ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಅಂಚೆ ಚೀಟಿಯಲ್ಲಿ ಪ್ರಕಟಗೊಳ್ಳುವ ಸಂಸ್ಕೃತ ಭಾಷೆಯ ಪದಗಳನ್ನು ಸಂಗ್ರಹಿಸಿ, ವಾಕ್ಯಗಳನ್ನು ರಚಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವ ನಿವೃತ್ತ ಅಂಚೆ ಅಧಿಕಾರಿ ಕೆ.ವಿ.ಅನಂತರಾಮು ಅವರ ಕಾರ್ಯ ಅತ್ಯಂತ ವಿನೂತನ ಹಾಗೂ ಶ್ಲಾಘನೀಯವಾದುದು ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ಮುಕ್ತಕಂಠದಿಂದ ಪ್ರಶಂಸಿಸಿದರು.ಅವರು ತುಮಕೂರಿನ ಶೇಷಾದ್ರಿಪುರಂ ಶಾಲೆಯಲ್ಲಿ ಏರ್ಪಡಿಸಿದ್ದ ಅಂಚೆಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ, ಅಂಚೆಚೀಟಿ ಪ್ರದರ್ಶನ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಈ ಕೃತಿಯಲ್ಲಿರುವ ಸಂಸ್ಕೃತ ಶಬ್ದಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಕಾಣಬಹುದಾಗಿದ್ದು, ವಿವಿಧ ಭಾಷೆಗಳ ಸಂಗಮವಾಗಿದೆ ಎಂದು ಬಣ್ಣಿಸಿದ ಅವರು, ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯು ಭಾರತೀಯ ಭಾಷೆಗಳಲ್ಲದೆ, ವಿದೇಶಿ ಭಾಷೆಗಳ ಮೇಲೆಯೂ ತನ್ನದೇ ಆದ ಪ್ರಭಾವವನ್ನು ಬೀರಿದೆ. ಒಂದು ರೀತಿಯಲ್ಲಿ ಮಾತೃಭಾಷೆಯೆನಿಸಿದೆ. ಭಾಷೆಯ ಹೆಸರಿನಲ್ಲಿ ದ್ವೇಷಕಾರುವ ಬದಲು ಸಾಮರಸ್ಯ ಮೂಡಿಸಬೇಕು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ಎಂ.ಎಲ್.ಎ. ಕಾಲೇಜಿನ ಪ್ರಾಚಾರ್ಯ ಡಾ.ಗಣಪತಿ ಹೆಗಡೆ ಅವರು ಮಾತನಾಡಿ, ಅಂಚೆ ಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ ಅತ್ಯಂತ ವಿನೂತನ ಪರಿಕಲ್ಪನೆಯಾಗಿದೆ. ಅಂಚೆಚೀಟಿಯಲ್ಲಿ ಸಂಸ್ಕೃತವಿದೆ. ಈಗಾಗಲೇ ಬೇರೆ ಭಾಷೆಗಳಲ್ಲಿ ಈ ರೀತಿಯ ಪುಸ್ತಕಗಳು ಪ್ರಕಟಗೊಂಡಿದ್ದು, ಸಂಸ್ಕೃತದಲ್ಲಿ ಇದೀಗ ಪ್ರಕಟಗೊಂಡಿರುವುದು ಅತ್ಯಂತ ಸಂತಸಕರವಾದುದಾಗಿದೆ. ನಾವಾಡುವ ಪ್ರತಿ ಶಬ್ದದ ಹಿಂದೆ ಸಂಸ್ಕೃತವಿದೆ. ಅದರ ಪ್ರಭಾವ ಬಹಳಷ್ಟಿದೆ. ಸಂಸ್ಕೃತದಿಂದ ಭಾಷಾ ಸಾಮರಸ್ಯ ಉಂಟಾಗುತ್ತದೆ. ನಾವೆಲ್ಲ ಒಂದು ಎಂಬ ಭಾವನೆ ಮೂಡುತ್ತದೆ. ಭಾಷಾ ಕಲಿಕೆಯು ವ್ಯಕ್ತಿಯನ್ನು ಶ್ರೇಷ್ಠತೆಗೆ ಕೊಂಡೊಯ್ಯುತ್ತದೆ ಎಂದು ಅನೇಕ ನಿದರ್ಶನಗಳೊಂದಿಗೆ ವಿವರಿಸಿದರು.ಮತ್ತೋರ್ವ ಅತಿಥಿ ಬೆಂಗಳೂರು ವಲಯದ ಹಿರಿಯ ಅಂಚೆ ಅಧಿಕಾರಿಗಳಾದ ವಿ.ತಾರಾ ಮಾತನಾಡಿ, ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ಅನೇಕ ಶ್ಲೋಕಗಳೆಲ್ಲ ಸಂಸ್ಕೃತದಲ್ಲಿದೆ. ಅಂತಹ ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ಅನಂತರಾಮು ಅವರು, ಅಂಚೆಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ ಎಂಬ ವಿನೂತನ ಪುಸ್ತಕವನ್ನು ಪ್ರಕಟಿಸಿರುವುದು ಅತ್ಯಂತ ಸ್ತುತ್ಯಾರ್ಹವಾಗಿದೆ ಎಂದು ಪ್ರಶಂಸಸಿದರು.ಇನ್ನೋರ್ವ ಅತಿಥಿ ಉದ್ಯಮಿ ಎಸ್.ಪಿ.ಚಿದಾನಂದ್ ಅವರು ಮಾತನಾಡಿ, ಅಂಚೆಚೀಟಿ ಸಂಗ್ರಹ ಮಾಡುವ ಹವ್ಯಾಸ ಅತ್ಯುತ್ತಮವಾದುದು. ಇದು ಕೇವಲ ಹವ್ಯಾಸವಷ್ಟೇ ಅಲ್ಲದೆ ಇದರಿಂದ ಕೋಟ್ಯಂತರ ರು.ಗಳನ್ನು ಸಂಪಾದಿಸಲೂಬಹುದು ಎಂದರು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ, ಅಂಚೆಚೀಟಿಯ ಪ್ರಾರಂಭ, ನಡೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಶೇಷಾದ್ರಿಪುರಂ ಶಾಲೆಯ ಪ್ರಿನ್ಸಿಪಾಲ್ ಹೆಚ್.ಎನ್.ನಂದಾರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇಷಾದ್ರಿಪುರಂ ಶಾಲೆಯಲ್ಲೂ ಸಹ ಅಂಚೆಚೀಟಿ ಸಂಗ್ರಹದ ಕ್ಲಬ್ ಸ್ಥಾಪನೆ ಮಾಡಿದ್ದು, ಅನೇಕ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆಂದರು.‘ಅಂಚೆಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ’ ಕೃತಿಯ ಕರ್ತೃ ಕೆ.ವಿ.ಅನಂತರಾಮು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿ ರಚನೆಗೆ ಸಹಕರಿಸಿದ ಅನೇಕ ಹಿತೈಷಿಗಳನ್ನು ಸನ್ಮಾನಿಸಲಾಯಿತು. ಭವಾನಿ ಹೆಗಡೆ ಪ್ರಾರ್ಥಿಸಿದರು. ರಶ್ಮಿ ನಿರೂಪಿಸಿದರು. ಸುಚೇತನ ಗಿರೀಶ್ ವಂದಿಸಿದರು.