ಸಾರಾಂಶ
ವಕೀಲಿ ವೃತ್ತಿ ಮಾಡಬಯಸುವವರಿಗೆ ವೃತ್ತಿಪರ ಕೌಶಲ್ಯ ಅತೀ ಮುಖ್ಯ. ಇಂತಹ ಕಲ್ಪಿತ ನ್ಯಾಯಾಲಯ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತವೆ.
ಹುಬ್ಬಳ್ಳಿ: ಸ್ವಾತಂತ್ರ್ಯದ ಸಮಯದಲ್ಲಿ ವಕೀಲರು ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರಗತಿಪರ ಸಮಾಜದಲ್ಲಿ ವಕೀಲರ ಪಾತ್ರ ಬಹಳ ಮುಖ್ಯ ಮತ್ತು ನಿರ್ಣಾಯಕವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ 11ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ವಕೀಲಿ ವೃತ್ತಿ ಮಾಡಬಯಸುವವರಿಗೆ ವೃತ್ತಿಪರ ಕೌಶಲ್ಯ ಅತೀ ಮುಖ್ಯ. ಇಂತಹ ಕಲ್ಪಿತ ನ್ಯಾಯಾಲಯ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತವೆ ಎಂದರು.
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬೂದಿಹಾಳ್ ಆರ್.ಬಿ. ಮಾತನಾಡಿ, ಸ್ಪರ್ಧೆಯಲ್ಲಿ ವಾದ-ವಿವಾದಗಳು ನಡೆಯುತ್ತವೆ. ಇದರಿಂದ ವಿದ್ಯಾರ್ಥಿಗಳ ಕಾನೂನು ಜ್ಞಾನವನ್ನು ಉತ್ಕೃಷ್ಟಗೊಳ್ಳುತ್ತದೆ ಎಂದು ಹೇಳಿದರು.ಧಾರವಾಡ ಜಿಲ್ಲಾ ನ್ಯಾಯಾಲಯದ ಹಿರಿಯ ವಕೀಲ ಬಸವಪ್ರಭು ಹೊಸಕೇರಿ ಮಾತನಾಡಿ, ಭಾರತೀಯ ಭಾಷೆಗಳನ್ನು ಉಳಿಸಿ- ಬೆಳೆಸಬೇಕು. ಈ ದಿಕ್ಕಿನಲ್ಲಿ ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು ಶ್ರಮಿಸಬೇಕು ಎಂದರು.
ವಿವಿ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಮಾತನಾಡಿ, ಜನರು ತಮ್ಮ ಜೀವನದ ಬಿಕ್ಕಟ್ಟಿನಲ್ಲಿ ವಕೀಲರನ್ನು ಸಂಪರ್ಕಿಸಿದಾಗ ಅವರ ನಂಬಿಕೆ ಉಳಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು. ವಿವಿ ಕಾನೂನು ಶಾಲೆಯ ಡೀನ್ ಮತ್ತು ನಿರ್ದೇಶಕಿ ಡಾ. ರತ್ನಾ ಭರಮಗೌಡರ್, ರಿಜಿಸ್ಟ್ರಾರ್ ಡಾ. ರಂಗಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅತ್ಯುತ್ತಮ ಪುರುಷ ವಕೀಲ, ಅತ್ಯುತ್ತಮ ಮಹಿಳಾ ವಕೀಲ, ಅತ್ಯುತ್ತಮ ಸ್ಮಾರಕ, ಎರಡು ರನ್ನರ್ ಅಪ್ ಬಹುಮಾನಗಳನ್ನು ವಿತರಿಸಲಾಯಿತು. ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.