ನ್ಯಾಯದಾನದಲ್ಲಿ ವಕೀಲರ ಪಾತ್ರವೂ ಅತ್ಯಂತ ಮಹತ್ತರ

| Published : May 22 2025, 01:04 AM IST

ಸಾರಾಂಶ

ನ್ಯಾಯ ವಿತರಣೆಯಲ್ಲಿ ನ್ಯಾಯಾಧೀಶರಿಗೆ ಸಹನೆ, ತಾಳ್ಮೆ, ಕರುಣೆ ಮುಖ್ಯವಾಗಿದೆ. ನ್ಯಾಯಾಲಯಗಳಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸುವ ಮೂಲಕ ನ್ಯಾಯ, ನಿಷ್ಠುರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣಕುಮಾರ ಹೇಳಿದ್ದಾರೆ.

- ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಬೀಳ್ಕೊಡುಗೆಯಲ್ಲಿ ನ್ಯಾ. ಆರ್.ಎನ್. ಪ್ರವೀಣ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನ್ಯಾಯ ವಿತರಣೆಯಲ್ಲಿ ನ್ಯಾಯಾಧೀಶರಿಗೆ ಸಹನೆ, ತಾಳ್ಮೆ, ಕರುಣೆ ಮುಖ್ಯವಾಗಿದೆ. ನ್ಯಾಯಾಲಯಗಳಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸುವ ಮೂಲಕ ನ್ಯಾಯ, ನಿಷ್ಠುರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣಕುಮಾರ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ನ್ಯಾಯದಾನದಲ್ಲಿ ವಕೀಲರ ಪಾತ್ರವೂ ಅತ್ಯಂತ ಮಹತ್ತರವಾಗಿದೆ. ನ್ಯಾಯಾಲಯದಲ್ಲಿ ಪರಿಣಾಮಕಾರಿ, ನಿಪುಣರಾಗಿ ಕರ್ತವ್ಯ ನಿರ್ವಹಿಸುವುದರಿಂದ ನ್ಯಾಯದಾನ ಸುಗಮವಾಗಿ ನಡೆಯುತ್ತಿದೆ ಎಂದರು.

ದಾವಣಗೆರೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಪ್ರಕರಣಗಳನ್ನು ತರುವ ವಕೀಲರು ಇಂದಿಗೂ ತೀರ್ಪು ನೀಡಿದ ನ್ಯಾಯಾಧೀಶರನ್ನು ಟೀಕಿಸದೇ, ಪ್ರಕರಣಗಳ ವಸ್ತುನಿಷ್ಟತೆ ಬಗ್ಗೆ ವಾದ ಮಾಡುವ ಮೂಲಕ ನ್ಯಾಯಾಂಗದ ಘನತೆ ಹೆಚ್ಚಿಸಿದ್ದಾರೆ. ಇಲ್ಲಿನ ಹಿರಿಯ, ಕಿರಿಯ ವಕೀಲರು ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ, ಮುಖ್ಯ ನ್ಯಾಯಿಕ ದಂಡಾಧಿಕಾರಿ ಟಿ.ಎಂ. ನಿವೇದಿತಾ ಸನ್ಮಾನ ಸ್ವೀಕರಿಸಿ ಮಾತನಾಡಿ, ದಾವಣಗೆರೆ ವಕೀಲರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನ್ಯಾಯಾಲಯದ ಮುಂದೆ ತರುವ ಪ್ರಕರಣಗಳನ್ನು ಅತ್ಯಂತ ಸ್ಫುಟವಾಗಿ, ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕಲೆ ಇಲ್ಲಿನ ವಕೀಲರಿಗೆ ಕರಗತವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ವಕೀಲರ ಸಂಖ್ಯೆ ಗಮನಿಸಿದರೆ ಇಲ್ಲಿ ವರ್ಗಾವಣೆಗೊಂಡ ನ್ಯಾಯಾಧೀಶರ ಬಗೆಗಿನ ಗೌರವ ಮತ್ತು ಪ್ರೀತಿ ಎಷ್ಟೆಂಬುದು ಇದರಿಂದಲೇ ವ್ಯಕ್ತವಾಗುತ್ತಿದೆ. ಇಂತಹ ವಾತಾವರಣದಿಂದ ಮಾತ್ರ ಕಕ್ಷಿದಾರರಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರು, ವಕೀಲರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಣಾಮಕಾರಿಯಾದ ತ್ವರಿತ ನ್ಯಾಯದಾನ ಸಾಧ್ಯ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಎಲ್. ಅಮರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವರ್ಗಾವಣೆಗೊಂಡ ನ್ಯಾಯಾಧೀಶರಾದ ಜೆ.ಸಿ.ಪ್ರಶಾಂತ, ಮಲ್ಲಿಕಾರ್ಜುನ, ಎನ್.ಕೆ. ಸಿದ್ಧರಾಜು, ನಾಜಿಯಾ ಕೌಸರ್ ತಮ್ಮ ಅನಿಸಿಕೆ, ಇಲ್ಲಿನ ಅನುಭವಗಳನ್ನು ಹಂಚಿಕೊಂಡರು.

ಹಿರಿಯ ವಕೀಲರಾದ ಎಚ್.ಎನ್. ರಾಜಶೇಖರಪ್ಪ, ಎಸ್.ಜಯಕುಮಾರ, ಮಹ್ಮದ್ ಮುಷ್ತಾಕ್ ಮಾಲ್ವಿ, ಎಲ್.ದಯಾನಂದ, ಸಿ.ಅಜಯ್, ಎಚ್.ದಿವಾಕರ, ರಜ್ವಿಖಾನ್, ಆರ್.ಭಾಗ್ಯಲಕ್ಷ್ಮೀ, ಕೆ.ಕೆ. ಕರಿಬಸಪ್ಪ ಮಾತನಾಡಿದರು.

ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ ಗೋಪನಾಳ್, ಕಾರ್ಯದರ್ಶಿ ಎಸ್. ಬಸವರಾಜ, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ ಕಾರ್ಯಕ್ರಮ ನಡೆಸಿಕೊಟ್ಟರು. ಬಿ.ಬಿ. ಸಿದ್ದೇಶ ಆರಂಭದಲ್ಲಿ ಪ್ರಾರ್ಥಿಸಿದರು.

- - - -21ಕೆಡಿವಿಜಿ8.ಜೆಪಿಜಿ:

ದಾವಣಗೆರೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಬೀಳ್ಕೊಡುಗೆ ಸಮಾರಂಭದಲ್ಲಿ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಸನ್ಮಾನಿಸಿ, ಗೌರವಿಸಲಾಯಿತು.