ನಾಡು-ನುಡಿ ಸಂರಕ್ಷಣೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ದೊಡ್ಡದು: ಡಾ. ಎಚ್.ವಿ. ಬೆಳಗಲಿ

| Published : May 12 2024, 01:20 AM IST

ನಾಡು-ನುಡಿ ಸಂರಕ್ಷಣೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ದೊಡ್ಡದು: ಡಾ. ಎಚ್.ವಿ. ಬೆಳಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಗೀತ, ಸಾಹಿತ್ಯ ಬೆಳವಣಿಗೆಯಲ್ಲಿ ಮತ್ತು ನಾಡು-ನುಡಿ ಸಂರಕ್ಷಣೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ದೊಡ್ಡದು ಎಂದು ಚಿಂತಕ ಡಾ. ಎಚ್.ವಿ. ಬೆಳಗಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡಸಂಗೀತ, ಸಾಹಿತ್ಯ ಬೆಳವಣಿಗೆಯಲ್ಲಿ ಮತ್ತು ನಾಡು-ನುಡಿ ಸಂರಕ್ಷಣೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ದೊಡ್ಡದು ಎಂದು ಚಿಂತಕ ಡಾ. ಎಚ್.ವಿ. ಬೆಳಗಲಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪ ಹುಬ್ಬಳ್ಳಿಯ ಶಿರೂರ ಪಾರ್ಕ್ ಬಡಾವಣೆಯ 2 ಹಾಗೂ 3ನೇ ಹಂತ ಗಾರ್ಡನ್‌ನಲ್ಲಿರುವ ವೇದಿಕೆಯಲ್ಲಿ ಏರ್ಪಡಿಸಿದ್ದ ಸಂಗೀತ ಸಂಜೆ ಹಾಗೂ ವಚನ ಗಾಯನ ಉದ್ಘಾಟಿಸಿ ಮಾತನಾಡಿದರು.

ಸಂಘದ ಕಾರ್ಯಕ್ರಮಗಳು ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ನುಡಿಗೆ ಧಕ್ಕೆ ಬಂದಾಗ ದ್ವನಿ ಎತ್ತಿ ಹೋರಾಡಿದ ಹಿರಿಯ ಸಂಸ್ಥೆ ಇದಾಗಿದೆ. 134 ವರ್ಷ ಪೂರೈಸಿದ ಸಂಘ ಇಂದಿಗೂ ತನ್ನ ಘನತೆಯನ್ನು ಉಳಿಸಿಕೊಂಡು ಕನ್ನಡಕ್ಕೆ ಧಕ್ಕೆ ಬಂದಾಗಲೆಲ್ಲಾ ಗುಡುಗುತ್ತಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಜಾನಪದ ವಿದ್ವಾಂಸರಾದ ಡಾ. ರಾಮು ಮೂಲಗಿ ತಮ್ಮ ಲಾವಣಿ ಹಾಡುಗಳ ಮೂಲಕ ಜಗಜ್ಯೋತಿ ಬಸವೇಶ್ವರ ಹಾಗೂ ಛತ್ರಪತಿ ಶಿವಾಜಿ ಅವರ ಇತಿಹಾಸವನ್ನು ಹೇಳಿದರು. ನಾಡಿನ ದಾರ್ಶನಿಕರ ಆದರ್ಶಗಳಿಂದು ಯುವಕರಿಗೆ ಮುಟ್ಟಿಸಬೇಕಾಗಿದೆ. ಅಂತಹ ಕೆಲಸವನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ನಿರಂತರವಾಗಿ ಯುವಕರಿಗೆ ಹಲವಾರು ಕಾರ್ಯಕ್ರಮ ಆಯೋಜಿಸುತ್ತ ಪ್ರೊತ್ಸಾಹ ಮಾಡುತ್ತ ಬಂದಿದೆ ಎಂದರು.

ಅಧ್ಯಕ್ಷತೆಯನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ವಹಿಸಿದ್ದರು. ಶಿರೂರ ಪಾರ್ಕಿನ ನಿವಾಸಿ ಡಾ. ಪ್ರತೀಕ ಅನಂತ ಪದ್ಮನಾಭ ಐತಾಳ ಎಂ.ಬಿ.ಬಿ.ಎಸ್ ನಲ್ಲಿ ಬಂಗಾರದ ಪದಕ ಪಡೆದದಕ್ಕಾಗಿ ಹಾಗೂ ಧಾನೇಶ್ವರಿ ನಾಗರಾಜ ಕೋರಿ ಅವರು ಎಂ.ಟೆಕ್ ನಲ್ಲಿ ಬಂಗಾರದ ಪಡೆದದ್ದಕ್ಕಾಗಿ ಮತ್ತು ನಂದಿನಿ ಶೈಲೇಶ ಹೊನ್ನಳ್ಳಿ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.92ರಷ್ಟು ಅಂಕ ಪಡೆದದ್ದಕ್ಕಾಗಿ ಗೌರವಿಸಿ ಸನ್ಮಾನಿಸಲಾಯಿತು. ಹುಬ್ಬಳ್ಳಿಯ ಖ್ಯಾತ ಸಂಗೀತಗಾರರಾದ ಶೋಭಾ ಜಾಬಿನ್ ವಚನ ಗಾಯನ ನಡೆಸಿಕೊಟ್ಟರು. ಎಂ.ವಿ. ಕರಮರಿ, ಎಸ್.ಎಸ್. ಹಂಗರಕಿ ಇದ್ದರು. ಯುವಜನ ಮಂಟಪದ ಸಂಚಾಲಕರಾದ ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಸದಸ್ಯರಾದ ಜಿ.ವಿ. ಹಿರೇಮಠ, ಮೃತ್ಯುಂಜಯ ಕಮಡೊಳ್ಳಿಶೆಟ್ಟರ ಹಾಗೂ ಶಿರೂರ ಪಾರ್ಕಿನ ನಿವಾಸಿಗಳಿದ್ದರು.