ಸಾರಾಂಶ
ಭಾಷಾಭಿಮಾನ ಬೆಳೆಸುವಲ್ಲಿ ಸಾಹಿತ್ಯ ಪರಿಷತ್ ಗ್ರಾಮ ಘಟಕಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕುಶಾಲನಗರ ಸಮೀಪದ ಆವರ್ತಿ ಗ್ರಾಮ ಘಟಕದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಭಾಷಾಭಿಮಾನ ಬೆಳೆಸುವಲ್ಲಿ ಸಾಹಿತ್ಯ ಪರಿಷತ್ ಗ್ರಾಮ ಘಟಕಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಕುಶಾಲನಗರ ಸಮೀಪದ ಆವರ್ತಿ ಗ್ರಾಮ ಘಟಕದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮ ಗ್ರಾಮಗಳಲ್ಲಿ ಕನ್ನಡ ಅಭಿಮಾನವನ್ನು ಮೂಡಿಸುವಲ್ಲಿ ರಾಜ್ಯೋತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ಪೂರಕವಾಗಿದೆ. ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ಕೆಲಸ ವಿದ್ಯಾವಂತರಲ್ಲಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ರಂಗಭೂಮಿ ಕಲಾವಿದ ಮುರುಗೇಶ್ ಮಾತನಾಡಿ, ಇತರೆ ಭಾಷೆಗಳ ದಾಳಿಯಿಂದಾಗಿ ಕನ್ನಡ ಸ್ವಂತ ನೆಲದಲ್ಲಿ ಸೊರಗಿ ಹೋಗುತ್ತಿದೆ. ಅಂಧಾಭಿಮಾನ ಇಲ್ಲದಿದ್ದರೂ ಕೂಡ ನಿರಭಿಮಾನಿಗಳಾಗಿ ಕನ್ನಡಿಗರು ಇರಬಾರದು. ಒಂದು ನೆಲದಲ್ಲಿ ನೂರಾರು ಸಂಸ್ಕೃತಿ ತುಂಬಿಕೊಂಡಿರುವ ಕರ್ನಾಟಕ ರಾಜ್ಯ, ನೂರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ ಎಂಬುದು ಪ್ರತಿಯೊಬ್ಬರಿಗೂ ಅರಿವಿರಬೇಕು. ಕನ್ನಡವನ್ನೇ ಬಳಸಿ ಕನ್ನಡವನ್ನೇ ಉಳಿಸಿ ಎನ್ನುವ ಮನೋಭಾವ ಪ್ರತಿಯೊಬ್ಬ ಕನ್ನಡಿಗರಲ್ಲೂ ಮೂಡಬೇಕು ಎಂದರು.ರಾಜ್ಯೋತ್ಸವದ ಅಂಗವಾಗಿ ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಸಂಸ್ಥೆ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ರೋಟರಿ ಅಧ್ಯಕ್ಷ ರಾಜೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕೊಡಗು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಂಗೋಲಿ, ಸ್ಪರ್ಧೆ ಮಡಿಕೆ ಹೊಡೆಯುವ ಸ್ಪರ್ಧೆ ಹಾಗೂ ಹಾಸ್ಯ ಕಲಾವಿದರಿಂದ ಹರಿಕಥೆ ಏರ್ಪಡಿಸಲಾಗಿತ್ತು.
ಕ.ಸಾ.ಪ. ಹೋಬಳಿ ಅಧ್ಯಕ್ಷ ಆವರ್ತಿ ಮಹಾದೇವಪ್ಪ, ಗ್ರಾಮ ಘಟಕದ ಅಧ್ಯಕ್ಷ ಎ.ಬಿ.ಶೇಖರ್, ಯಜಮಾನರಾದ ಗುರುಮೂರ್ತಿ, ಮುಖಂಡರಾದ ಎ.ಎಂ.ಧರ್ಮ, ಶಿವರುದ್ರನಾಯಕ, ದಿಲೀಪ್ ಎ.ವೈ, ಮಿಲನ ಭರತ್, ಉಮೇಶ್ ಮತ್ತಿರರಿದ್ದರು.