ಸ್ವಸ್ಥ ಸಮಾಜ ನಿರ್‍ಮಾಣದಲ್ಲಿ ಮಾಧ್ಯಮ ಪಾತ್ರ ಅನನ್ಯ: ಶಾಸಕ ಗೋಪಾಲಕೃಷ್ಣ ಬೇಳೂರು

| Published : Aug 01 2024, 12:19 AM IST

ಸ್ವಸ್ಥ ಸಮಾಜ ನಿರ್‍ಮಾಣದಲ್ಲಿ ಮಾಧ್ಯಮ ಪಾತ್ರ ಅನನ್ಯ: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರದಲ್ಲಿ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ, ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರ ಬದುಕು ಹೂವಿನ ಹಾಸಿಗೆ ಅಲ್ಲ. ದಿನನಿತ್ಯ ಸವಾಲುಗಳ ಜೊತೆ ಬದುಕುವ ಪತ್ರಕರ್ತರ ಬಗ್ಗೆ ಸಮಾಜ ಗೌರವ ಇರಿಸಿಕೊಳ್ಳಬೇಕು ಎಂದರು.

ಪತ್ರಕರ್ತರು ಸುದ್ದಿಯ ಹಿಂದೆ ಓಡುವ ಧಾವಂತದಲ್ಲಿ ತಮ್ಮ ವೈಯಕ್ತಿಕ ಬದುಕನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದ ಶಾಸಕರು, ಪತ್ರಕರ್ತರಿಗೆ ಬಸ್‌ಪಾಸ್, ಆರೋಗ್ಯವಿಮೆ ಇನ್ನಿತರ ಸೌಲಭ್ಯ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಗಮನಾರ್ಹವಾದದ್ದು ಎಂದವರು ಅಭಿಪ್ರಾಯಪಟ್ಟರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಎಂ.ರಾಘವೇಂದ್ರ, ಎಲ್ಲಿಯವರೆಗೆ ಮಾಧ್ಯಮ ಗಳು ಆಳುವ ವರ್ಗದ ಪರವಾಗಿ ಇರುತ್ತವೆಯೋ ಅಲ್ಲಿಯವರೆಗೆ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿರಿಸಲು ಮಾಧ್ಯಮಗಳು ನಿರಂತರ ಶ್ರಮಿಸುತ್ತಿವೆ. ಜನಪರ ನೆಲೆಗಟ್ಟಿನಲ್ಲಿ ಸಾಮಾಜಿಕ ವಿಮರ್ಶೆ ಮಾಡುವ ಮಾಧ್ಯಮಗಳು ಆಳುವವರ ಕೆಂಗಣ್ಣಿಗೂ ಗುರಿಯಾಗುತ್ತಿವೆ ಎಂದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿದರು. ಹಿರಿಯ ಪತ್ರಕರ್ತರಾದ ಲೋಕೇಶ ಕುಮಾರ್, ಆರ್. ಜಗನ್ನಾಥ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಹೇಶ ಹೆಗಡೆ ಅವರನ್ನು ಅಭಿನಂದಿಸಲಾಯಿತು. ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಪಡೆದ ಸವಿ ಪ್ರಸಾದ್ ಅವರನ್ನು ಪುರಸ್ಕರಿಸಲಾಯಿತು.

ಸಂಘದ ತಾಲ್ಲೂಕು ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಯತೀಶ್ ಆರ್., ತಾ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ನಗರಸಭೆ ಸದಸ್ಯ ಶ್ರೀನಿವಾಸ್ ಮೇಸ್ತ್ರಿ ಉಪಸ್ಥಿತರಿದ್ದರು. ಮಾ.ವೆಂ.ಸ.ಪ್ರಸಾದ್ ಸ್ವಾಗತಿಸಿದರು. ಮಹೇಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜಿ.ರಾಘವನ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.

‘ಅಭಿಪ್ರಾಯ ಹೇರದಿರಿ, ಸಂವೇದನಾಶೀಲರಾಗಿ’

ಇನ್ನು, ದೃಶ್ಯ ಮಾಧ್ಯಮಗಳು ತಮ್ಮ ಅಭಿಪ್ರಾಯವನ್ನು ಜನರ ಮೇಲೆ ಹೇರುವ ಕೆಲಸ ಮಾಡುತ್ತಿವೆ. ಸಂಪೂರ್ಣ ಸುಳ್ಳುಸುದ್ದಿಯನ್ನು ಸತ್ಯ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ದುರದೃಷ್ಟಕರ. ಪೂರ್ವಾಗ್ರಹಪೀಡಿತರಾಗುವುದಕ್ಕಿಂತ ಪತ್ರಕರ್ತರಿಗೆ ಸಂವೇದನಾಶೀಲತೆ ಅಗತ್ಯ. ಸುದ್ದಿಯ ವೈಭವೀಕರಣ, ಪ್ರಚೋದಕತೆ, ರೋಚಕತೆಗಿಂತ ಜನರಿಗೆ ವಾಸ್ತವ ತಿಳಿಸುವ ಕೆಲಸ ಮಾಡಬೇಕು ಎಂದು ಹಿರಿಯ ನ್ಯಾಯವಾದಿ ಎಂ.ರಾಘವೇಂದ್ರ ಹೇಳಿದರು.