ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿರುವ ನರೇಗಾ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಕಾಯಕ ಬಂಧುಗಳ ಪಾತ್ರ ಪ್ರಮುಖವಾಗಿದೆ.

3 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಇಒ

ಕನ್ನಡಪ್ರಭ ವಾರ್ತೆ ಕಾರಟಗಿ

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿರುವ ನರೇಗಾ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಕಾಯಕ ಬಂಧುಗಳ ಪಾತ್ರ ಪ್ರಮುಖವಾಗಿದೆ ಎಂದು ತಾ‌ಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷೀದೇವಿ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮೈಸೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆ ಹಾಗೂ ಗ್ರಾಮಸ್ವ ರಾಜ್ ಅಭಿಯಾನ - ಕರ್ನಾಟಕ (ನಾಗರಿಕ ಸಮಾಜದ ಸಂಸ್ಥೆಗಳ ಒಕ್ಕೂಟ) ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಮನರೇಗಾ ಯೋಜನೆ ತಾಪಂ ಆಶ್ರಯದಲ್ಲಿ ಆಯೋಜಿಸಿದ್ದ ನರೇಗಾ ಯೋಜನೆಯಡಿ ಕಾಯಕ ಬಂಧುಗಳ (ಮೇಟ್) ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಗ್ರಾಮೀಣ ಭಾಗವನ್ನು ಅಭಿವೃದ್ಧಿ ಪಡಿಸುವ ಅವಕಾಶ ಕಾಯಕ ಬಂಧುಗಳಿಗೆ ಸಿಕ್ಕಿದ್ದು, ಸಮಾಜ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಪ್ರಯೋಜನ ದೊರಕಿಸಲು ಶ್ರಮವಹಿಸಿ ಎಂದರು.

ನರೇಗಾ ಸಹಾಯಕ ನಿರ್ದೇಶಕಿ ವೈ. ವನಜಾ ಮಾತನಾಡಿ, ನರೇಗಾದಡಿ ಅರ್ಹ ಕುಟುಂಬಗಳಿಗೆ ವರ್ಷದಲ್ಲಿ 100 ದಿನ ಕೆಲಸ ಒದಗಿಸಲಾಗಿದ್ದು, ಪ್ರತಿ ದಿನಕ್ಕೆ ₹349 ಕೂಲಿ ಪಾವತಿಸಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಯೋಜನೆಯಡಿ ಕಾರ್ಯ ನಿರ್ವಹಿಸುವ ಕಾಯಕ ಬಂಧುಗಳ ಜವಾಬ್ದಾರಿ ಪ್ರಮುಖವಾಗಿದ್ದು, ಈ ಮೂರು ದಿನಗಳ ತರಬೇತಿಯ ಸದುಪಯೋಗ ಪಡೆಯಿರಿ ಎಂದರು.

ತಾಪಂ ಯೋಜನಾಧಿಕಾರಿ ರಾಘವೇಂದ್ರ, ಕೊಪ್ಪಳ ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕಿ ವಾಣಿ ಜೋಶಿ, ರಾಜ್ಯ ಮಾಸ್ಟರ್ ಟ್ರೈನರ್ ಭುವನೇಶ್ವರಿ, ಮಂಜುನಾಥ ಭಜಂತ್ರಿ, ಜಿಲ್ಲಾ ತರಬೇತುದಾರ ಸೋಮನಾಥ ಗೌಡರ, ಷಹನಾಜ್ ಬೇಗಂ, ರತ್ನಮ್ಮ, ಕಮಲಾ ಇದ್ದರು.