ಸಾರಾಂಶ
ಭಟ್ಕಳ: 104 ವರ್ಷದ ಇತಿಹಾಸ ಹೊಂದಿರುವ ಕೆಡಿಸಿಸಿ ಬ್ಯಾಂಕು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಮುಚೂಣಿಯಲ್ಲಿರುವ ಬ್ಯಾಂಕಾಗಿದೆ ಎಂದು ಬ್ಯಾಂಕಿನ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ತಿಳಿಸಿದರು.
ತಾಲೂಕಿನ ಕುಂಟವಾಣಿಯಲ್ಲಿ(ಹಾಡುವಳ್ಳಿ ಶಾಖೆ) ಕೆಡಿಸಿಸಿ ಬ್ಯಾಂಕಿನ 68ನೇ ಶಾಖೆ ಉದ್ಘಾಟಿಸಿ ಮಾತನಾಡಿ, ಬೇರೆ ಜಿಲ್ಲೆಗಳ ಡಿಸಿಸಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಕೆಡಿಸಿಸಿ ಬ್ಯಾಂಕು ಭದ್ರವಾಗಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ 104 ವರ್ಷ ಇತಿಹಾಸ ಹೊಂದಿರುವ ಕೆಡಿಸಿಸಿ ಬ್ಯಾಂಕಿನ ಪಾತ್ರವೂ ಇದೆ ಎಂದ ಅವರು, ಗ್ರಾಮಾಂತರ ಭಾಗದಲ್ಲಿ ಬ್ಯಾಂಕಿಂಗ್ ಸೌಲಭ್ಯ ಸಿಗುವಂತಾಗಲು ಗ್ರಾಮೀಣ ಭಾಗದಲ್ಲಿ ಹೊಸ ಶಾಖೆಗಳನ್ನು ತೆರಯಲಾಗುತ್ತಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ ಅವರು, ಕೆಡಿಸಿಸಿ ಬ್ಯಾಂಕಿನಿಂದ ಒಟ್ಟೂ 21 ಹೊಸ ಶಾಖೆ ತೆರೆಯಲು ನಿರ್ಧರಿಸಲಾಗಿದೆ. ಅದರಲ್ಲಿ 16 ಶಾಖೆ ಈಗಾಗಲೇ ಉದ್ಘಾಟನೆಗೊಂಡಿದೆ. ಬ್ಯಾಂಕು ₹133 ಕೋಟಿ ಷೇರು ಬಂಡವಾಳ, ₹347 ಕೋಟಿ ಕಾಯ್ದಿಟ್ಟ ನಿಧಿ, ₹4500 ಕೋಟಿ ದುಡಿಯುವ ಬಂಡವಾಳ, ₹3440 ಕೋಟಿ ಠೇವಣಿ ಹೊಂದಿದ್ದು, ₹3040 ಕೋಟಿ ಸಾಲ ವಿತರಿಸಿದೆ. ₹1239 ಕೋಟಿ ಕೃಷಿ ಸಾಲ ನೀಡಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಮೋಹನದಾಸ ನಾಯಕ ಮಾತನಾಡಿ, ಕೆಡಿಸಿಸಿ ಬ್ಯಾಂಕು ಕ್ರಾಂತಿಕಾರಿ ಬದಲಾವಣೆ ಹೊಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕಿಗೆ 3 ಬಾರಿ ರಾಷ್ಟ್ರೀಯ, 42 ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ ಎಂದರು.ಶಾಖೆಯ ಕಟ್ಟಡ ಮಾಲಿಕ ಹಾಗೂ ಹಾಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ ಶೆಟ್ಟಿ, ಮಾರುಕೇರಿ ಗ್ರಾಪಂ ಉಪಾಧ್ಯಕ್ಷ ಎಂ.ಡಿ. ನಾಯ್ಕ ಮಾತನಾಡಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್ಟ, ಮಾರುಕೇರಿ ಸೊಸೈಟಿ ಅಧ್ಯಕ್ಷ ಶಿವಾನಂದ ಹೆಬ್ಬಾರ, ಶ್ರೀಕಂಠ ಹೆಬ್ಬಾರ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಊರ ಪ್ರಮುಖ ಬಡಿಯಾ ಗೊಂಡ, ಹಾಡವಳ್ಳಿ ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ನಾಯ್ಕ, ಮಾರುತಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುಬ್ರಾಯ ಕಾಮತ್ ಇದ್ದರು.
ಶಾಖೆ ವ್ಯವಸ್ಥಾಪಕ ಲೋಹಿತ್ ಬೋರ್ಕರ್ ಸ್ವಾಗತಿಸಿದರು. ಕೆಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿ ಗಿರೀಶ ಮಾಡಗೇರ ನಿರೂಪಿಸಿ, ವಂದಿಸಿದರು. ಸರ್ಪನಕಟ್ಟೆ ಮತ್ತು ಪಟ್ಟಣ ಹೂವಿನಮಾರುಕಟ್ಟೆ ಶಾಖೆಯನ್ನೂ ಸಚಿವರು ಉದ್ಘಾಟಿಸಿದರು.