ಸಾರಾಂಶ
ವಿಮೆಗೆ ತೊಡಗಿಸಲು ತೀವ್ರ ತೊಡಕಾಗಿ ಪರಿಣಮಿಸಿದೆ. ಬೆಳೆ ದಾಖಲೆಯ ದೃಢೀಕರಣಕ್ಕಾಗಿ ತಹಸೀಲ್ದಾರ ಕಚೇರಿಗೆ ಅಲೆದಾಡುವಂತಾಗಿದೆ.
ಪ್ರವೀಣ ಹೆಗಡೆ ಕರ್ಜಗಿ
ಶಿರಸಿ: ಪಹಣಿ ಪತ್ರಿಕೆಯಲ್ಲಿ ನೈಜ ಬೆಳೆ ವಿಮೆ ದಾಖಲಾಗದ ಕಾರಣಕ್ಕೆ ರೈತರು ಸಹಕಾರಿ ಸಂಘಗಳ ಮೂಲಕ ಬೆಳೆಸಾಲ ಪಡೆಯಲು ಮತ್ತು ವಿಮೆಗೆ ತೊಡಗಿಸಲು ತೀವ್ರ ತೊಡಕಾಗಿ ಪರಿಣಮಿಸಿದೆ. ಬೆಳೆ ದಾಖಲೆಯ ದೃಢೀಕರಣಕ್ಕಾಗಿ ತಹಸೀಲ್ದಾರ ಕಚೇರಿಗೆ ಅಲೆದಾಡುವಂತಾಗಿದೆ.ಸಹಕಾರಿ ಸಂಘಗಳ ಮೂಲಕ ಈಗಾಗಲೇ ಪ್ರಸಕ್ತ ಸಾಲಿನ ಬೆಳೆಸಾಲ ಪಡೆಯಲು ರೈತರು ಅರ್ಜಿ ಸಲ್ಲಿಸುತ್ತಿದ್ದಾರೆ. ಅದನ್ನು ಸಹಕಾರಿ ಸಂಘಗಳು ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ ಸಲ್ಲಿಸಬೇಕಾಗಿದೆ. ಆದರೆ ಕೆಲ ರೈತರ ಪಹಣಿ ಪತ್ರಿಕೆಯಲ್ಲಿ ಬೆಳೆ ವಿವರ ನಮೂದಾಗದೇ ಖಾಲಿ ಇರುವ ಕಾರಣಕ್ಕೆ ದಾಖಲೆ ಪತ್ರಗಳನ್ನು ಸಲ್ಲಿಸಲು ತೊಂದರೆಯಾಗಿದೆ. ಇದರಿಂದ ರೈತರಿಗೆ ದೊರೆಯಬೇಕಾದ ಬೆಳೆ ಸಾಲ ಇನ್ನಷ್ಟು ವಿಳಂಬವಾಗಲಿದೆ.
ಬೆಳೆಸಾಲ ಪಡೆಯಲು ರೈತರು ಪ್ರಮುಖವಾಗಿ ಪಹಣಿಪತ್ರಿಕೆ, ಪ್ರುಟ್ ಐಡಿ ಮತ್ತು ಕೆಡಿಸಿಸಿ ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿಯನ್ನು ಒದಗಿಸಬೇಕು. ಬೆಳೆವಿವರ ಮಾಹಿತಿಯನ್ನು ಸಹಕಾರಿ ಸಂಘಗಳಲ್ಲಿ ನೋಂದಣಿ ಮಾಡಿಕೊಂಡು ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ ಸಲ್ಲಿಸಲಾಗುತ್ತದೆ. ಆದರೆ ಕೆಲ ರೈತರ ಪಹಣಿಪತ್ರಿಕೆಯಲ್ಲಿ ಬೆಳೆ ನಮೂದಾಗದ ಕಾರಣ ರೈತರಿಗೆ ಬೆಳೆಸಾಲ ಪಡೆಯಲು ಮತ್ತು ವಿಮೆ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ರೈತರು ಅಡಕೆ ಬೆಳೆ ವಿವರ ನಮೂದು ಮಾಡಿಕೊಳ್ಳಲು ತಹಸೀಲ್ದಾರ್ ಬಳಿ, ಬತ್ತ ಬೆಳೆ ವಿವರ ನಮೂದಿಗೆ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ತೆರಳಿ ಕಂಪ್ಯೂಟರ್ ದೃಢೀಕರಣ ಪಡೆದುಕೊಂಡು ಪುನಃ ಸಹಕಾರಿ ಸಂಘಗಳಿಗೆ ಸಲ್ಲಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಪುನಃ ಕ್ಷೇತ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಾರೆ. ಈ ಎಲ್ಲ ಕಾರ್ಯುಕ್ಕೆ ಕನಿಷ್ಠ ೧೫ ದಿನ ಕಾಲವಕಾಶ ಅಗತ್ಯವಿದೆ. ಅಲ್ಲಿವರೆಗೆ ಮೊದಲ ಹಂತದ ಬೆಳೆ ಸಾಲದ ಅರ್ಜಿ ಸಲ್ಲಿಕೆಯಾಗುತ್ತದೆ. ೨ ಹಂತದ ಬೆಳೆ ಸಾಲ ಪಡೆಯಲು ೧ ತಿಂಗಳ ಕಾಯಬೇಕು.ರೈತರು ಬೆಳೆಸಾಲ ಮರುಪಾವತಿಗೆ ಬೇರೆಡೆ ಕೈಗಡ ಸಾಲ ಪಡೆದುಕೊಂಡು ಭರಣ ಮಾಡುತ್ತಾರೆ. ಆರ್‌ಟಿಸಿಯಲ್ಲಿ ಬೆಳೆ ದಾಖಲು ಇಲ್ಲದ ಕಾರಣ ಸಾಲ ದೊರೆಯದೇ ಪರದಾಡುವಂತಾಗಿದೆ. ದೃಢೀಕರಣ ಪಡೆದು ಅದನ್ನು ಸಲ್ಲಿಸಲು ಕನಿಷ್ಠ ೧೫ರಿಂದ ೨೦ ದಿನ ಕಾಯಬೇಕಾಗಿದೆ. ದಾಖಲೆಗಳು ಸರಿಯಾಗಿರುವುದನ್ನು ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ ಮೊದಲ ಹಂತದಲ್ಲಿ ಸಲ್ಲಿಕೆ ಮಾಡಲಾಗುತ್ತದೆ. ೨ನೇ ಹಂತ ಬರುವವರೆಗೆ ರೈತರು ಸಾಲಕ್ಕೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ನಿಯಮ ಬದಲಾಯಿಸಿ: ಸರ್ಕಾರದಿಂದ ಪ್ರತಿ ವರ್ಷವೂ ಪಹಣಿಪತ್ರಿಕೆಯಲ್ಲಿ ಬೆಳೆ ವಿವರ ಮತ್ತು ಕ್ಷೇತ್ರವನ್ನು ಆನ್‌ಲೈನ್ ಮೂಲಕ ಆಪ್‌ನಲ್ಲಿ ದಾಖಲೀಕರಣ ಮಾಡಲಾಗುತ್ತದೆ. ಪ್ರತಿ ವರ್ಷವೂ ಕೆಲ ರೈತರ ಬೆಳೆ ವಿವರ ನಮೂದಾಗುತ್ತಿಲ್ಲ. ಸಾಫ್ಟ್‌ವೇರ್ ಸರಿಪಡಿಸುವತ್ತ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗೆ ಗಮನವಹಿಸಬೇಕಿದೆ. ಇಲ್ಲವಾದಲ್ಲಿ ರೈತರಿಗೆ ಬೆಳೆಸಾಲ ಪಡೆಯಲು ಸಮಸ್ಯೆಯಾಗುತ್ತಿದೆ. ಕಳೆದ ವರ್ಷ ಹಳೆ ಪಹಣಿಪತ್ರಿಕೆ ನೀಡಬಹುದಿತ್ತು. ಈ ವರ್ಷದಿಂದ ಕಡ್ಡಾಯವಾಗಿ ಹೊಸ ಆರ್‌ಟಿಸಿ ನೀಡಬೇಕಾದ್ದರಿಂದ ಸಮಸ್ಯೆಗೆ ಕಾರಣವಾಗಿದೆ. ನಿಯಮ ಬದಲಾಯಿಸಿ ಹಳೆ ಆರ್‌ಟಿಸಿ ಮೂಲಕ ಸಾಲ ವಿತರಣೆಗೆ ಕ್ರಮವಾಗಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.