ಜೆಟ್ ಏರ್ ವೇಸ್ ಉದ್ಯೋಗಿ, ಬೆಳ್ತಂಗಡಿ ಮೂಲದ ಯುವತಿ ಪಂಜಾಬ್‌ನಲ್ಲಿ ಅನುಮಾನಾಸ್ಪದ ಸಾವು

| N/A | Published : May 19 2025, 12:18 AM IST / Updated: May 19 2025, 09:17 AM IST

ಜೆಟ್ ಏರ್ ವೇಸ್ ಉದ್ಯೋಗಿ, ಬೆಳ್ತಂಗಡಿ ಮೂಲದ ಯುವತಿ ಪಂಜಾಬ್‌ನಲ್ಲಿ ಅನುಮಾನಾಸ್ಪದ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ತಂಗಡಿ ತಾಲೂಕು ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ ಜೆಟ್ ಏರ್‌ ವೇಸ್‌ನಲ್ಲಿ ಏರೊನೋಟಿಕಲ್ ಎಂಜಿನಿಯರ್ ಆಗಿರುವ ಆಕಾಂಕ್ಷಾ (22 ) ತಾನು ಕಲಿತಿದ್ದ ಪಂಜಾಬ್‌ ರಾಜ್ಯದಲ್ಲಿನ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

 ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ ಜೆಟ್ ಏರ್‌ ವೇಸ್‌ನಲ್ಲಿ ಏರೊನೋಟಿಕಲ್ ಎಂಜಿನಿಯರ್ ಆಗಿರುವ ಆಕಾಂಕ್ಷಾ (22 ) ತಾನು ಕಲಿತಿದ್ದ ಪಂಜಾಬ್‌ ರಾಜ್ಯದಲ್ಲಿನ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ ಸುರೇಂದ್ರನ್ ಮತ್ತು ಸಿಂಧೂದೇವಿ ದಂಪತಿ ಪುತ್ರಿಯಾಗಿರುವ ಈಕೆ, ಪಂಜಾಬಿನ ಎಲ್‌ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಕಳೆದ ಆರು ತಿಂಗಳ ಹಿಂದೆ ಏರೋಸ್ಪೇಸ್ ಎಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು.

ಮುಂದೆ ವಿದೇಶಕ್ಕೆ ಉದ್ಯೋಗಕ್ಕೆ ಹೋಗುವವರಿದ್ದು, ಪಂಜಾಬ್ ಎಲ್‌ಪಿಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್‌ಗಳನ್ನು ಪಡೆಯಲು ತೆರಳಿದ್ದರು. ಶುಕ್ರವಾರ ಕಾಲೇಜಿಗೆ ಹೋಗಿದ್ದು, ಕಾಲೇಜಿನಲ್ಲಿ ಅಂದು ಸರ್ಟಿಫಿಕೇಟ್‌ಗಳನ್ನು ನೀಡದೆ ಶನಿವಾರ ಬರುವಂತೆ ತಿಳಿಸಿದ್ದಾರೆ ಎಂದು ಮನೆಯವರಿಗೆ ಆಕೆ ಮಾಹಿತಿ ನೀಡಿದ್ದಳು. ಇದಾದ ಬಳಿಕ ಶನಿವಾರ ಬೆಳಗ್ಗೆ ಆಕೆ ಮತ್ತೆ ಕಾಲೇಜಿಗೆ ಹೋಗಿದ್ದಾಳೆ. 11.45ಕ್ಕೆ ತಾಯಿಗೆ ಮೆಸೇಜ್ ಮಾಡಿ ತಾನು ಕಾಲೇಜಿನಲ್ಲಿ ಇರುವುದಾಗಿ ತಿಳಿಸಿರುವುದಾಗಿ ಮನೆಯವರು ಮಾಹಿತಿ ನೀಡಿದ್ದಾರೆ.

ಸಂಜೆ 4.30ಕ್ಕೆ ಪಂಜಾಬಿನ ಪೊಲೀಸರು ಮನೆಯವರಿಗೆ ಕರೆ ಮಾಡಿದ್ದು, ಆಕೆ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.ಮೃತ ಆಕಾಂಕ್ಷಾ ಅವರ ತಂದೆ, ತಾಯಿ, ಸಹೋದರ, ಚಿಕ್ಕಮ್ಮ ಹಾಗೂ ಕುಟುಂಬದ ಇಬ್ಬರು ಪಂಜಾಬ್‌ಗೆ ತೆರಳಿದ್ದು, ಭಾನುವಾರ ರಾತ್ರಿ ಪಂಜಾಬ್ ರಾಜ್ಯದ ಜಲಂಧರ್ ಜಿಲ್ಲೆಯ ಪಗ್ವಾಡಾ ಸಿವಿಲ್ ಸರ್ಕಾರಿ ಆಸ್ಪತ್ರೆಗೆ ತಲುಪಿದ್ದಾರೆ. ಜಲಂಧರ್ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ಸಹೋದರ ಆಕಾಶ್ ನಾಯರ್ ದೂರು ನೀಡಿದ್ದು, ಶವ ಪರೀಕ್ಷೆ ಸೋಮವಾರ ನಡೆಯಲಿದೆ. ಬಳಿಕ ಅಂತ್ಯಸಂಸ್ಕಾರ ಧರ್ಮಸ್ಥಳದ ಬೋಳಿಯಾರ್ ಮನೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಕರೆಯಲ್ಲಿ ಗೊಂದಲ:ಶನಿವಾರ ಸಂಜೆ 4.30ಕ್ಕೆ ಆಕಾಂಕ್ಷಾ ಮನೆಗೆ ಕರೆ ಬಂದಿದ್ದು, ತಾವು ಪಂಜಾಬ್ ಪೊಲೀಸರು ಕರೆ ಮಾಡುತ್ತಿದ್ದೇವೆ ನಿಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ಇದು ಯಾವುದೋ ಫೇಕ್ ಕರೆ ಇರಬಹುದು ವಂಚಿಸುವ ಉದ್ದೇಶದಿಂದ ಕರೆ ಮಾಡಿರಬಹುದು ಎಂದು ಮನೆಯವರಿಗೆ ಅನುಮಾನ ಉಂಟಾಗಿತ್ತು. ಇದಾದ ಬಳಿಕ ಮತ್ತೆ ಕರೆ ಮಾಡಿದ ಅವರು ತಾವು ಪೊಲೀಸರು ಎಂದು ಸ್ಪಷ್ಟ ಪಡಿಸಿ, ಮಗಳು ಆಕಾಂಕ್ಷಾ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಸಿದ ಬಳಿಕ ವಾಸ್ತವವನ್ನು ಅರಿತಿದ್ದಾರೆ.

ತನಿಖೆಗೆ ಒತ್ತಾಯ:ಕಾಲೇಜಿಗೆ ಪ್ರಮಾಣ ಪತ್ರ ಪಡೆಯಲು ತೆರಳಿದ್ದ ಆಕಾಂಕ್ಷಾ ಅಸಹಜ ಸಾವಿನ ಬಗ್ಗೆ ಹಲವಾರು ಅನುಮಾನಗಳಿದೆ. ಎಲ್ಲರೊಂದಿಗೆ ಲವಲವಿಕೆಯಿಂದ ವ್ಯವಹರಿಸುತ್ತಿದ್ದ ಈಕೆ, ಘಟನೆ ನಡೆದ ದಿನವೂ ಚೆನ್ನಾಗಿಯೇ ಇದ್ದಳು. ಈಕೆ ಯಾವ ರೀತಿಯಾಗಿ ಮೃತಪಟ್ಟಿದ್ದಾಳೆ ಎಂಬ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು. ತನ್ನ ಮಗಳಿಗೆ ನ್ಯಾಯ ಕೊಡಿಸಬೇಕು ಎಂದು ಮೃತ ಆಕಾಂಕ್ಷಾ ತಂದೆ ಸುರೇಂದ್ರನ್, ರಾಷ್ಟ್ರಪತಿಯವರಿಗೆ, ರಾಜ್ಯದ ಮುಖ್ಯಮಂತ್ರಿಗೆ ಹಾಗೂ ಇತರರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿತ್ವದವಳಲ್ಲ:

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಆಕಾಂಕ್ಷಾ ಅವರ ಅಜ್ಜಿ ಸರಸ್ವತಿ ಹಾಗೂ ಅತ್ತೆ ಚಂದ್ರಪ್ರಭಾ, ಆಕಾಂಕ್ಷಾ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಉಳ್ಳವಳಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿತ್ವ ಹೊಂದಿದವಳಲ್ಲ. ಪೋಷಕರು ಸಾಕಷ್ಟು ಸಾಲ ಮಾಡಿ ಆಕೆಗೆ ವಿದ್ಯಾಭ್ಯಾಸ ನೀಡಿದ್ದಾರೆ. ಸಾವಿನ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಕಾಲೇಜಿನಿಂದ ಫೋನ್ ಕರೆ ಮಾಡಿದ್ದಳು. ಬಳಿಕ ಕರೆ ಮಾಡಿದಾಗ ಪ್ರತಿಕ್ರಿಯೆ ನೀಡಿಲ್ಲ. ಸಂಜೆ ವೇಳೆ ಘಟನೆಯ ಬಗ್ಗೆ ಪಂಜಾಬ್ ಪೊಲೀಸರಿಂದ ಕರೆ ಬಂದಿದೆ ಎಂದು ತಿಳಿಸಿದ್ದಾರೆ.

Read more Articles on