ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಶುಶ್ರೂಷಕರ ಪಾತ್ರ ನಿರ್ಣಾಯಕವಾದುದು

| Published : Feb 27 2025, 12:34 AM IST

ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಶುಶ್ರೂಷಕರ ಪಾತ್ರ ನಿರ್ಣಾಯಕವಾದುದು
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯರಿಗಿಂತ ದಾದಿಯರು ಹೆಚ್ಚು ಕಾಲ ರೋಗಿಗಳ ಜೊತೆಯಲ್ಲೇ ಇದ್ದು ಶುಶ್ರೂಷೆ ಮಾಡುತ್ತಾರೆ. ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಶುಶ್ರೂಷಕರು ನಿರ್ಣಾಯಕ ಆರೈಕೆದಾರರಾಗಿ ಸಲ್ಲಿಸುವ ಪಾತ್ರ ಅಮೂಲ್ಯ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಉಪ ಕುಲಪತಿ ಎಂ.ಎ.ಶೇಖರ್‌ ತಿಳಿಸಿದರು. ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಒಂದು ತಂಡದಂತೆ ಕೆಲಸ ನಿರ್ವಹಿಸುತ್ತದೆ. ಅರೆವೈದ್ಯಕೀಯ ವೃತ್ತಿ ಶಿಕ್ಷಣ ಪಡೆದು, ವೈದ್ಯಕೀಯ ತಂಡದ ಒಂದು ಭಾಗವಾಗಿ ಕೆಲಸ ನಿರ್ವಹಿಸಬಹುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ವೈದ್ಯರಿಗಿಂತ ದಾದಿಯರು ಹೆಚ್ಚು ಕಾಲ ರೋಗಿಗಳ ಜೊತೆಯಲ್ಲೇ ಇದ್ದು ಶುಶ್ರೂಷೆ ಮಾಡುತ್ತಾರೆ. ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಶುಶ್ರೂಷಕರು ನಿರ್ಣಾಯಕ ಆರೈಕೆದಾರರಾಗಿ ಸಲ್ಲಿಸುವ ಪಾತ್ರ ಅಮೂಲ್ಯ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಉಪ ಕುಲಪತಿ ಎಂ.ಎ.ಶೇಖರ್‌ ತಿಳಿಸಿದರು.

ಪಟ್ಟಣದ ಜ್ಞಾನಸಾಗರ ವಿದ್ಯಾಸಂಸ್ಥೆಯ ಆವರಣದಲ್ಲಿ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ನಾಗೇಶ್ ಆರೋಗ್ಯ ಮತ್ತು ಅರೆವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಬಿ.ಎಸ್‌ಸಿ ನರ್ಸಿಂಗ್, ಜಿಎನ್‌ಎಂ ಹಾಗೂ ಅರೆ ವೈದ್ಯಕೀಯ ವಿದ್ಯಾರ್ಥಿಗಳ ದೀಪ ಪ್ರಜ್ವಲನ, ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶುಶ್ರೂಕರ ಹುದ್ದೆ ಪವಿತ್ರವಾದದ್ದು, ಯಾವುದೇ ವೈದ್ಯರು ಒಂದು ಜೀವವನ್ನು ಉಳಿಸುವ ಕಾರ್ಯ ಮಾಡುವ ಸಂದರ್ಭದಲ್ಲಿ ಶುಶ್ರೂಷಕರು ಉತ್ತಮ ಸಹಾಯಕರಾಗಿ ಕೆಲಸ ಮಾಡಬೇಕಿದೆ. ಶುಶ್ರೂಷಕ ಶಾಲೆಯ ವಿದ್ಯಾರ್ಥಿಗಳು ನೆಂಟಿಗೇಲ್ ತರ ಸೇವೆ ಮಾಡಬೇಕು. ಶುಶ್ರೂಕರ ಹುದ್ದೆಯವರಿಗೆ ತಾಯ್ತನ, ಕರುಣೆ, ಮಮತೆ, ಸಹನೆ ಮತ್ತು ತಾಳ್ಮೆ ಎಲ್ಲರಲ್ಲೂ ಇರಬೇಕು. ಎಲ್ಲಾ ರೋಗಿಗಳನ್ನು ತಾಳೆಯಿಂದ ಪರಿಶೀಲಿಸಿ ಜೀವ ಉಳಿಸುವ ಕೆಲಸಗಳನ್ನು ಮಾಡಬೇಕು. ವೃತ್ತಿಯಲ್ಲಿ ಮುಖ್ಯವಾಗಿ ನಿಸ್ವಾರ್ಥ ಸೇವೆಯ ಮನೋಭಾವ ಬರಬೇಕಿದೆ. ರೋಗಿಯ ಚಿಕಿತ್ಸೆಯಲ್ಲಿ ಅರೆವೈದ್ಯಕೀಯ ಸಿಬ್ಬಂದಿಯೂ ಮುಖ್ಯ. ಇಂದು ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಒಂದು ತಂಡದಂತೆ ಕೆಲಸ ನಿರ್ವಹಿಸುತ್ತದೆ. ಅರೆವೈದ್ಯಕೀಯ ವೃತ್ತಿ ಶಿಕ್ಷಣ ಪಡೆದು, ವೈದ್ಯಕೀಯ ತಂಡದ ಒಂದು ಭಾಗವಾಗಿ ಕೆಲಸ ನಿರ್ವಹಿಸಬಹುದು ಎಂದು ತಿಳಿಸಿದರು.

ಶಿಕ್ಷಣವು ವ್ಯಕ್ತಿಯ ಬದುಕಿಗೆ ಉತ್ತರವಾಗಬೇಕೆ ಹೊರತು ಪ್ರಶ್ನೆಯಾಗಿರಬಾರದು, ಶಿಕ್ಷಣ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು. ವೃತ್ತಿ ಶಿಕ್ಷಣ ಕೋರ್ಸ್ ಗಳು ದುಡ್ಡು ಸಂಪಾದನೆಗೆ ಮಾತ್ರ ಸೀಮಿತಗೊಳ್ಳದೆ, ಸಾಧನೆ ಮತ್ತು ಕೊಡುಗೆಗಳನ್ನು ಗುರಿಯೊಂದಿಗೆ ವಿದ್ಯಾರ್ಥಿಗಳನ್ನು ಬೆಳೆಸುತ್ತದೆ. ದೀಪವನ್ನು ಹಿಡಿದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿ ಆರೋಗ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ತಮಗೆಲ್ಲರಿಗೂ ಉತ್ತಮ ಉಜ್ವಲ ಭವಿಷ್ಯವಿದೆ. ಪ್ರಸ್ತುತ ೨೦೨೫ರ ಆರ್ಥಿಕ ವರ್ಷದಲ್ಲಿ ಸುಮಾರು ೬೦ ಲಕ್ಷ ದಾದಿಯರ ಅವಶ್ಯಕತೆ ಇದೆ. ಹಾಗಾಗಿ ವಿದ್ಯಾರ್ಥಿಗಳು ಈ ಕೋರ್ಸ್‌ನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸದ ವಿಚಾರ. ೨೦೦೩ರಲ್ಲಿ ೫೦ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದೆ. ನಾಗೇಶ್ ಶಿಕ್ಷಣ ಸಂಸ್ಥೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯಿಂದಲೂ ಉತ್ತೇಜಿಸಿ ಉತ್ತಮ ಶಿಕ್ಷಣ ನೀಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾವು ಆಯ್ದುಕೊಂಡಿರುವ ಕ್ಷೇತ್ರದ ಪಾವಿತ್ರ್ಯ ಹಾಗೂ ಜವಾಬ್ದಾರಿ ಅರಿತು ಶಿಕ್ಷಣ ಪೂರ್ಣಗೊಳಿಸಿದರೆ ನಾಡಿಗೆ ಉತ್ತಮ ಹಾಗೂ ಮಾದರಿ ದಾದಿಯರ ಕೊಡುಗೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ ನಾಗೇಶ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ತರಬೇತಿ ಪಡೆದ ದಾದಿ ಮನುಕುಲಕ್ಕೆ ದೊರೆತ ವರದಾನ, ದಾದಿಯರು ಆರೋಗ್ಯ ಸೇವೆ ಉದ್ಯಮದ ಬೆನ್ನೆಲುಬು. ಅವರ ತ್ವರಿತ ಚಿಂತನೆ ಮತ್ತು ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದಾಗಿ ತುರ್ತು ಸಂದರ್ಭಗಳಲ್ಲಿ ಮುಂಚೂಣಿಯ ಪ್ರತಿಕ್ರಿಯೆಗಳನ್ನು ಒದಗಿಸುವಲ್ಲಿ ಅವರು ನಿರ್ಣಾಯಕರಾಗಿದ್ದಾರೆ. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಆದರೆ ಮಾನಸಿಕ ಧೈರ್ಯ ತುಂಬಿ ರೋಗಿಯನ್ನು ಸಂಪೂರ್ಣ ಗುಣಮುಖ ಮಾಡುವ ಜವಾಬ್ದಾರಿ ಆರವೈದ್ಯಕೀಯ ಸಿಬ್ಬಂದಿ ಹೊಂದಿರುತ್ತಾರೆ ಎಂದರು.

ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಭಾರತಿ ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ನರ್ಸಿಂಗ್ ಶಿಕ್ಷಣದ ಮಹತ್ವ ಹಾಗೂ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಹಾಸನದ ಸರ್ಕಾರಿ ನಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸಿ.ಟಿ.ರತ್ನಮ್ಮ ನರ್ಸಿಂಗ್‌ ಪ್ರತಿಜ್ಞಾವಿಧಿ ಬೋಧಿಸಿದರು.

ಪುರಸಭಾ ಮುಖ್ಯ ಅಧಿಕಾರಿ ಆರ್‌. ಯತೀಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಎ. ಎನ್. ಕಿಶೋರ್ ಕುಮಾರ್, ಸಂಸ್ಥೆಯ ಡೀನ್ ಡಾ. ಸುಜಾ ಫಿಲಿಪ್, ಪ್ರಾಂಶುಪಾಲೆ ಆರ್.ಜೆ.ವಿದ್ಯಾರಾಣಿ, ಸಂಸ್ಥೆಯ ಆಡಳಿತಾಧಿಕಾರಿ ಫಿಲಿಪ್, ನಿರ್ದೇಶಕರಾದ ಲಕ್ಷ್ಮೀಗೌಡ, ನಾರಾಯಣ್, ಸರೋಜಮ್ಮ ಇದ್ದರು.