ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಆಧುನಿಕ ವಿಜ್ಞಾನ ಕ್ಷೇತ್ರದಲ್ಲಿ ಉಪಗ್ರಹಗಳ ಪಾತ್ರ ಪ್ರಮುಖವಾಗಿದೆ ಎಂದು ಯು.ಆರ್. ರಾವ್ ಬಾಹ್ಯಾಕಾಶ ಕೇಂದ್ರದ ಸಹ ನಿರ್ದೇಶಕ ರಾಮನಗೌಡ ವಿ. ನಾಡಗೌಡ ತಿಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಯು.ಆರ್. ರಾವ್ ಉಪಗ್ರಹ ಕೇಂದ್ರ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗ್ರಾವಿಟಿ ಸೈನ್ಸ್ ಫೌಂಡೇಶನ್ (ರಿ), ಚಾಮರಾಜನಗರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಯು.ಆರ್. ಉಪಗ್ರಹ ಕೇಂದ್ರವು ಇಸ್ರೋದ ಪ್ರಮುಖ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು ಅತೀ ಹೆಚ್ಚಿನ ಉಪಗ್ರಹಗಳನ್ನು ಉತ್ಪಾದಿಸುತ್ತದೆ. ಭೂ ವೀಕ್ಷಣೆ, ಸಂಪರ್ಕ ಸೇವೆ, ಬೆಳೆ ಸಮೀಕ್ಷೆ, ಪ್ರಕೃತಿ ವಿಕೋಪಗಳು, ದೇಶದ ಗಡಿಯಲ್ಲಿ ನಡೆಯುವ ಗೂಢಾಚಾರ ಮಾಹಿತಿಗಳನ್ನು ಪಡೆಯಲು, ಪ್ರಕೃತಿ ವಿಕೋಪಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು, ಭೂಮಿಯಲ್ಲಿ ನೀರು ಅರಣ್ಯ ಸಮೀಕ್ಷೆಗಳನ್ನು ಅಂದಾಜಿಸಲು ಉಪಗ್ರಹಗಳು ಪ್ರಮುಖವಾಗಿದೆ ಎಂದು ಹೇಳಿದರು.ಮೊದಲ ಉಪಗ್ರಹ ಸ್ಪುತ್ನಿಕ್ ಉಡಾವಣಾ ಸ್ಮರಣಾರ್ಥ ಹಾಗೂ ವಿಶ್ವ ಅಂತರಿಕ್ಷ ಒಪ್ಪಂದದ ಸ್ಮರಣಾರ್ಥವಾಗಿ ವಿಶ್ವಸಂಸ್ಥೆಯು ವಿಜ್ಞಾನಿಗಳಿಗೆ, ಜನಸಾಮಾನ್ಯರಿಗೆ, ವಿಧ್ಯಾರ್ಥಿಗಳಿಗೆ ವಿಜ್ಞಾನದ ಮೇಲಿನ ಆಸಕ್ತಿಯ ಜೊತೆಗೆ ಅರಿವು ಮೂಡಿಸಲು ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಆಯೋಜಿಸಲಾಗಿದೆ ಎಂದರು.
ಇಸ್ರೋ ಸಂಸ್ಥೆಯು ವಿಶ್ವದ ೫ ಬಲಿಷ್ಠವಾದ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿದೆ. ವಿಕ್ರಂ ಸಾರಾಬಾಯಿ ಅವರು ವಿಜ್ಞಾನ ಕ್ಷೇತ್ರ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಹಾಕಿಕೊಟ್ಟ ಬುನಾದಿ ಅವೀಸ್ಮರಣೀಯವಾಗಿದೆ. ಯೋಜನೆ ಮತ್ತು ಯೋಚಿಸಿ ಯಾವುದೇ ಕೆಲಸವನ್ನು ಸಹನೆಯಿಂದ ಮಾಡಿದರೆ ಕಾರ್ಯವು ಯಶಸ್ವಿಯಾಗುತ್ತದೆ. ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗಬಾರದು. ಆಸಕ್ತ ವಿಷಯಗಳ ಬಗ್ಗೆ ಹೆಚ್ಚು ಗ್ರಹಿಸಿ, ಒಳ್ಳೆಯ ಒಡನಾಡಿಗಳ ಜೊತೆಗೆ ಬೆರೆತು ಸಾಮೂಹಿಕ ಚಿಂತನೆಗಳಿಂದ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ಸಲಹೆ ಮಾಡಿದರು.ಬಾಹ್ಯಾಕಾಶ ಕ್ಷೇತ್ರಕ್ಕೆ ಯು.ಆರ್.ರಾವ್ ಅವರ ಕೊಡುಗೆ ಅಪಾರವಾಗಿದೆ. ಅಮೇರಿಕಾದ ಸ್ಪೇಸ್ ಎಕ್ಸ್ ನಲ್ಲಿ ರಾವ್ ಅವರ ಹೆಸರಿದ್ದು ಅವರು ಕನ್ನಡಿಗರಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು, ವಿದ್ಯಾರ್ಥಿಗಳು ಯಾವುದೇ ವಿಷಯಗಳ ಬಗ್ಗೆ ಕಲಿಯಲು ಕುತೂಹಲಿಗಳಾಗಿರಬೇಕು. ವಿಜ್ಞಾನ ವಿಷಯಗಳ ಮೇಲಾಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ತಿಳಿಯಬೇಕು. ಒಂದು ವಿಷಯದ ಮೇಲೆ ಅಧ್ಯಯನ ಮಾಡಲು ಎಲ್ಲಿ, ಏನು, ಹೇಗೆ ಎಂಬುದರ ಬಗ್ಗೆ ಆಸಕ್ತಿ ಹೊಂದಬೇಕು ಎಂದು ಹೇಳಿದರು.ಚಾಮರಾಜನಗರ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಮುಂದಿದ್ದಾರೆ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಯಾವುದೇ ಕ್ಷೇತ್ರವಿರಲಿ ಮಹಿಳೆ ಪುರುಷ ಸರಿಸಮಾನವಾಗಿ ಸಾಧನೆ ಮಾಡುವ ಎಲ್ಲಾ ಅವಕಾಶಗಳು ಇರುತ್ತವೆ. ಹೀಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಎಲ್ಲರು ಆಸಕ್ತ ಕ್ಷೇತ್ರಗಳಲ್ಲಿ ಬದ್ದತೆಯಿಂದ ತೊಡಗಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ವಿಜ್ಞಾನ ಮತ್ತು ಜೀವನ ಎರಡು ಒಂದಕ್ಕೊಂದು ಹೊಂದಿಕೊಂಡಿದ್ದು ಹಾಸುಹೊಕ್ಕಾಗಿದೆ. ವಿಜ್ಞಾನವು ಬದುಕಿನ ಗುಣಮಟ್ಟವನ್ನು ನಿರ್ಧರಿಸುತ್ತದೆ. ಉತ್ತಮ ಪ್ರತಿಭೆಗಳು ಬರಬೇಕಾದರೇ ಶಾಲಾ ಹಂತಗಳಲ್ಲಿ ಸ್ಪರ್ಧೆಗಳಾಗಬೇಕು. ಪ್ರತಿಭಾವಂತರಿಗೆ ವೇದಿಕೆ ದೊರೆಯಲು ಅನೂಕಲವಾಗುತ್ತದೆ ಎಂದರು.ಪ್ರತಿಭೆಗಳಿಗೆ ಯಾವ ಭೇದ ಭಾವವಿರುವುದಿಲ್ಲ. ಪ್ರಾಮಣಿಕತೆ, ಶ್ರದ್ದೆಯಿಂದ ಕೆಲಸ ಮಾಡಿದರೆ ಯಶಸ್ಸನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ. ವಿಜ್ಞಾನ ಮತ್ತು ಕಲೆ ಸೇರಿದರೆ ಹೊಸ ಹಿನ್ನಲೆ ಬರುತ್ತದೆ. ವಿದ್ಯಾರ್ಥಿಗಳು ಉತ್ತಮ ಆಸಕ್ತಿ ವಿಷಯಗಳ ಬಗ್ಗೆ ವಿಸ್ತಾರವಾಗಿ ತಿಳಿದುಕೊಂಡು ಸಂಬಂಧಿಸಿದ ಉನ್ನತ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆ ಮಾಡಿ ಕೀರ್ತಿ ತರಬೇಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಎನ್. ಪುಟ್ಟಗೌರಮ್ಮ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಚಂದ್ರಪಾಟೀಲ್, ಗ್ರಾವಿಟಿ ಸೈನ್ಸ್ ಫೌಂಡೇಷನ್‌ನ ಕಾರ್ಯದರ್ಶಿ ಎ.ಎಸ್. ಅಭಿಷೇಕ್, ಹಿರಿಯ ವಿಜ್ಞಾನಿ ಸಂಜೀವ್ ಕುಮಾರ್, ಇಸ್ರೋ ವಿಜ್ಞಾನಿಗಳಾದ ಪ್ರಿಯಾಂಕ, ರಾಜೇಶ್ವರಿ, ವಿಷ್ಣು ಕಿಶೋರ್ ಪೈ, ಪ್ರಸಾದ್ ಮಂಜುನಾಥ್, ವೈಜ್ಞಾನಿಕ ಅಧಿಕಾರಿಗಳಾದ ರಚನಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.