ಸಾರಾಂಶ
ಕಡೂರು ತಾಲೂಕು ಕುಳುವ ಸಮಾಜದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತ್ಯುತ್ಸವ
ಕನ್ನಡ ಪ್ರಭ ವಾರ್ತೆ, ಕಡೂರುಬಸವಣ್ಣನವರ ಅನುಭವ ಮಂಟಪದಲ್ಲಿ ಜಾತಿ ರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಕಲ್ಪನೆ ಸಾಕಾರಕ್ಕೆ ಶರಣ ಶ್ರೀ ನುಲಿಯ ಚಂದಯ್ಯನವರ ಪಾತ್ರ ಬಹು ಮುಖ್ಯವಾಗಿತ್ತು ಎಂದು ಶಾಸಕ ಕೆ.ಎಸ್. ಆನಂದ್ ಬಣ್ಣಿಸಿದರು.
ಕಡೂರು ತಾಲೂಕು ಕುಳುವ ಸಮಾಜದಿಂದ ಕಡೂರಿನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಅವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಸಮ ಸಮಾಜ ಕಟ್ಟಲು ಬಸವಣ್ಣನವರು ಕೈಜೋಡಿಸಿದ್ದರು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರೀ ಶರಣ ನುಲಿಯ ಚಂದಯ್ಯನವರ ಕೊಡುಗೆ ಬಹುದೊಡ್ಡದು. ಆ ಮಂಟಪದಲ್ಲಿ ಚಂದಯ್ಯನವರು ದಲಿತ ಎನ್ನದೆ ಬಸವಣ್ಣ ಸೇರಿದಂತೆ ಸಮಾಜದ ಸಮಾನತೆಗೆ ಹೋರಾಡಿದ ಎಲ್ಲ ಶರಣರೂ ಕೂಡ ವಿಶ್ವ ದಾರ್ಶನಿಕರಾಗಿದ್ದರು ಎಂದರು.ಅತಿ ಹೆಚ್ಚು ಶ್ರಮಪಟ್ಟು ದುಡಿಯುವ ವರ್ಗವಾದ ಈ ಕುಳುವ ಸಮಾಜದ ನಂಟು ನನಗೆ ಹಳೆಯದು. ನಾನು ಸೋತಾಗಲು ಈ ಸಮಾಜ ನನ್ನ ಪರವಾಗಿ ನಿಂತಿದೆ. ಈ ಬಾರಿಯೂ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಶಾಸಕನಾಗಲು ಕಾರಣವಾಗಿದೆ. ಕುಲಕಸುಬು ಬಿದಿರಿನ ಉತ್ಪನ್ನಗಳನ್ನು ತಯಾರಿಕೆ ಮಾಡುವ ಈ ಸಮಾಜವನ್ನು ಬೇರೆಬೇರೆ ಹೆಸರಿನಿಂದ ಕರೆಯಲಾಗುತ್ತಿದೆ. ಯಾವುದೇ ಸಮಾಜ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಕಡೂರು ತಾಲೂಕಿನಲ್ಲಿ ಈ ಸಮಾಜದವರು ಹೆಚ್ಚಿದ್ದರೂ ಸಂಘಟನೆ ಕೊರತೆಯಿಂದ ಪಂಗಡಗಳಾಗಿದ್ದು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಪಡೆಯಬಹುದು ಎಂದರು. ಸಿದ್ದರಾಮಯ್ಯನವರ ಅವಧಿಯಲ್ಲಿ ಕುಳುವ ಸಮಾಜ ಸೇರಿದಂತೆ ಕಾಂಗ್ರೆಸ್ ಪಕ್ಷ ಎಲ್ಲ ವರ್ಗಗಳಿಗೆ ಆದ್ಯತೆ ನೀಡಿದೆ. ರಾಜಕೀಯ ಪ್ರಾತಿನಿಧ್ಯತೆ ಸಿಗಲು ಈ ಸಮಾಜದ ಹೋರಾಟದಲ್ಲಿ ನಾನು ಕೂಡ ನಿಮ್ಮೊಂದಿಗೆ ಕೈಜೋಡಿಸುತ್ತೇನೆ. ಹಿಂದೆ ಈ ಕುಳುವ ಸಮಾಜದ ಮುಖಂಡರಾದ ಕಡೂರು ಸಿ ನಂಜಪ್ಪ, ಕೆ ವಿ ವಾಸು, ಕೆ ವಿ ವೆಂಕಟೇಶಪ್ಪ ಸೇರಿದಂತೆ ಅನೇಕರು ರಾಜಕಾರಣದಲ್ಲಿ ಅಧಿಕಾರ ನಡೆಸಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಮುಂದಿನ ದಿನಗಳಲ್ಲಿ ನೀವು ಶಾಸಕರಾಗುತ್ತೀರಾ ಎಂದು ವೃಷಬೇಂದ್ರ ಸ್ವಾಮೀಜಿ ನುಡಿದಿದ್ದರು ಅದರಂತೆ ಶಾಸಕನಾಗಲು ಈ ಸಮಾಜ ನನಗೆ ಹೆಚ್ಚು ಮತಗಳನ್ನು ನೀಡಿದೆ. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಗೆ ಬೇಡಿಕೆ ಇಟ್ಟಿದ್ದು ಶೀಘ್ರವೇ ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕುಳುವ ಸಮಾಜದ ಹಿರಿಯರಾದ ಕೆ.ವಿ.ವಾಸು ಸೇರಿದಂತೆ ಅನೇಕರು ಈ ಸಮಾಜ ಪರಿವರ್ತನೆ ಮಾಡಿ ಸಂಘಟನೆ ಮಾಡಿದ್ದಾರೆ. ಸಮಾಜದ ಉತ್ತಮ ಕೆಲಸಗಳಿಗೂ ತಾವು ಬೆಂಬಲ ವಾಗಿದ್ದೇವೆ. ಈಗಲೂ ಸಹ ಶಾಸಕರಿಗೆ ಸಮಾಜ ನೀಡಿರುವ ಬೇಡಿಕೆಗಳಿಗೆ ತಾವು ಅವರ ಜೊತೆಗೆ ಇದ್ದು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಹಿಂದುಳಿದ ಈ ಸಮಾಜದ ಸಮಗ್ರ ಅಭಿವೃದ್ಧಿಗೆ ಶಾಸಕ ಆನಂದ್ ಅವರೊಂದಿಗೆ ಕೈ ಜೋಡಿಸಿ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕುಳವ ಸಮಾಜದ ಕಾರ್ಯಾಧ್ಯಕ್ಷ ಟಿ.ಮೂರ್ತಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಜನಾಂಗದವರ ಕೊಡುಗೆ ಇದೆ. ನುಲಿಯ ಚಂದಯ್ಯ ಅವರ ಆದರ್ಶ ಹಾಗೂ ನಮ್ಮ ಕುಲವನ್ನು ನಾಚಿಕೆ ಪಡದೆ ಹೇಳುವುದನ್ನು ಮೊದಲು ಕಲಿಯಿರಿ ಎಂದ ಅವರು ಶಾಸಕ ಆನಂದ್ ಅವರ ಸಹಕಾರ ಈ ಸಮಾಜಗಳಿಗೆ ಬೇಕಿದೆ ಎಂದು ಕೋರಿದರು.ಶರಣ ನುಲಿಯ ಚಂದಯ್ಯನವರ ವೇಷಧಾರಿ ಬ್ಯಾಗಡೇಹಳ್ಳಿ ಬಸವರಾಜ್ ಜನರ ಗಮನ ಸೆಳೆದರು. ಸಮಾಜದ ಪ್ರತಿಭಾವಂತ ಮಕ್ಕಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತುಕುಳುವ ಸಮಾಜದ ಗುರುಪೀಠ ತರೀಕೆರೆ ನಂದಿ ಮಠದ ಶ್ರೀ ವೃಷಭೇಂದ್ರ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲೂಕು ಕುಳುವ ಸಮಾಜದ ಅಧ್ಯಕ್ಷ ಎ.ಜಿ.ಗಿರೀಶ್ , ರಾಜ್ಯ ಕೊರವ ಸಮಾಜದ ಅಧ್ಯಕ್ಷ ಜಿ.ಮಾದೇಶ್,ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ಮುಖಂಡ ಸಾಣೇಹಳ್ಳಿ ಆರಾಧ್ಯ, ಸಮಾಜದ ಮುಖಂಡರಾದ ಕೆ.ವಿ. ವಾಸು, ವೆಂಕಟೇಶಪ್ಪ, ಟಿ.ಗೋವಿಂದಸ್ವಾಮಿ, ನಾಗರಾಜ್, ಕೆ.ವಿ.ಮಂಜುನಾಥ್, ಸಿ.ಎಚ್.ಮೂರ್ತಿ, ಮಂಜುನಾಥ್, ವಕೀಲ ಶ್ರೀನಿವಾಸ್, ಭರತ್ ಹಾಗೂ ಸಮಾಜದ ಬಂಧುಗಳು ಇದ್ದರು.
12ಕೆಕೆಡಿಯು1..ಕಡೂರು ತಾಲೂಕು ಕುಳುವ ಸಮಾಜದಿಂದ ಕಡೂರಿನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಅವರ ಜಯಂತ್ಯುತ್ಸವವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ಸಮಾಜದ ಮುಖಂಡರು ಮತ್ತು ಶ್ರೀಗಳು ಇದ್ದರು.