ಮಕ್ಕಳ ಬೆಳವಣಿಗೆಯಲ್ಲಿ ಇನ್‌ಸ್ಪೈರ್ ಶಾಲೆಯ ಪಾತ್ರ ಮಹತ್ವದ್ದು

| Published : Sep 06 2025, 01:00 AM IST

ಸಾರಾಂಶ

ಕಲಿಕೆ ನಾಲ್ಕು ಗೋಡೆಗಳೊಳಗೆ ಸೀಮಿತವಾಗದೇ ಸಮುದಾಯಿಕವಾಗಿ ವಿಸ್ತರಣೆಯಾಗಬೇಕಾದರೆ ಪಠ್ಯದಷ್ಟೇ ಪಠ್ಯೇತರ ಚಟವಟಿಕೆಗಳಲ್ಲೂ ಮಗು ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಗ್ಗೆ-ಕಾರಗೋಡು ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಾಲೆಯ ಪಾತ್ರ ಮಹತ್ವದ್ದಾಗಿದೆ ಎಂದು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು. ಮಕ್ಕಳು ಶಾಲೆಯಲ್ಲಿ ಕೇವಲ ಎಂಟುಗಂಟೆ ಮಾತ್ರ ಇದ್ದರೆ ಬಹುಪಾಲು ಮನೆಯಲ್ಲಿ ಪೋಷಕರೊಂದಿಗೆ ಇರುತ್ತಾರೆ. ಶಿಕ್ಷಕರು ಮಾರ್ಗದರ್ಶಿಸುವ ಅಂಶಗಳನ್ನು ಪಾಲಕರು ಅನುಪಾಲನೆ ಮಾಡಿದಾಗ ಮಾತ್ರ ಮಕ್ಕಳ ಕಲಿಕೆ ಉತ್ತಮ ರೀತಿಯಲ್ಲಿ ಸಾಗಲು ಸಾಧ್ಯ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಕಲಿಕೆ ನಾಲ್ಕು ಗೋಡೆಗಳೊಳಗೆ ಸೀಮಿತವಾಗದೇ ಸಮುದಾಯಿಕವಾಗಿ ವಿಸ್ತರಣೆಯಾಗಬೇಕಾದರೆ ಪಠ್ಯದಷ್ಟೇ ಪಠ್ಯೇತರ ಚಟವಟಿಕೆಗಳಲ್ಲೂ ಮಗು ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಗ್ಗೆ-ಕಾರಗೋಡು ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಾಲೆಯ ಪಾತ್ರ ಮಹತ್ವದ್ದಾಗಿದೆ ಎಂದು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ಮಗ್ಗೆ- ಕಾರಗೋಡು ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳ ಮಕ್ಕಳ ಸಂಸತ್ತು ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಜಾ ಸತ್ತಾತ್ಮಕ ಮೌಲ್ಯಗಳನ್ನು ಮಕ್ಕಳ ಗ್ರಹಿಕೆಗೆ ತರುವಲ್ಲಿ ಶಾಲಾ ಸಂಸತ್ತು ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಚುನಾವಣೆಗಳು ನಾಯಕತ್ವ, ಸೇವಾ ಮನೋಭಾವ ಮುಂತಾದ ಮೌಲ್ಯಗಳನ್ನು ಬಿತ್ತುವುದರೊಂದಿಗೆ ಮಕ್ಕಳನ್ನು ಸಾಮಾಜಿಕ, ಸಾಂಸ್ಕೃತಿಕವಾಗಿ ವಿಕಸನಗೊಳಿಸಲು ಸಹಕಾರಿಯಾಗಿವೆ. ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೇ ತರಗತಿಯಾಚೆಯ ಸಾಮಾಜಿಕ ಮೌಲ್ಯಗಳನ್ನು, ಜೀವನ ಕೌಶಲಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಶಾಲೆಯ ಎಲ್ಲಾ ಮಕ್ಕಳಿಗೂ ಸ್ಕೌಟ್ಸ್ ಗೈಡ್ಸ್ ಶಿಕ್ಷಣ ನೀಡಿ ಮಕ್ಕಳಲ್ಲಿ ಶಿಸ್ತು, ಸಂಯಮ, ಸೇವಾ ಮನೋಭಾವ, ದೇಶಾಭಿಮಾನ ಮುಂತಾದ ಉದಾತ್ತ ಗುಣಗಳನ್ನು ಬೆಳೆಸಬೇಕೆಂಬುದು ಸಂಸ್ಥೆಯ ಮುಖ್ಯಸ್ಥರಾದ ಅಶೋಕ್‌ರವರ ಬಹುದೊಡ್ಡ ಕನಸು. ಶಿಕ್ಷಣವೆಂದರೆ ಕೇವಲ ವ್ಯಾಪಾರಿ ದೃಷ್ಠಿಕೋನದಡಿ ವಿಮರ್ಶಿಸುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುವುದರ ಜೊತೆಗೆ ಆದರ್ಶ ಪ್ರಜೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಪ್ರಯತ್ನಿಸುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು.

ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಅಶೋಕ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾದರೆ ಸರ್ವಾಂಗೀಣ ಪ್ರಗತಿಯಾಗುವುದಿಲ್ಲ. ತರಗತಿಯೊಳಗೆ ಪ್ರಗತಿಯಿದ್ದಂತೆ ಕ್ರೀಡಾ ಮೈದಾನದಲ್ಲೂ, ಸಾಂಸ್ಕೃತಿಕ ವಲಯದಲ್ಲೂ ಸಕ್ರಿಯವಾದರೆ ಔನತ್ಯ ಸಾಧನೆಗೈಯಲು ಸಹಕಾರಿ. ಸದರಿ ಶೈಕ್ಷಣಿಕ ವರ್ಷ ನಮ್ಮ ಶಾಲೆಯ ಮಕ್ಕಳು ತಾಲೂಕು ಹಂತದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸಮಗ್ರ ಪ್ರಶಸ್ತಿ ತಂದಿರುವುದು ತುಂಬಾ ಸಂತಸ ನೀಡಿದೆ. ಶಿಕ್ಷಕರ ಸತತ ಪರಿಶ್ರಮ, ಪೋಷಕರ ಸಹಕಾರದಿಂದ ಯಶಸ್ಸು ದೊರೆತಿದೆ. ಎಲ್ಲಿ ಪೋಷಕರ ಸಂಪೂರ್ಣ ಸಹಕಾರವಿರುತ್ತದೆಯೋ ಅಲ್ಲಿ ಸಾಧನೆಗಳ ಮೈಲುಗಲ್ಲುಗಳು ಮೂಡುತ್ತವೆ. ಮಕ್ಕಳು ಶಾಲೆಯಲ್ಲಿ ಕೇವಲ ಎಂಟುಗಂಟೆ ಮಾತ್ರ ಇದ್ದರೆ ಬಹುಪಾಲು ಮನೆಯಲ್ಲಿ ಪೋಷಕರೊಂದಿಗೆ ಇರುತ್ತಾರೆ. ಶಿಕ್ಷಕರು ಮಾರ್ಗದರ್ಶಿಸುವ ಅಂಶಗಳನ್ನು ಪಾಲಕರು ಅನುಪಾಲನೆ ಮಾಡಿದಾಗ ಮಾತ್ರ ಮಕ್ಕಳ ಕಲಿಕೆ ಉತ್ತಮ ರೀತಿಯಲ್ಲಿ ಸಾಗಲು ಸಾಧ್ಯ ಎಂದರು.

ಭಾರತ್ ಸ್ಕೌಟ್ಸ್- ಗೈಡ್ಸ್ ಸಂಸ್ಥೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ ಮಾತನಾಡಿ, ಒಂದೇ ಶಾಲೆಯಲ್ಲಿ ಹದಿನಾರು ಶಿಕ್ಷಕರಿಗೆ ಸ್ಕೌಟ್ಸ್- ಗೈಡ್ಸ್ ತರಬೇತಿ ನೀಡಿ ಇಡೀ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನೂ ಸ್ಕೌಟ್ಸ್- ಗೈಡ್ಸ್ ಮಾಡುವ ನಿಟ್ಟಿನಲ್ಲಿ ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆ ಇಟ್ಟಿರುವ ಹೆಜ್ಜೆ ಅಭಿನಂದಾರ್ಹವಾಗಿದೆ. ಸ್ಕೌಟ್ಸ್- ಗೈಡ್ಸ್ ಮಕ್ಕಳಿಗಾಗಿ ಜಿಲ್ಲಾ ಪುರಸ್ಕಾರ, ರಾಜ್ಯ ಪುರಸ್ಕಾರ ಹಾಗೂ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗಳನ್ನು ಏರ್ಪಡಿಸಲಾಗುತ್ತದೆ, ಅಲ್ಲಿ ಉತ್ತೀರ್ಣವಾದ ಮಕ್ಕಳಿಗೆ ಉನ್ನತ ವ್ಯಾಸಂಗವಾದ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ಮೀಸಲಾತಿಯಲ್ಲದೇ ರೈಲ್ವೇ ಇಲಾಖೆಯ ನೇಮಕಾತಿಗಳಲ್ಲಿ ಪ್ರತ್ಯೇಕ ಮೀಸಲಾತಿಯಿದೆ. ಸ್ಕೌಟ್ಸ್- ಗೈಡ್ಸ್ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವುದರ ಜೊತೆಗೆ ವೈಯಕ್ತಿಕ ಲಾಭವನ್ನೂ ತರುತ್ತದೆ ಎಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪೂವಯ್ಯ, ಉಪಾಧ್ಯಕ್ಷ ಸಲೀಂ ಸಿರಾಜ್, ಕಾರ್ಯದರ್ಶಿ ಸದಾನಂದ, ಖಜಾಂಚಿ ನವೀನ್, ಸದಸ್ಯರಾದ ನಂದೀಶ್, ವೆಂಕಟೇಶ್, ಧರ್ಮರಾಜ್, ಹರ್ಷಾ, ರಂಗನಾಥ್, ಸವಿತ ಹಾಗೂ ಆಸ್ಮಾ ಸೇರಿ ಹಲವರು ಉಪಸ್ಥಿತರಿದ್ದರು.