ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿರುವ ಪತ್ರಿಕಾರಂಗದಿಂದ ವಾಸ್ತವ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಪತ್ರಕರ್ತರು ಸತ್ಯ ಸಂಗತಿಗಳನ್ನು ಹೊರತರುವಲ್ಲಿ ನಿರ್ಭೀತೆಯಿಂದ ಕೆಲಸ ಮಾಡಬೇಕು ಎಂದು ಕೆಪಿಸಿಸಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಕಿವಿಮಾತು ಹೇಳಿದರು.ಪಟ್ಟಣದ ಹೊರವಲಯದ ಎಸ್.ಎಸ್.ಕನ್ವೆನ್ಷನ್ ಹಾಲ್‌ನಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಗೋಕಾಕ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ಮತ್ತು ಕರ್ನಾಟಕ ಟೈಮ್ಸ್ ದಿನಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಪತ್ರಕರ್ತರು ಅನೇಕ ಸಮಸ್ಯೆ-ಸವಾಲುಗಳನ್ನು ಎದುರಿಸಿ ಪ್ರಜಾಪ್ರಭುತ್ವ ಯಶಸ್ವಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ ಎಂದರು.ಮುಖ್ಯ ಅತಿಥಿಗಳಾದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್‌ನ ಸನತ್ ಜಾರಕಿಹೊಳಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಧ್ಯಯನ, ಪರಿಶ್ರಮದಿಂದ ಉನ್ನತ ಗುರಿ ತಲುಪಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು. ಶೇ.90ಕ್ಕಿಂತ ಹೆಚ್ಚಿನ ಅಂಕ ಗಳಿಸುವ ಪತ್ರಕರ್ತರ ಮಕ್ಕಳಿಗೆ ತಮ್ಮ ಸಂಸ್ಥೆಯಿಂದ ಉಚಿತ ಶಿಕ್ಷಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪ ಕುರಂದವಾಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸಂಘದಿಂದ ಸಕ್ರೀಯ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿಭಾಯಿಸಲಾಗಿದೆ. ಕೊರೋನಾ ಸೇರಿದಂತೆ ವಿವಿಧ ವಿಪತ್ತು ಕಾಲದಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲಾಗಿದ್ದು ಅವರ ಮಕ್ಕಳಿಗಾಗಿ ಕ್ರೀಡೆ, ಕಲೆ, ಸಾಹಿತ್ಯ-ಸಾಂಸ್ಕೃತಿಕ ಚಟುವಟಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಬರುವ ದಿನಗಳಲ್ಲಿ ಯುವ ಸಮೂಹಕ್ಕೆ ಕೌಶಲ್ಯ ಆಧಾರಿತ ಸ್ವಯಂ ಉದ್ಯೋಗ ಕೈಗೊಳ್ಳಲು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ವಾಲಿಬಾಲ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಪತ್ರಕರ್ತರಾದ ಪುಂಡಲೀಕ ಬಾಳೋಜಿ, ಯಲ್ಲಪ್ಪ ತಳವಾರ, ಮಲ್ಲಿಕಾರ್ಜುನರೆಡ್ಡಿ ಗೊಂದಿ, ಪ್ರಸನ್ ಕುಲಕರ್ಣಿ, ಅರುಣ ಪಾಟೀಲ, ಬಿ.ಪ್ರಭಾಕರ, ಶಿವಾನಂದ ತಾರಿಹಾಳ, ರವಿ ಕಾಂಬಳೆ, ಚೇತನ ಹೊಳೆಪ್ಪಗೋಳ, ಬಸವರಾಜ ಕೊಂಡಿ, ಮಹಾದೇವ ನಾಯಿಕ, ರಾಜು ಬಾಗಲಕೋಟೆ, ವಿಶ್ವನಾಥ ನಾಯಿಕ, ಬಿ.ಬಿ.ಕೋತೇಕರ, ಸಚಿನ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.ನಿರೂಪಕಿ ನಮೀತಾ ಜೈನ್ ನಿರೂಪಿಸಿದರು. ಮಂಜು ಹುಡೇದ ಸ್ವಾಗತಿಸಿದರು. ಲೀಲಾವತಿ ರಜಪೂತ ಸ್ವಾಗತಗೀತೆ ಹಾಡಿದರು. ಇದೇ ವೇಳೆ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಜಿಲ್ಲೆಯ ಹಿರಿಯ ಪತ್ರಕರ್ತರು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.