ಸಾರಾಂಶ
ಹಳಿಯಾಳ: ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು, ಉದ್ಯಮಶೀಲತೆಯ ಮನೋಭಾವನೆ ಮತ್ತು ನವೀನ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಇಂತಹ ಮನೋಭಾವ ಮಾತ್ರ ವ್ಯಕ್ತಿಯ ವೈಯಕ್ತಿಕ ಹಾಗೂ ವ್ಯಾಪಾರಿಕ ಯಶಸ್ಸನ್ನು ತಲುಪಲು ಸಹಾಯ ಮಾಡುತ್ತದೆ ಎಂದು ವಿಆರ್‌ಡಿಎಂ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಶ್ಯಾಮ್ ಕಾಮತ್ ತಿಳಿಸಿದರು.
ಗುರುವಾರ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯಲ್ಲಿ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಹಳಿಯಾಳ, ಮಣಿಪಾಲ್ ಫೌಂಡೇಶನ್ ಮತ್ತು ಎನ್ಪವರ್ ಸಂಸ್ಥೆ ಮುಂಬೈ ಆಶ್ರಯದಲ್ಲ್ಲಿಸ್ವಜೀವಿ ಶೀರ್ಷಿಕೆಯಡಿಯಲ್ಲಿ ಆರಂಭಗೊಂಡ ಮೂರು ದಿನಗಳ ಉದ್ಯಮಶೀಲತಾ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುವ ವಿಶೇಷ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಉದ್ಯಮಿಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದ ಅವರು, ಈ ಕಾರ್ಯಾಗಾರದಲ್ಲಿ ಈಗಾಗಲೇ ತರಬೇತಿ ಪಡೆದು ತಮ್ಮ ಉದ್ಯಮಗಳಲ್ಲಿ ಯಶಸ್ವಿಯಾಗಿರುವ ಉದ್ಯಮಶೀಲರಿಗೆ ಅವರ ಮನೋಭಾವನೆ, ಕೌಶಲ್ಯ ದೀರ್ಘಕಾಲಿಕ ದೃಷ್ಟಿಕೋನವನ್ನು ಮತ್ತಷ್ಟು ವೃದ್ಧಿಪಡಿಸುವುದು ಮತ್ತು ಉದ್ಯಮಶೀಲತೆಯ ದಕ್ಷತೆ ಹೆಚ್ಚಿಸಲು ಈ ತರಬೇತಿಯು ಸಹಾಯಕಾರಿಯಾಗಲಿದೆ ಎಂದರು.ಮುಂಬೈನ ಎನ್ಪವರ್ ಸಂಸ್ಥೆಯ ಸಂಸ್ಥಾಪಕ ಸುಶೀಲ್ ಮುಂಗೇಕರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಕೌಶಲ್ಯವು ವ್ಯಕ್ತಿಯ ಯಥಾರ್ಥ ಆಸ್ತಿಯಾಗಿದೆ. ಕೌಶಲ್ಯ ಹೊಂದಿರುವ ವ್ಯಕ್ತಿಯು ಮಾತ್ರ ಯಶಸ್ವಿ ಉದ್ಯಮವನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸಮರ್ಥನಾಗಬಹುದು ಎಂದರು.ಆರ್‌ಸೆಟಿ ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಬಡ್ಡಿ ಮಾತನಾಡಿದರು. ಸಂಸ್ಥೆಯ ಉಪನ್ಯಾಸಕ ಮಹೇಶ್ ಎಚ್., ಯೋಜನಾ ಸಂಯೋಜಕ ವಿನಾಯಕ್ ಚವಾಣ್ ಇದ್ದರು. ಎನ್ಪವರ್ ಸಂಸ್ಥೆಯ ಸಂಸ್ಥಾಪಕ ಸುಶೀಲ್ ಮುಂಗೇಕರ ಹಾಗೂ ಅವರ ತಂಡದ ಸದಸ್ಯರಾದ ಸುಹಾಸ, ತನುಜಾ, ಉದಯ, ಅನಿತಾ, ಶ್ರೀನಿವಾಸ, ಮಹೇಶ, ಆಕಾಶ ಅವರು ಸ್ವಜೀವಿ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.ಜನ ಪರಿಷತ್ ಜಿಲ್ಲಾ ಅಧ್ಯಕ್ಷರಾಗಿ ಶ್ಯಾಮಸುಂದರ ಹೆಗಡೆ
ಕಾರವಾರ: ಜನ ಪರಿಷತ್ತಿನ ಉತ್ತರ ಕನ್ನಡ ಅಧ್ಯಾಯ(ವಲಯ) ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ ಹೆಗಡೆ ನೇಮಕಗೊಂಡಿದ್ದಾರೆ.ಅಖಿಲ ಭಾರತ ಮಟ್ಟದ ಜನ ಪರಿಷತ್ತಿನ ಅಧ್ಯಕ್ಷ ಮತ್ತು ಮಾಜಿ ಡಿಜಿಪಿ ಎನ್.ಕೆ. ತ್ರಿಪಾಠಿ ಹಾಗೂ ಪದ್ಮಶ್ರೀ ಸುನಿಲ್ ದಾಬಸ್(ಜನ ಪರಿಷತ್ತಿನ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ) ಅವರ ಶಿಫಾರಸಿನ ಮೇರೆಗೆ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ. ಶ್ಯಾಮಸುಂದರ ಹೆಗಡೆ ಮೂಲತಃ ಹೊನ್ನಾವರದವರು. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಅಕೌಂಟ್ಸ್ ಹಾಗೂ ಫೈನಾನ್ಸ್ ಮ್ಯಾನೇಜರ್ ಆಗಿದ್ದಾರೆ.ಜನ ಪರಿಷತ್ ರಾಷ್ಟ್ರ ಮಟ್ಟದ ಸಾಮಾಜಿಕ ಸಂಸ್ಥೆ. 36 ವರ್ಷಗಳಿಂದ ಪುಸ್ತಕಗಳ ಪ್ರಕಟಣೆ, ಪರಿಸರ, ಬಡವರು, ವಿದ್ಯಾರ್ಥಿಗಳಿಗೆ ನೆರವು ಸೇರಿದಂತೆ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಪರಿಸರದ ಕುರಿತು ಇದುವರೆಗೆ 10 ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ.