ಕನ್ನಡಪ್ರಭ ವಾರ್ತೆ ಹಳಿಯಾಳ

ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವುದರ ಜೊತೆ ಬೆಳೆಸುವಲ್ಲಿ ಜನಪದ ಕಲೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ರಾಜ್ಯ ಬಯಲಾಟ ಆಕಾಡೆಮಿಯ ಸದಸ್ಯೆ ಸುಜಾತಾ ಬಿರಾದಾರ ಹೇಳಿದರು.

ತಾಲೂಕಿನ ತೆಗ್ನಳ್ಳಿ ಗ್ರಾಮದಲ್ಲಿ ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಹಳಿಯಾಳ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಿರಿಜನ ಉಪಯೋಗಿ ಯೋಜನೆಯಡಿಯಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಗಳು ಜನರ ಮನಸ್ಸನ್ನು ಮುದಗೊಳಿಸಿ, ಬದುಕನ್ನು ಶ್ರೀಮಂತಗೊಳಿಸುವುದರ ಜೊತೆಗೆ ಜನಪದ ಕಲೆಗಳ ಉಳಿವಿಗೆ ಸಹಕಾರಿಯಾಗುತ್ತವೆ ಎಂದರು. ಕಲಾಪ್ರದರ್ಶನ:

ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಧಾರವಾಡದ ಪ್ರವೀಣ ಬಡಿಗೇರ ಹಾಗೂ ತಂಡದಿಂದ ವಚನ ನೃತ್ಯ ನಮನ, ಜ್ಯೂಲಿಯಾನ್ ಸಿದ್ದಿ ಹಾಗೂ ಗಾಡಗೇರಾ ತಂಡದಿಂದ ಡಮಾಮಿ ನೃತ್ಯ, ಪ್ರಕಾಶ ಮಲ್ಲಿಗವಾಡ ಹಾಗೂ ತಂಡದಿಂದ ಜಾನಪದ ನೃತ್ಯ, ಹುಬ್ಬಳ್ಳಿಯ ಪ್ರಿಯ ಸಿರಿವಳ್ಕರ್ ಹಾಗೂ ತಂಡದಿಂದ ಜೋಗತಿ ನೃತ್ಯ, ರೇಖಾ ಕಶೀಲ್ಕರ್ ಹಾಗೂ ತಂಡದಿಂದ ಬಯಲಾಟ ನೃತ್ಯ, ಸೂರಜ್ ಕೇರವಾಡ್ಕರ್ ಹಾಗೂ ತಂಡದಿಂದ ಸೂತ್ರದ ಗೊಂಬೆಯಾಟ, ಕಾರ್ತಿಕ್ ಧಾರವಾಡಕರ್ ಹಾಗೂ ತಂಡದಿಂದ ಕಂಸಾಳೆ ನೃತ್ಯ, ಓಂಕಾರ್ ಹಾಗೂ ತಂಡದಿಂದ ಸಿದ್ದಿ ಸಾಂಪ್ರದಾಯಿಕ ನೃತ್ಯ, ನಾರಾಯಣ ಹಾಗೂ ತಂಡದಿಂದ ಸಮೂಹ ಗಾಯನ ಮತ್ತು ಬೀರಲಿಂಗೇಶ್ವರ ಡೊಳ್ಳಿನ ತಂಡದಿಂದ ಡೊಳ್ಳಿನ ಪದಗಳ ಗಾಯನ ನಡೆಯಿತು. ಕಲೋತ್ಸವವು ಸಭಿಕರ ಗಮನವನ್ನು ಸೆಳೆಯವಲ್ಲಿ ಯಶಸ್ವಿಯಾಯಿತು. ಕಲೋತ್ಸವ ನೋಡಲು ಆಗಮಿಸಿದ ಗ್ರಾಮಸ್ಥರು ಸಂಭ್ರಮಿಸಿದರು.

ಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪ್ರಮುಖರಾದ ಅರ್ಜುನ್ ಸಾವಂತ್, ಪ್ರಕಾಶ ಲಾಡ್, ಸಂಜು ಸಾವಂತ, ರಾಮ ನಿರಾಸೆ, ತುಕಾರಾಮ್ ಗೌಡ, ಪರಶುರಾಮ್ ಕಂಚನೊಳಕರ್ ಸೇರಿದಂತೆ ಹಲವು ಇದ್ದರು.ವಾಗೀಶ್ ಕೆ. ಹಾಗೂ ಸೂರಜ್ ಮತ್ತು ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು.