ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ತಾಲೂಕಿನ ಸಿ.ಬಿ.ಹುಂಡಿ ಕ್ಲಸ್ಟರ್ ವ್ಯಾಪ್ತಿಯ ಚಂದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಚಿತವಾಗಿ ಶಾಲಾ ಬ್ಯಾಗ್, ಸ್ಮಾರ್ಟ್‌ಟಿವಿ, ರ್ಯಾಕ್, ಗ್ಲೋಬ್ ನೀಡಲಾಯಿತು.ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಜನಸ್ಪಂದನ ಟ್ರಸ್ಟ್ ವತಿಯಿಂದ ಉಚಿತ ಶಾಲಾ ಬ್ಯಾಗ್, ಸ್ಮಾರ್ಟ್ ಟಿ.ವಿ, ಕಬ್ಬಿಣದ ರ್ಯಾಕ್, ವಿಶ್ವ ಭೂಪಟ ವಿತರಿಸಲಾಯಿತು. ಕಳೆದ ಸಾಲಿನಲ್ಲಿ ಜನಸ್ಪಂದನ ಟ್ರಸ್ಟ್ ವತಿಯಿಂದ ಶಾಲಾ ಬ್ಯಾಂಡ್ ಸೆಟ್, ಧ್ವನಿವರ್ಧಕ ವಿತರಿಸಲಾಗಿತ್ತು.
ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಮಧುರಾದಾಸ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ, ಶಿಕ್ಷಕರು ಒಂದೆಡೆ ಶ್ರಮಿಸಿದರೆ ಮತ್ತೊಂದೆಡೆ ಪೋಷಕರು, ಗ್ರಾಮಸ್ಥರು, ದಾನಿಗಳ ಪಾತ್ರವೂ ಅತೀ ಮುಖ್ಯ. ಆ ನಿಟ್ಟಿನಲ್ಲಿ ದಾನಿಗಳು ಮೈಸೂರು ನಗರದವರಾದರೂ ಜಿಲ್ಲೆಯ ಗ್ರಾಮೀಣ ಭಾಗವಾದ ಚಂದಹಳ್ಳಿ ಶಾಲೆಯ ಮಕ್ಕಳಿಗೆ ಇಷ್ಟೊಂದು ಮೂಲಭೂತ ಪರಿಕರಗಳನ್ನು ವಿತರಿಸುತ್ತಿರುವುದು ಗ್ರಾಮೀಣ ವಿದ್ಯಾರ್ಥಿಗಳ ಮೇಲಿನ ಅವರ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಇತರ ಶಾಲೆಗಳಿಗಿಂತ ಹೆಚ್ಚು ಪರಿಣಿತಿ ಹೊಂದಿರುವ ನುರಿತ ಶಿಕ್ಷಕರು ಇದ್ದಾರೆ. ಆದರೆ ಪೋಷಕರು ಪ್ರತಿಷ್ಠೆಯ ಪ್ರಶ್ನೆಗಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳು ಇಂದು ಅತ್ಯುತ್ತಮ ಸಾಧನೆ ಮಾಡಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕುತ್ತಿದ್ದಾರೆ. ಸರ್ಕಾರ, ಶಿಕ್ಷಕರು ಜೊತೆಗೂಡಿ ಇಂತಹ ಸಮಾಜಮುಖಿ ಸಂಘಟನೆಗಳು, ನಿಸ್ವಾರ್ಥ ಸಮಾಜ ಸೇವಕರು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಇಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿರುವುದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದಂತಾಗುತ್ತದೆ ಎಂದರು.
ಸಮಾಜದಲ್ಲಿ ಉಳ್ಳವರು ಬಹಳಷ್ಟು ಜನ ಇದ್ದಾರೆ. ಆದರೆ ಎಲ್ಲರಲ್ಲೂ ಸೇವಾ ಮನೋಭಾವ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ರೂಪಿಸುವ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜನಸ್ಪಂದನ ಟ್ರಸ್ಟ್ ಮತ್ತು ನಿಸ್ವಾರ್ಥ ಸಮಾಜ ಸೇವಕರಿಗೆ ಅಭಿನಂದನೆ ಸಲ್ಲಿಸಿದರು.ಈ ವೇಳೆ ಸಮಾಜ ಸೇವಕ ಅಶೋಕಪುರಂನ ಜೋಗಿ ಮಹೇಶ್, ರಮೇಶ್, ಮಂಜುನಾಥ್, ಹರವೆ ಸಿದ್ದು, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಮಧುರದಾಸ್, ನಿವೃತ್ತ ಎಂಜಿನಿಯರ್ ನಾಗರಾಜು, ಪಾಳ್ಯ ಗಿರೀಶ್, ನಿವೃತ್ತ ಮುಖ್ಯ ಶಿಕ್ಷಕ ಎಂ. ಕೊಂಗಯ್ಯ, ಶಾಲೆಯ ಮುಖ್ಯಶಿಕ್ಷಕ ಎಂ.ಎನ್. ಸೂರ್ಯಕುಮಾರ್, ಜಯರಾಮ್, ಎಸ್. ಜ್ಯೋತಿ, ಗೀತಾ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಾದಲಾಂಬಿಕೆ, ಉಪಾಧ್ಯಕ್ಷ ನಂಜಯ್ಯ ಮೊದಲಾದವರು ಇದ್ದರು.