ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಜಾನ್ಸನ್‌ ಮಾರುಕಟ್ಟೆ, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾ ಠಾಣೆಗಳ ವ್ಯಾಪ್ತಿಯಲ್ಲಿ ನೀರು ಸೋರಿಕೆ ತಡೆಯಲು ₹199 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ವ್ಯವಸ್ಥೆ ಆಧುನೀಕರಣ ಹಾಗೂ ಮರು ನಿರ್ಮಾಣ ಮಾಡುವ ಡಿಪಿಆರ್‌ಗೆ   ಅನುಮೋದನೆ  

 ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಜಾನ್ಸನ್‌ ಮಾರುಕಟ್ಟೆ, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾ ಠಾಣೆಗಳ ವ್ಯಾಪ್ತಿಯಲ್ಲಿ ನೀರು ಸೋರಿಕೆ ತಡೆಯಲು ₹199 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ವ್ಯವಸ್ಥೆ ಆಧುನೀಕರಣ ಹಾಗೂ ಮರು ನಿರ್ಮಾಣ ಮಾಡುವ ಡಿಪಿಆರ್‌ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್‌, ಜಾನ್ಸನ್‌ ಮಾರುಕಟ್ಟೆ, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾ ಠಾಣೆಗಳ ಉಪವಿಭಾಗಗಳ ವ್ಯಾಪ್ತಿಯಲ್ಲಿ ನೀರಿನ ಸೋರಿಕೆ ಹೆಚ್ಚಾಗಿದೆ. ಹೀಗಾಗಿ ನೀರಿನ ಸೋರಿಕೆಯನ್ನು ಶೇ.33 ರಿಂದ ಶೇ.10ಕ್ಕೆ ಮಿತಗೊಳಿಸುವ ಸಲುವಾಗಿ ₹199 ಕೋಟಿ ವೆಚ್ಚದಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದು, ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ ಎಂದು ಹೇಳಿದರು.

ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುಗೆ ಮರು ಟೆಂಡರ್‌ಗೆ ನಿರ್ಧಾರ:

ಬೆಂಗಳೂರಿನ ಬೈಯಪ್ಪನಹಳ್ಳಿ ಐಓಸಿ ಜಂಕ್ಷನ್‌ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಹಾಗೂ ಐಟಿಸಿ ಫ್ಯಾಕ್ಟರಿ ಜಂಕ್ಷನ್‌ನಿಂದ ಬೈಯಪ್ಪನಹಳ್ಳಿ ಜಂಕ್ಷನ್‌ವರೆಗೆ ಹೆಚ್ಚುವರಿ ಎರಡು ಪಥದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವ ಕಾಮಗಾರಿ ಸಂಬಂಧ ಮರು ಟೆಂಡರ್‌ ಕರೆಯಲು ಸಚಿವ ಸಂಪುಟ ತೀರ್ಮಾನ ಮಾಡಿದೆ.

ಕುಸುಮಾ ಎಂಬ (ಸ್ಟಾರ್‌ ಇನ್‌ಫ್ರಾಟೆಕ್‌) ಗುತ್ತಿಗೆದಾರರು ₹426.50 ಕೋಟಿ ಮೊತ್ತಕ್ಕೆ ಟೆಂಡರ್‌ ಬಿಡ್‌ ಮಾಡಿದ್ದಾರೆ. ಇದು ಅಂದಾಜು ಯೋಜನಾ ವೆಚ್ಚವಾಗಿರುವ ₹352 ಕೋಟಿಗಳಿಗಿಂತ ಶೇ.21ರಷ್ಟು ಹೆಚ್ಚುವರಿಯಾಗಿದ್ದು, ಇಷ್ಟು ದುಬಾರಿ ಮೊತ್ತಕ್ಕೆ ಟೆಂಡರ್‌ ನೀಡುವ ಬದಲು ಮರು ಟೆಂಡರ್‌ ಕರೆಯಬೇಕು ಎಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.