ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳು ಕೈಜೋಡಿಸಿದರೆ ಮಾತ್ರ ಸರ್ಕಾರದ ಯಾವುದೇ ಯೋಜನೆ ಯಶಸ್ವಿ ಕಾಣಲು ಸಾಧ್ಯ. ನಾವು ಸೂಚಿಸಿದ್ದನ್ನು ಅನುಷ್ಠಾನಗೊಳಿಸಿ ಜನರಿಗೆ ಮುಟ್ಟಿಸುವ ಸರ್ಕಾರಿ ನೌಕರರ ಸೇವೆಗೆ ಅಭಿನಂದನೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು. ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಎರಡು ದಿನಗಳ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.ಕರ್ನಾಟಕವನ್ನು ಹೊರತುಪಡಿಸಿದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಸರ್ಕಾರದ ಕಾರ್ಯಕ್ರಮದ ವೇದಿಕೆಗಳಲ್ಲಿ ಜನಪ್ರತಿನಿಧಿಗಳು ಮಾತ್ರ ಇರುತ್ತಾರೆ. ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಜೊತೆಯಲ್ಲಿ ಕೂರಿಸಿಕೊಳ್ಳುವುದಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಎಲ್ಲರೂ ಜೊತೆಯಲ್ಲೇ ಇರುತ್ತೇವೆ. ನಮ್ಮಲ್ಲಿ ಸೌಹಾರ್ದಭಾವ ಇದೆ. ಸರ್ಕಾರವು ಅಷ್ಟೇ ಎಲ್ಲರನ್ನೂ ಸಮಾನತೆಯಿಂದ ನೋಡಿಕೊಳ್ಳುತ್ತದೆ ಎಂದರು.ಒತ್ತಡ ನಿವಾರಣೆಗೆ ಕ್ರೀಡೆ
ಯಾವುದೇ ಕ್ರೀಡೆಯಲ್ಲಿ ಆಗಲಿ ಪಾಲ್ಗೊಳ್ಳುವುದೇ ಮುಖ್ಯವಾಗಿರುತ್ತದೆ ಸೋಲು, ಗೆಲುವನ್ನು ಸಮಾನಾಗಿ ಸ್ವೀಕರಿಸಬೇಕು. ನಿಜ ಜೀವನದಲ್ಲೂ ಇಂತ ಪಾಠಗಳು ಮುಖ್ಯವಾಗಬೇಕು ಸರ್ಕಾರಿ ನೌಕರರು ಆರೋಗ್ಯ ಭಾಗ್ಯ ಎಂಬ ವಿಚಾರ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಏಕೆಂದರೆ ನೌಕರರಿಗೆ ಬಹಳಷ್ಟು ಜವಾಬ್ದಾರಿ ಇರುತ್ತದೆ, ಒತ್ತಡ ಇರುತ್ತದೆ. ಕ್ರೀಡೆಯಲ್ಲಿ ಭಾಗಿ ಆಗುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದರು. ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಸರ್ಕಾರಿ ಅಧಿಕಾರಿಗಳನ್ನು ನಾವು ಕೆಲಸದ ವಿಚಾರದಲ್ಲಿ ಒಮ್ಮೊಮ್ಮೆ ಗದರುತ್ತೇವೆ. ಅಭಿವೃದ್ಧಿ ಕೆಲಸಗಳು ಬೇಗ ನಡೆಯಬೇಕು, ಯೋಜನೆಗಳು ಜನರಿಗೆ ಸರಿಯಾಗಿ ಮುಟ್ಟಬೇಕು ಎಂಬುದಷ್ಟೇ ಇದರ ಉದ್ದೇಶವಾಗಿರುತ್ತದೆ. ನಾವು ಎಲ್ಲರೂ ಒಂದು ಕುಟುಂಬ ಇದ್ದಂತೆ ಸಣ್ಣಪುಟ್ಟ ಜಗಳ ಗಲಾಟೆ ಇರುತ್ತದೆ ಎಂದರು.ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ನಿತ್ಯ ಯೋಗ ಮಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳಿ. ಸಂಜೆ ವಾಕಿಂಗ್ ಮಾಡಿ. ಈ ಮೂಲಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಆಗ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿರುವ ಜಿಲ್ಲೆಯ ಕ್ರೀಡಾಪಟುಗಳನ್ನು ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ವೈ.ನಂಜೇಗೌಡ, ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಪಂ ಸಿಇಓ ಪ್ರವೀಣ್ ಸಿ.ಬಾಗೇವಾಡಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಉಪವಿಭಾಗಾಧಿಕಾರಿ ಮೈತ್ರಿ, ತಹಸೀಲ್ದಾರ್ ನಯನಾ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್,ಮತ್ತಿತರರು ಇದ್ದರು.