ಸಾರಾಂಶ
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಆಯೋಜಿಸಿದ್ದ ದಾದಿಯರ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ,ನರಸಿಂಹರಾಜಪುರರೋಗಿಗಳ ಕಾಯಿಲೆ ಗುಣಪಡಿಸುವಲ್ಲಿ ಶುಶ್ರೂಷಕಿಯರ ಪಾತ್ರ ಪ್ರಮುಖವಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶುಶ್ರೂಷಕಿಯರು ರೋಗಿಗಳ ಜತೆ ಹೆಚ್ಚಿನ ಸಮಯ ಕಳೆಯುವುದರಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಆರೈಕೆ ಮಾಡಿ ಕಾಯಿಲೆ ಗುಣಪಡಿಸಲು ಶ್ರಮಿಸುತ್ತಾರೆ ಎಂದರು.
ಶುಶ್ರೂಷಕಿಯರು ತಾಳ್ಮೆಯಿಂದ ರೋಗಿಗಳ ಉತ್ತಮ ಆರೈಕೆ ಮಾಡಿದರೆ ಅವರ ಸೇವೆಯನ್ನು ಜನರು ಗುರುತಿಸುತ್ತಾರೆ. ಆಸ್ಪತ್ರೆಗೂ ಉತ್ತಮ ಹೆಸರು ಬರುತ್ತದೆ. ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ ಶುಶ್ರೂಷಕಿಯರ ಸೇವೆ ಗುರುತಿಸಿ ಅವರನ್ನು ಸನ್ಮಾನ ಮಾಡುತ್ತಿರುವುದು ಅವರಿಗೆ ಇನ್ನಷ್ಟು ಉತ್ತಮ ಸೇವೆ ಮಾಡಲು ಪ್ರೇರಣೆಯಾಗಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ನ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಜಗದೀಶ್ ಮಾತನಾಡಿ, ಶುಶ್ರೂಷಿಕಿಯರ ಸೇವೆ ಕಷ್ಟದಾಯಕವಾಗಿದ್ದು ಈ ವೃತ್ತಿಯಲ್ಲಿ ರೋಗಿಗಳ ಆರೈಕೆಗೆ ತಾಳ್ಮೆ ಬಹಳಮುಖ್ಯವಾಗಿದೆ. ನೋವನ್ನು ಹೊತ್ತು ಆಸ್ಪತ್ರೆಗೆ ಬರುವ ಪ್ರತಿಯೊಬ್ಬರಿಗೂ ಸಾಂತ್ವನ ತುಂಬುವ, ಸೇವೆಯನ್ನು ಶುಶ್ರೂಷಿಕಿಯರು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.ಕೋವಿಡ್ ಸಂದರ್ಭದಲ್ಲಿ ಶುಶ್ರೂಷಕಿಯರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದರು. ರೋಗಿಗಳ ಆರೈಕೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸಂಸ್ಥೆಯಿಂದ ಶುಶ್ರೂಷಕಿಯರನ್ನು ಸನ್ಮಾನಿಸಲಾಗುತ್ತಿದೆ. ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ ಈ ಹಿಂದೆ ಜೇಸಿ ಸಂಸ್ಥೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ 40 ವರ್ಷ ತುಂಬಿದ ನಂತರ ಹೊರ ಬಂದ ಜೇಸಿ ಸದಸ್ಯರು ಸೀನಿಯರ್ ಜೇಸಿ ಇಂಟರ್ ನ್ಯಾಶನಲ್ ಸಂಸ್ಥೆ ಸದಸ್ಯರಾಗಬಹುದು. ನರಸಿಂಹ ರಾಜಪುರ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಕಳೆದ ಒಂದು ವರ್ಷದಲ್ಲಿ 57ಕ್ಕೂ ಹೆಚ್ಚು ಸಮಾಜಮುಖಿ ಕಾರ್ಯ ಗಳನ್ನು ಮಾಡಿದೆ ಎಂದು ವಿವರಿಸಿದರು. ಅತಿಥಿಯಾಗಿದ್ದ ಅರವಳಿಕೆ ತಜ್ಞ ಡಾ.ವೀರಪ್ರಸಾದ್ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಇಲಾಖೆ ಬಗ್ಗೆ ನಕಾರಾತ್ಮಕ ಭಾವನೆಗಳು ಹೆಚ್ಚಾಗಿದ್ದು ಯಾವುದೇ ಸಂಘ, ಸಂಸ್ಥೆಗಳು ಆರೋಗ್ಯ ಇಲಾಖೆ ಸೇವೆಯನ್ನು ಗುರುತಿಸುವುದು ಅಪರೂಪ. ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಶುಶ್ರೂಷಕಿಯರ ಸೇವೆ ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.
ವಿಶ್ವ ಶುಶ್ರೂಷಕಿಯರ ದಿನಾಚರಣೆ ಅಂಗವಾಗಿ ಶುಶ್ರೂಷಕಿಯರಾದ ಕೆ.ವಿ.ಆ್ಯನಿ,ಸೂನಾಮ್ಯಾಥ್ಯೂ, ದೀಪ್ತಿ ಆಂಟೋಣಿ, ಸೌಮ್ಯ ಸ್ಕರಿಯಾ, ಬಿ.ಎಂ. ಸ್ವಾಗತ್, ಜೋಯಲ್ ಪೌಲ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ನೇತ್ರತಜ್ಞೆ ಡಾ.ಶ್ರೀರಂಜಿನಿ, ಮಕ್ಕಳ ತಜ್ಞ ವೈದ್ಯ ಡಾ.ಪ್ರಭು, ಸೀನಿಯರ್ ಚೆಂಬರ್ ಇಂಟರ್ ನ್ಯಾಷನಲ್ ನ ತಾಲೂಕು ಘಟಕದ ಕಾರ್ಯದರ್ಶಿ ಕೃಷ್ಣಮೂರ್ತಿ, ನಿಕಟಪೂರ್ವ ಅಧ್ಯಕ್ಷ ಕೆ.ಆರ್. ನಾಗರಾಜ್ ಪುರಾಣಿಕ್, ನಿಕಟಪೂರ್ವ ಕಾರ್ಯದರ್ಶಿ ವಿದ್ಯಾನಂದ್ , ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.