ಸಾರಾಂಶ
ಪಟ್ಟಣದ ಬಿಎಚ್ ರಸ್ತೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಜಗದೀಶ್ ಪರಿಶೀಲನೆ ನಡೆಸಿದರು.
ಸಾಗರ: ಪಟ್ಟಣದ ಬಿಎಚ್ ರಸ್ತೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಜಗದೀಶ್ ಪರಿಶೀಲನೆ ನಡೆಸಿದರು.
ಈ ವೇಳೆ ಸಾರ್ವಜನಿಕರು ಮಾತನಾಡಿ, ಕಾಮಗಾರಿಯನ್ನು ನಾಮಕಾವಸ್ಥೆಗೆ ನಡೆಸಲಾಗುತ್ತಿದೆ. ಕ್ಯೂರಿಂಗ್ ಬಗ್ಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ ಎಂದು ದೂರಿದರು.ಕ್ಯೂರಿಂಗ್ ಸರಿಯಾಗಿ ಮಾಡದಿರುವುದರಿಂದ ಬಿಸಿಲ ಧಗೆಗೆ ಈಗಾಗಲೇ ಚರಂಡಿ ಬಿರುಕು ಬಿಟ್ಟಿದೆ. ಕೆಲವೇ ದಿನಗಳಲ್ಲಿ ಚರಂಡಿ ಹಾಳಾಗುವುದರಲ್ಲಿ ಅನುಮಾನವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜೋಗ ರಸ್ತೆಯ ಸೇತುವೆ ಕಾಮಗಾರಿಯಿಂದ ಹಿಡಿದು, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದ ಒಳಚರಂಡಿ ಕಾಮಗಾರಿಯನ್ನು ಜಗದೀಶ್ ವೀಕ್ಷಿಸಿದರು. ಸ್ಥಳದಲ್ಲಿದ್ದ ಪತ್ರಕರ್ತರು ಕೂಡ ಕಳಪೆ ಕಾಮಗಾರಿಯ ಬಗ್ಗೆ ಇಂಚಿಂಚೂ ಗಮನಕ್ಕೆ ತಂದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಎಂಜಿನಿಯರ್ ಜಗದೀಶ್, ಪಟ್ಟಣದ ಬಿಎಚ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಒಳಚರಂಡಿ ಕಾಮಗಾರಿ ಕಳಪೆ ಎನ್ನುವ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಒಳಚರಂಡಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ದೃಢಪಟ್ಟರೆ ಮುಲಾಜಿಲ್ಲದೇ ಡೆಮಾಲಿಷ್ ಮಾಡಿಸಿ, ಗುಣಮಟ್ಟದ ಕಾಮಗಾರಿ ನಡೆಸಲು ಆದೇಶಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕಾಮಗಾರಿಯನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ಮೇಲ್ನೋಟಕ್ಕೆ ಕಾಮಗಾರಿ ಕಳಪೆಯಿಂದ ಕೂಡಿರುವುದು ಗಮನಕ್ಕೆ ಬಂದಿದೆ. ಕಾಮಗಾರಿಯ ಕ್ವಾಲಿಟಿಯ ಬಗ್ಗೆ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗುಣಮಟ್ಟದ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದ ಅವರು, ಜೂನ್, ಜುಲೈ ನಲ್ಲಿ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.