂತ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ವೈದ್ಯರು, ವಿದ್ಯಾರ್ಥಿಗಳು ಮತ್ತು ಪಾಲಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.